ಕಲಬುರಗಿ: ಪ್ರಸಕ್ತ 2026-27ನೇ ಸಾಲಿನ ಬರ ಪರಿಹಾರ (ಇನ್ಪುಟ್ ಸಬ್ಸಿಡಿ) ವಿತರಣೆಯ 1,69,989 ರೈತರಿಗೆ 42,49,72,500 ರೂ. ಮೊತ್ತವನ್ನು ದಿನಾಂಕ 22.11.2026 ರಂದು ಡಿ.ಬಿ.ಟಿ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಬರ ಪರಿಹಾರ (ಇನ್ಪುಟ್ ಸಬ್ಸಿಡಿ) ವಿತರಣೆಯ ಮೊದಲನೇ ಹಂತದ ಹಸಿರು ಪಟ್ಟಿಯಲ್ಲಿ ಅರ್ಹತೆ ಪಡೆದ ರೈತರ ಪಟ್ಟಿಯನ್ನು ಎಲ್ಲಾ ಸಂಬಂಧಪಟ್ಟ ತಹಶೀಲ್ದಾರರಿಂದ ಪರಿಶೀಲನೆಗೊಳಪಡಿಸಿ ಅರ್ಹ ರೈತರಿಗೆ ಮೊದಲನೇ ಹಂತದಲ್ಲಿ ತಲಾ 2,500 ರೂ. ಗಳಂತೆ ಬರ ಪರಿಹಾರ ಮೊತ್ತವನ್ನು ಜಮೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಇದೀಗ ಸರ್ಕಾರ ಅನುಮೋದನೆ ನೀಡಿದ್ದರಿಂದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಇನ್ನು ಮೊದಲನೇ ಹಂತದಲ್ಲಿ ಪರಿಹಾರ ವಿತರಣೆಗೆ ಬಾಕಿ ಉಳಿದಿರುವ ಇತರೆ ಅರ್ಹ ರೈತರ ಮಾಹಿತಿಯನ್ನು ಎರಡನೇ ಹಂತದಲ್ಲಿ ಪರಿಹಾರ ವಿತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. FID ಹೊಂದಿರುವ ಉಳಿದ ಎಲ್ಲಾ ಅರ್ಹ ರೈತರಿಗೆ ಅಗತ್ಯ ಪರಿಶೀಲನೆ ಹಾಗೂ ಸರ್ಕಾರದ ಅನುಮೋದನೆಯ ನಂತರ ಶೀಘ್ರದಲ್ಲಿಯೇ ಬರ ಪರಿಹಾರ ಮೊತ್ತವನ್ನು ಜಮೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


