ಕಲಬುರಗಿ: ಬೆಂಗಳೂರಿನ ಆಚೆಗೂ ಐಟಿ-ಬಿಟಿ ಹಾಗೂ ನವೋದ್ಯಮ ವಲಯವನ್ನು ವಿಸ್ತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಲೀಪ್’ (LEAP) ಯೋಜನೆಯಡಿ, ಕಲಬುರಗಿಯನ್ನು ಪ್ರಾದೇಶಿಕ ಸ್ಟಾರ್ಟ್‌ಅಪ್‌ಗಳ ಪ್ರಮುಖ ತಾಣವಾಗಿ ರೂಪಿಸಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ಕೃಷಿಕಲ್ಪ ಫೌಂಡೇಶನ್ ಮೂಲಕ ಗ್ರಾಮೀಣ ನಾವೀನ್ಯತೆ ಮತ್ತು ಕೃಷಿ ಸ್ಟಾರ್ಟ್‌ಅಪ್‌ಗಳಿಗಾಗಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಪ್ರಾರಂಭಿಸಲಾಗಿದ್ದು, ಈ ಯೋಜನೆಗೆ ಸುಮಾರು 12 ರಿಂದ 12.5 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹೇಳಿದರು.
ಗುರುವಾರ ನಗರದ ಗಾಜಿಪುರ ಚಕ್ಕರ ಕಟ್ಟಾ , ಸಿಟಿ ಸೆಂಟರ್ ಮಾಲ್ ಸಮೀಪ, ಬ್ಯಾಂಕ್ ಆಫ್ ಮಹಾರಾಷ್ಟ್ರ ಮುಂಭಾಗದಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಅಗ್ರಿ ಅಲೈಡ್ & ರೂರಲ್ ಫೋಕಸ್ಡ ಸ್ಟಾರ್ಟಪ್ಸ್ ಕಚೇರಿಯಲ್ಲಿ ಲೀಪ್ ಕಾರ್ಯಕ್ರಮಡಿಯಲ್ಲಿ ಕೃಷಿಕಲ್ಪ ಫೌಂಡೇಶನ್ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಸೆಂಟರ್ ಆಫ್ ಎಕ್ಸಲೆನ್ಸ್ ಇಂಕ್ಯೂಬೇಷನ್ ಸೆಂಟರ್ ಉದ್ಘಾಟನೆ ಮತ್ತು ಸ್ಟಾರ್ಟಪ್ ಡೈಲಾಗ್-2026ರ ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿ ಮಾತನಾಡಿದ ಅವರು, ನವೋದ್ಯಮಗಳಿಗೆ ಸೂಕ್ತ ಮೆಂಟರ್‌ಶಿಪ್, ನೆಟ್‌ವರ್ಕಿಂಗ್ ಹಾಗೂ ಬಂಡವಾಳ ಸಂಗ್ರಹಣೆಗೆ ಅಗತ್ಯ ನೆರವು ನೀಡುವುದರ ಜೊತೆಗೆ, ಹೈಕೋರ್ಟ್ ಸಮೀಪ ಅತ್ಯಾಧುನಿಕ ಕೋ-ವರ್ಕಿಂಗ್ ಸ್ಪೇಸ್ ಒದಗಿಸುವ ‘ಲೀಪ್ ಲ್ಯಾಬ್ಸ್’ ಹಾಗೂ ನಗರದ ಸಮೀಪವೇ ಸುಸಜ್ಜಿತ ಐಟಿ ಪಾರ್ಕ್ ನಿರ್ಮಿಸಲು ಸರ್ಕಾರ ಮುಂದಾಗಿದೆ ಎಂದರು.
ಕೃಷಿಕಲ್ಪ ಫೌಂಡೇಶನ್ ಸಿ.ಇ.ಒ ರಾದ ಸಿ.ಎಂ. ಪಾಟೀಲ ಅವರು ಮಾತನಾಡಿ, ಕೃಷಿಕಲ್ಪ ಫೌಂಡೇಶನ್ ವತಿಯಿಂದ ನವೆಂಬರ್ 14 ರಂದು ಕಲಬುರಗಿ ನಗರದ ಹೃದಯಭಾಗದಲ್ಲಿ ಈಂಕ್ಯೂಬೇಷನ್ ಸೆಂಟರ್ಸ ನ ನೂತನ ಕಚೇರಿ ಆವರಣವನ್ನು ಉದ್ಘಾಟಿಸಲಾಗುತ್ತಿದೆ. ಇದರ ಅಂಗವಾಗಿ ಬೆಂಗಳೂರಿನಾಚೆಗೆ ಉದ್ಯಮಶೀಲತೆಯ ಹೊಸ ಸಾಧ್ಯತೆಗಳು, ಕಲ್ಯಾಣ ಕರ್ನಾಟಕದ ಉದ್ಯಮಶೀಲ ಸಾಮರ್ಥ್ಯ ಅನಾವರಣ ಎಂಬ ವಿಷಯ ವಸ್ತುವಿನಡಿ ಮೊದಲ ಬಾರಿಗೆ ‘ಕಲ್ಯಾಣ ಕರ್ನಾಟಕ ಸ್ಟಾರ್ಟ್‌ಅಪ್ ಸಂವಾದ – 2026’ ಆಯೋಜಿಸಲಾಗಿದೆ. ಬೆಳಗ್ಗೆ 9:30 ರಿಂದ ಸಂಜೆ 6:00 ಗಂಟೆಯವರೆಗೆ ಕಲಬುರಗಿಯ ಕೃಷಿಕಲ್ಪ ಫೌಂಡೇಶನ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಾದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರದ 300ಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್‌ಅಪ್‌ಗಳು, ಉದ್ಯಮಿಗಳು, ಏಂಜಲ್ ಹೂಡಿಕೆದಾರರು, ವೆಂಚರ್ ಕ್ಯಾಪಿಟಲಿಸ್ಟ್‌ಗಳು, ಕೈಗಾರಿಕಾ ವಲಯದ ನಾಯಕರು ಹಾಗೂ ನೀತಿ ನಿರೂಪಕರು ಈ ವೇದಿಕೆಯಲ್ಲಿ ಒಗ್ಗೂಡಲಿದ್ದಾರೆ. ಅಲ್ಲದೆ, ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಸರ್ಕಾರಿ ಇಲಾಖೆಗಳ ನೈಜ ಸಮಸ್ಯೆಗಳಿಗೆ ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳುವ ವಿಶೇಷ ಸಾಲ್ವಥಾನ್ ಉಪಕ್ರಮವನ್ನೂ ಹಮ್ಮಿಕೊಳ್ಳಲಾಗಿದ್ದು, ಇದರ ಮೂಲಕ ವಿದ್ಯಾರ್ಥಿಗಳು ತಮ್ಮ ಕೌಶಲ ಬಳಸಿ ಪ್ರಾಯೋಗಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಗ್‌ಬಾಸ್ಕೆಟ್‌ನ ವಿಪುಲ್ ಮಿತ್ತಲ್, ದೇಹಾತ್‌ನ ಆದರ್ಶ್ ಶ್ರೀವಾಸ್ತವ, ಬಿಗ್‌ಹಾಟ್‌ನ ಸಚಿನ್ ನಂದವಾನಾ, ಸಿ-ಕ್ಯಾಂಪ್ ನಿರ್ದೇಶಕ ಡಾ. ತಸ್ಲೀಮ್ ಹಾಗೂ ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಸೇರಿದಂತೆ ದೇಶದ ಪ್ರಮುಖ ಉದ್ಯಮ ನಾಯಕರು ಭಾಗವಹಿಸಲಿದ್ದಾರೆ. ಯುವಜನರು ಉದ್ಯೋಗಕ್ಕಾಗಿ ಮಹಾನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಯಶಸ್ವಿ ಉದ್ಯಮಗಳನ್ನು ಕಟ್ಟಲು ಪೂರಕ ಪರಿಸರ ನಿರ್ಮಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.


