ಕಲಬುರಗಿ: ಪ್ರಬುದ್ಧ ಸಮಾಜ ನಿರ್ಮಾಣವಾಗಬೇಕಾದರೆ ಆರ್ ಎಸ್ ಎಸ್ ಹಾಗೂ ಮನುವಾದಿ ಸಿದ್ದಾಂತಗಳಿಂದ ದೂರುವಿರುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಯುವಕರಿಗೆ ಕರೆ ನೀಡಿದರು.
ನಗರದ ಘಾಟ್ಗೆ ಲೇಔಟ್ ನಲ್ಲಿ ನಿರ್ಮಾಣವಾಗಿರುವ ಪ್ರಬುದ್ಧ ಬುದ್ಧ ವಿಹಾರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸಂವಿಧಾನಕ್ಕೆ ಗೌರವ ನೀಡದ ಆರ್ ಎಸ್ ಎಸ್ ಹಾಗೂ ಮನುವಾದದ ಸಿದ್ದಾಂತದಿಂದ ನೀವು ದೂರವಿರಬೇಕು ಎಂದು ಒತ್ತಿ ಹೇಳಿದ ಸಚಿವರು, ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಕೊನೆಯ ಭಾಷಣದಲ್ಲಿ ಹೇಳಿರುವಂತೆ ಅವರ ಮಾತುಗಳನ್ನು ಅಕ್ಷರಶಃ ಪಾಲಿಸಬೇಕು ಅಂದಾಗ ಮಾತ್ರ ಪ್ರಬುದ್ಧ ಸಮಾಜ ನಿರ್ಮಾಣವಾಗಲಿದೆ ಎಂದರು.
ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿದ್ದಾರೆ, ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾಡಿಕೊಂಡು ಆರಾಮಾಗಿದ್ದಾರೆ. ಆದರೆ, ಹಿಂದುಳಿದವರ, ಬಡವರ ಹಾಗೂ ಆದಿವಾಸಿಗಳ ಮಕ್ಕಳು ಮಾತ್ರ ಧ್ವಜ ಹಿಡಿದುಕೊಂಡು ಓಡಾಡಬೇಕು. ಇವರು ಮಾತ್ರಧರ್ಮದ ಹೆಸರಲ್ಲಿ ಹೊಡೆದಾಟ ಮಾಡಿಕೊಂಡು ಜೈಲಿಗೆ ಹೋಗಬೇಕಾ ? ಎಂದು ಪ್ರಶ್ನಿಸಿ, ಈಗ ನಾವು ನಮ್ಮ ಮಕ್ಕಳನ್ನು ಪ್ರಬುದ್ಧ ಅಕಾಡೆಮಿಗೆ ಕಳಿಸೋಣ, ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಆರ್ ಎಸ್ ಎಸ್ ಶಾಖೆಗೆ ಬೇಕಿದ್ದರೆ ಕಳಿಸಲಿ ಎಂದರು.
ಆರ್ ಎಸ್ ಎಸ್ ಸಿದ್ದಾಂತ ಚೆನ್ನಾಗಿದ್ದರೆ, ಬಿಜೆಪಿ ಆರ್ ಎಸ್ ಎಸ್ ನಾಯಕರ ಮಕ್ಕಳು ಯಾಕೆ ಗೋಮೂತ್ರ ಕುಡಿಯಲ್ಲ? ಇದು ಯಾವ ನ್ಯಾಯ. ಇಂತಹ ಒಳಸಂಚುಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಾನು ಇಂತಹ ಸಿದ್ದಾಂತಗಳನ್ನು ಧೈರ್ಯವಾಗಿ ಎದುರಿಸಿದ್ದೇನೆ ಹಾಗೂ ಪ್ರಶ್ನಿಸಿದ್ದೇನೆ. ಹಾಗಾಗಿ ನನಗೆ ದಿನಕ್ಕೆ ಕನಿಷ್ಠ 300 ಬೆದರಿಕೆ ಕರೆಗಳು ಬಂದಿವೆ. ಹಾಗೆ ನನಗೆ ಬೆದರಿಕೆ ಹಾಕಿದ ವ್ಯಕ್ತಿ ಈಗಲೂ ಜೈಲಿನಲ್ಲಿ ಇದ್ದಾನೆ. ಅವನ ಪರವಾಗಿ ಒಬ್ಬ ವಕೀಲರನ್ನು ಕೂಡಾ ಆರ್ ಎಸ್ ಎಸ್ ನೇಮಿಸಿಲ್ಲ. ಆತನ ತಾಯಿ ನನಗೆ ಕರೆ ಮಾಡಿ, ತಮ್ಮ ಮಗ ಯಾಕೆ ಹಾಗೆ ಮಾಡಿದನೋ ಗೊತ್ತಾಗುತ್ತಿಲ್ಲ ಎಂದರು ಎಂದು ಖರ್ಗೆ ಹೇಳಿದರು.
ಚಿತ್ತಾಪುರ ಆರ್ ಎಸ್ ಎಸ್ ಪಥಸಂಚಲನ ವಿಚಾರದಲ್ಲಿ ನಡೆದ ಪ್ರಕ್ರಿಯೆಗಳನ್ನು ನೆನಪಿಸಿಕೊಂಡ ಪ್ರಿಯಾಂಕ್ ಖರ್ಗೆ, ಅವರು ಪಥಸಂಚಲನ ಮಾಡಲು ಪೊಲೀಸರಿಗೆ ಮಾಹಿತಿ ಒದಗಿಸುತ್ತಿದ್ದರು. ನಾನು ಅದನ್ನು ಪ್ರಶ್ನಿಸಿದ್ದೆ ಆಗ ಅವರು ಕೋರ್ಟ್ ಗೆ ಹೋದರು. ಅಲ್ಲಿ ಎರಡು ತಿಂಗಳು ಸಮಯ ತೆಗೆದುಕೊಂಡಿತು. ಆ ನಂತರ ಪೊಲೀಸರ ಅನಮತಿ ಪಡೆದುಕೊಂಡರು. ಮೊದಲು ಮಾಹಿತಿ ನೀಡುತ್ತಿದ್ದವರು ನಂತರ ಅನುಮತಿ ಪಡೆದುಕೊಳ್ಳಲೇಬೇಕಾಯಿತು. ಇದು ಸಂವಿಧಾನದ ಶಕ್ತಿ ಎಂದರು.
ಬೌದ್ಧ ಧರ್ಮದಲ್ಲಿ ಸಮಾನತೆ ಇದೆ, ಗೌರವವಿದೆ, ಸ್ವಾಭಿಮಾನದಿಂದ ಜೀವಿಸಬಹುದಾಗಿದೆ.ಇದೆಲ್ಲವನ್ನು ಮನಗಂಡು ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌಧ್ಧ ಧರ್ಮ ಸ್ವೀಕಾರ ಮಾಡಿದ್ದರು ಅವರೊಂದಿಗೆ 5 ಲಕ್ಷ ಜನ ಬೌದ್ದ ಧರ್ಮ ಸ್ವೀಕಾರ ಮಾಡಿದರು ಎಂದು ನೆನಪಿಸಿಕೊಂಡರು.
ನಮಗೆ ಸಂವಿಧಾನವೇ ಮುಖ್ಯವಾಗಬೇಕು. ಸಂವಿಧಾನದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ತತ್ವ ಸಿದ್ದಾಂತಗಳಿವೆ. ಸಂವಿಧಾನ ಇಲ್ಲದೇ ಹೋಗಿದ್ದರೆ ನಾವು ನಿಮ್ಮ ಮುಂದೆ ನಿಂತು ಮಾತನಾಡುತ್ತಿರಲಿಲ್ಲ. ಡಾ ಅಂಬೇಡ್ಕರ್ ಅವರ ವಿಚಾರಗಳನ್ನು ನಾವು ನೀವೆಲ್ಲ ಓದಬೇಕು. ಅವರ ಬರಹಗಳು ಈಗಲೂ ನಮಗೆ ಪ್ರಸ್ತುತವಾಗಿವೆ. ನಮ್ಮ ಭಾರತ ಪ್ರಬುದ್ಧ ಭಾರತ ಆಗಬೇಕೆಂದರೆ ಬಾಬಾಸಾಹೇಬರ ವಿಚಾರಗಳು ನಮಗೆ ಅನಿವಾರ್ಯವಾಗಬೇಕು. ನಗರದ ವಿವಿಧ ಕಡೆ ಪ್ರಬುದ್ಧ ಬುದ್ಧವಿಹಾರ ನಿರ್ಮಾಣ ಮಾಡುವ ಮೂಲಕ ಬುದ್ದ ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಬಿತ್ತರಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಇದೇ ಸಂದರ್ಭದಲ್ಲಿ ಬೌದ್ಧ ಧರ್ಮ ಗುರುಗಳು ದಮ್ಮ ಸಂದೇಶ ಸಾರಿದರು.
ವೇದಿಕೆಯ ಮೇಲೆ ಬೌಧ್ಧ ಧರ್ಮಗುರುಗಳು ಹಾಗೂಇತರರು ಇದ್ದರು.


