ಕಲಬುರಗಿ| ಬೆಳೆ ವಿಮೆ ಮಧ್ಯಂತರ ಪರಿಹಾರ: 375 ಕೋಟಿ ರೂ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ: ಇಕ್ರಮ್ ಶರೀಫ್

Date:

ಕಲಬುರಗಿ: ಪ್ರಸಕ್ತ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟು ಬರಗಾಲ ಆವರಿಸಿ ಬಿತ್ತಿದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಇಳುವರಿಯಲ್ಲಿ ಗಣನೀಯ ಪ್ರಮಾಣದ ಕುಸಿತ ಉಂಟಾಗಿರುವ ಹಿನ್ನಲೆಯಲ್ಲಿ ರೈತರಿಗೆ ಉಂಟಾಗಿರುವ ಆರ್ಥಿಕ ನಷ್ಟವನ್ನು ತಗ್ಗಿಸುವ ಹಾಗೂ ಸಕಾಲದಲ್ಲಿ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಗೆ 375 ಕೋಟಿಗೂ ಅಧಿಕ ಮೊತ್ತದ ಬೆಳೆ ವಿಮೆ ಪರಿಹಾರ ಅನುದಾನವನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಸಮಗ್ರ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ತೀವ್ರ ಮಳೆ ಕೊರತೆ ಉಂಟಾಗಿ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿರುತ್ತದೆ. ಸರ್ಕಾರವು ಜಿಲ್ಲೆಯ ಎಲ್ಲಾ 11 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಈಗಾಗಲೆ ಅಧಿಕೃತವಾಗಿ ಘೋಷಿಸಿದ್ದು, ಜಿಲ್ಲೆಯ ಪ್ರಮುಖ ಬೆಳೆಗಳಾದ ಹೆಸರು, ಉದ್ದು, ಸೋಯಾಅವರೆ, ತೊಗರಿ, ಹತ್ತಿ ಸೇರಿದಂತೆ ಇತರೆ ಬೆಳೆಗಳ ಮಳೆ ಕೊರತೆಯಿಂದ ಉಂಟಾದ ಹಾನಿ ಹಾಗೂ ಬೆಳೆಗಳ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಗಣಿಸಿ ಬೆಳೆ ವಿಮೆ ಯೋಜನೆಯಡಿ ರೈತರಿಗೆ ಪರಿಹಾರ ಕಲ್ಪಿಸಲು ಮಧ್ಯಂತರ ಬೆಳೆ ವಿಮೆ ಪರಿಹಾರ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ವಿಮಾ ಸಂಸ್ಥೆಯಾದ ಇಂಡಸ್‌ ಇಂಡ್ ಜನರಲ್ ಇನ್ಶೂರೆನ್ಸ್ ಕಂಪನಿ ಸಹ ಪ್ರಸ್ತಾವನೆಗೆ ತನ್ನ ಸಮ್ಮತಿ ಸೂಚಿಸಿದೆ ಎಂದಿದ್ದಾರೆ.

 

ಬೆಳೆ ವಿಮೆ ಮಧ್ಯಂತರ ಪರಿಹಾರ ಪ್ರಸ್ತಾವನೆಗೆ ಸರ್ಕಾರದಿಂದ ಅನುಮೋದನೆ ದೊರೆತು ಪರಿಹಾರ ಮಂಜೂರಾದಲ್ಲಿ, ರೈತರು ತಮ್ಮ ವಂತಿಕೆಯಾಗಿ ಪಾವತಿಸಿರುವ 67.82 ಕೋಟಿ ರೂ. ಪ್ರೀಮಿಯಂ ಮೊತ್ತಕ್ಕೆ ಎದುರಾಗಿ ಸುಮಾರು 6 ಪಟ್ಟು ಹೆಚ್ಚು ಅಂದರೆ 375 ಕೋಟಿ ರೂ. ಗಳಿಗೂ ಅಧಿಕ ಮೊತ್ತದ ಮಧ್ಯಂತರ ಬೆಳೆ ವಿಮೆ ಪರಿಹಾರವನ್ನು ಜಿಲ್ಲೆಯ ಅರ್ಹ ರೈತರು ಪಡೆಯುವ ನಿರೀಕ್ಷೆಯಿದೆ. ಇದರಿಂದ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಗಣನೀಯ ಪ್ರಮಾಣದ ಆರ್ಥಿಕ ನೆರವು ದೊರೆಯಲಿದ್ದು, ಮುಂದಿನ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದು ಆಶಾಭಾವನೆ ಹೊಂದಲಾಗಿದೆ.

 

ಬೆಳೆ ವಿಮೆ ನೋಂದಣಿಯಲ್ಲಿ ಕಲಬುರಗಿ ನಂಬರ್-1:

 

ಮುಂಗಾರು ಹಂಗಾಮಿನಲ್ಲಿ ರೈತರ ಬೆಳೆಗಳಿಗೆ ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇತರೆ ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರಕ್ಷಣೆ ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. 2026-27ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4,52,609 ರೈತರು 5,35,820.48 ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಣಿ ಮಾಡಿಸಿ 67.82 ಕೋಟಿ ಪ್ರೀಮಿಯಂ ಮೊತ್ತವನ್ನು ಪಾವತಿಸಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿ -ಸಿಬ್ಬಂದಿಗಳ ನಿರಂತರ ಪ್ರಯತ್ನ ಮತ್ತು ಜಾಗೃತಿಯಿಂದ ಇದು ಸಾಧ್ಯವಾಗಿದೆ. ರಾಜ್ಯದಲ್ಲಿಯೇ ಬೆಳೆ ವಿಮೆ ನೋಂದಣಿಯಲ್ಲಿ ಕಲಬುರಗಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ ಎಂದು ಡಿ.ಸಿ. ಇಕ್ರಮ್ ಶರೀಫ್ ತಿಳಿಸಿದ್ದಾರೆ.

 

*ಹಿಂಗಾರು ಬೆಳೆ ವಿಮೆ ನೋಂದಣಿಗೆ ನವೆಂಬರ್ 30 ಕೊನೆ ದಿನ:*

 

ಪ್ರಸಕ್ತ 2026-27ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಬೆಳೆದಿರುವ ಬೆಳೆಗಳಾದ ಕಡಲೆ, ಜೋಳ, ಗೋಧಿ, ಕುಸುಬೆ, ಹಾಗೂ ಇತರೆ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೊಂದಾಯಿಸಲು ಇದೇ ನವೆಂಬರ್ 30 ಕೊನೆಯ ದಿನಾಂಕವಾಗಿದ್ದು, ರೈತರು ಕೊನೆಯ ದಿನಾಂಕದ ವರೆಗೂ ಕಾಯದೆ ತಮ್ಮ ಹತ್ತಿರದ ಬ್ಯಾಂಕ್, ಗ್ರಾಮ್-ಒನ್ ಅಥವಾ ಸಿ.ಎಸ್.ಸಿ ಕೆಂದ್ರಗಳಲ್ಲಿ ನೊಂದಣಿ ಮಾಡಿಸಬಹುದಾಗಿದೆ. ಇನ್ನು ಬೆಳೆ ಸಾಲ ಇರುವ ರೈತರು ತಮ್ಮ ಬೆಳೆ ಸಾಲ ಹೊಂದಿರುವ ಬ್ಯಾಂಕ್‌ಗೆ ಸಂಪರ್ಕಿಸಿ ನೊಂದಣಿ ಮಾಡಿಸಿಕೊಳ್ಲುವಂತೆ ಡಿ.ಸಿ. ಇಕ್ರಮ್ ಶರೀಫ್ ರೈತರಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_img

Popular

More like this
Related

ಕಲಬುರಗಿ| ಬೆಂಬಲ ಬೆಲೆ ಯೋಜನೆಯಡಿ ಉದ್ದಿನ ಕಾಳು ಖರೀದಿಗೆ ನಿರ್ಧಾರ: ಡಿ.ಸಿ ಮಾಹಿತಿ

ಕಲಬುರಗಿ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು...

ಕಲಬುರಗಿ| ರಕ್ತದಾನ ಉದಾತ್ತ ಸೇವೆ, ಇದಕ್ಕಿಂತ ದೊಡ್ಡ ದಾನವಿಲ್ಲ: ರಾಹುಲ್‌ ಸಂಕನೂರ್

ಕಲಬುರಗಿ: ಅಪಘಾತ, ಶಸ್ತ್ರಚಿಕಿತ್ಸೆ ಅಥವಾ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತದ ಅವಶ್ಯಕತೆ...

ಕಲಬುರಗಿ| ಟಿಕೆಟ್ ಇಲ್ಲದೆ ಪ್ರಯಾಣಿಸಿದವರಿಂದ 10.14 ಲಕ್ಷ ರೂ. ದಂಡ ವಸೂಲಿ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್‌ಟಿಸಿ) ತನಿಖಾ ತಂಡಗಳು...