ಕಲಬುರಗಿ| ಚಂದ್ರಂಪಳ್ಳಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ರೈತರ ಮನವಿ

Date:

Share post:

ಕಲಬುರಗಿ: ಚಂದ್ರಂಪಳ್ಳಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ಸುಮಾರು ಒಂದು ತಿಂಗಳ ಕಾಲ ಹರಿಸಿ ರೈತರ ಬೆಳೆಗಳನ್ನು ಉಳಿಸುವುದರ ಜೊತೆಗೆ ಜಾನುವಾರು, ಪಶು–ಪಕ್ಷಿಗಳು ಹಾಗೂ ವನ್ಯಜೀವಿಗಳಿಗೆ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕನಾಗ್ ಎಸ್. ಪುಣ್ಯಶೆಟ್ಟಿ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯವು ಪ್ರಸಕ್ತ ಮಳೆಗಾಲದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಶೇ 80ರಿಂದ 90ರಷ್ಟು ಭರ್ತಿಯಾಗಿದೆ. ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿದ್ದರೂ, ಜಲಾಶಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಎರಡು–ಮೂರು ತಿಂಗಳಿಂದ ಸಮರ್ಪಕ ಮಳೆಯಾಗದ ಕಾರಣ ರೈತರ ಬೆಳೆಗಳು ಒಣಗುವ ಹಂತ ತಲುಪಿವೆ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಐನೋಳ್ಳಿ, ಚಂದ್ರಂಪಳ್ಳಿ, ಕೊಳ್ಳೂರು, ಫತ್ತೇಪುರ, ದೇಗುಲ್ಮಡಿ, ಪೊಲಕಪಳ್ಳಿ, ಚಿಂಚೋಳಿ ಹಾಗೂ ಪಟಪಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಮಳೆಯ ಕೊರತೆಯಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ನಿಯಮಾನುಸಾರ ನೀರು ಹರಿಸಿದರೆ ಬೆಳೆಗಳಿಗೆ ಅಗತ್ಯ ನೀರು ದೊರೆಯಲಿದ್ದು, ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಅನುಕೂಲವಾಗಲಿದೆ. ಇದರಿಂದ ರೈತರಿಗೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುವುದರ ಜೊತೆಗೆ ಆರ್ಥಿಕ ಸಂಕಷ್ಟವೂ ಕಡಿಮೆಯಾಗಲಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಇದಲ್ಲದೆ, ಈ ಭಾಗದಲ್ಲಿ ನೀರಿನ ಕೊರತೆಯಿಂದ ಜಾನುವಾರುಗಳು, ಪಶು–ಪಕ್ಷಿಗಳು ಹಾಗೂ ವನ್ಯಜೀವಿಗಳು ತೊಂದರೆ ಅನುಭವಿಸುತ್ತಿವೆ. ಕಾಲುವೆಗಳ ಮೂಲಕ ನೀರು ಹರಿಸುವುದರಿಂದ ಕೃಷಿಗೆ ಅನುಕೂಲವಾಗುವುದರ ಜೊತೆಗೆ ಪರಿಸರ ವ್ಯವಸ್ಥೆ ಮತ್ತು ಪ್ರಾಣಿ–ಪಕ್ಷಿಗಳಿಗೂ ನೀರಿನ ಲಭ್ಯತೆ ಹೆಚ್ಚಲಿದೆ ಎಂದು ತಿಳಿಸಿದ್ದಾರೆ.

 

ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ, ಚಂದ್ರಂಪಳ್ಳಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ವೈಜ್ಞಾನಿಕವಾಗಿ ಹಾಗೂ ನಿಯಮಾನುಸಾರ ಬಳಸಿಕೊಂಡು ರೈತರ ಬೆಳೆಗಳನ್ನು ರಕ್ಷಿಸುವುದು ಅಗತ್ಯವಾಗಿದೆ. ಆದ್ದರಿಂದ ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಸೂಕ್ತ ನಿರ್ದೇಶನ ನೀಡಿ, ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ಸುಮಾರು ಒಂದು ತಿಂಗಳ ಕಾಲ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

 

ದೀಪಕನಾಗ್ ಎಸ್. ಪುಣ್ಯಶೆಟ್ಟಿ ಅವರು ಐನೋಳ್ಳಿ, ಚಂದ್ರಂಪಳ್ಳಿ, ಕೊಳ್ಳೂರು, ಫತ್ತೇಪುರ, ದೇಗುಲ್ಮಡಿ, ಪೊಲಕಪಳ್ಳಿ, ಚಿಂಚೋಳಿ ಹಾಗೂ ಪಟಪಳ್ಳಿ ಭಾಗದ ರೈತರು ಮತ್ತು ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಚಂದ್ರಶೆಟ್ಟಿ ಕನ್ನ, ಮಶಾಕಲಪ್ಪತಿ, ರಾಜಕುಮಾರ್ ಮಂದ, ವೀರ ರೆಡ್ಡಿ ಯಲಮೋರ , ಕಲ್ಯಾಣರಾವ್ ತುಮನಂಪಳ್ಳಿ, ಮಲ್ಲಪ್ಪ ನಾಟಿಕರ್, ಬಸವರಾಜ್ ಮಂದಾ, ಸಂಜುಕುಮಾರ ಕನ್ನ, ನಾಗೇಶ್ ಮಾಲಿ ಪಾಟೀಲ್, ಮಲ್ಲಣ್ಣ ಗೌನಳ್ಳಿ, ಶಿವಕುಮಾರ್ ಮೂಲಿಗೆ, ಬಸವರಾಜ ಮುಗುಡಂಪಳ್ಳಿ, ನಾಗಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

Kalaburagi: ಮಕ್ಕಳ ಹೃದಯ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆಹಚ್ಚುವುದು ಅಗತ್ಯ: ಡಾ. ಶತಾಬ್ದಿ ಗಿರಿ

ಕಲಬುರಗಿ: ಮಕ್ಕಳ ಆರೋಗ್ಯಕರ ಬೆಳವಣಿಗೆ ಹಾಗೂ ವಿಕಾಸಕ್ಕೆ ಹೃದಯದ ಆರೋಗ್ಯ ಅತ್ಯಂತ...

ಕಲಬುರಗಿ| ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತದಾನಕ್ಕೆ 1,008 ಮತಗಟ್ಟೆ ಸಿಬ್ಬಂದಿ ನಿಯೋಜನೆ: ಜಹೀರಾ ನಸೀಮ್

ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ...

ಕಲಬುರಗಿ| ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಲಬುರಗಿ ಜಿಲ್ಲೆಯಾದ್ಯಂತ 40 ಮತಗಟ್ಟೆ ಸ್ಥಾಪನೆ: ಇಕ್ರಮ್ ಶರೀಫ್

ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ...

Kalaburagi: ಎಸ್‌ಎಫ್‌ಐನ 17ನೇ ರಾಜ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ

ಕಲಬುರಗಿ: ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಸಂಘಟನೆಯ 17ನೇ ರಾಜ್ಯ ಸಮ್ಮೇಳನದ...