ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಗೆ ಅಕ್ಟೋಬರ್ 23 (ಶುಕ್ರವಾರ) ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ನಡೆಯುವ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಒಟ್ಟು 1,008 ಪೊಲಿಂಗ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ತಿಳಿಸಿದರು.
ಪ್ರತಿ ಮತಗಟ್ಟೆಗೆ ಓರ್ವ ಪಿ.ಆರ್.ಓ, ಎ.ಪಿ.ಆರ್.ಓ, ಪಿಓ1, ಪಿಓ2, ಮೈಕ್ರೋ ವೀಕ್ಷಕರು, ಗ್ರೂಪ್ ‘ಡಿ’ ಸಿಬ್ಬಂದಿ ನೇಮಿಸಲಾಗಿದೆ. ಮತದಾನ ಪ್ರಕ್ರಿಯೆ ಮುಕ್ತ, ನಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ 15 ಡಿ.ಎಸ್.ಪಿ, 43 ಸಿ.ಪಿ.ಐ, 196 ಪಿ.ಎಸ್.ಐ-ಎ.ಎಸ್.ಐ, 386 ಮುಖ್ಯ ಪೇದೆ, 385 ಪಿ.ಸಿ/ ಡಬ್ಲ್ಯೂ.ಪಿ.ಸಿ. ಗಳನ್ನು ನಿಯೋಜಿಸಲಾಗಿದೆ ಎಂದು ಜಹೀರಾ ನಸೀಮ್ ತಿಳಿಸಿದ್ದಾರೆ.
ಚುನಾವಣಾ ಅಂತಿಮ ಕಣದಲ್ಲಿ ಅಂತಿಮವಾಗಿ 13 ಅಭ್ಯರ್ಥಿಗಳು ಉಳಿದಿದ್ದು, ಗುರುವಾರ ಮಸ್ಟರಿಂಗ್ ಕಾರ್ಯ ಸುಲಲಿತವಾಗಿ ನಡೆದಿದೆ. ಪೋಲಿಂಗ್ ಸಿಬ್ಬಂದಿಗಳು ಈಗಾಗಲೆ ಬ್ಯಾಲೆಟ್ ಪೇಪರ್ ಸೇರಿದಂತೆ ಅಗತ್ಯ ಸಾಮಗ್ರಿಗಳೊಂದಿಗೆ ಮತಗಟ್ಟೆ ತಲುಪಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಕ್ಷೇತ್ರದ ಪ್ರತಿ ಮತಗಟ್ಟೆ ಮೇಲೆ ನಿಗಾ ಇರಿಸಲು ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಇನ್ನು ಮತ ಚಲಾಯಿಸುವ ಮತದಾರರಿಗೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿ ಹಚ್ಚಲಾಗುತ್ತದೆ ಎಂದಿದ್ದಾರೆ.
*ಕ್ಷೇತ್ರದಾದ್ಯಂತ 34,784 ಮತದಾರರು:*
ಈಶಾನ್ಯ ಶಿಕ್ಷಕರ ಕ್ಷೇತ್ರದಾದ್ಯಂತ ಪುರುಷ 20,040 ಹಾಗೂ ಮಹಿಳಾ 14,744 ಸೇರಿದಂತೆ ಒಟ್ಟು 34,784 ಮತದಾರರು ಮತ ಚಲಾವಣೆಗೆ ಹೆಸರು ನೊಂದಣಿ ಮಾಡಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ 1,813 ಪುರುಷ, 1,580 ಮಹಿಳೆ ಸೇರಿ 3,393, ವಿಜಯನಗರ ಜಿಲ್ಲೆಯಲ್ಲಿ 2,190 ಪುರುಷ, 1,136 ಮಹಿಳೆ ಸೇರಿ 3,326, ಬೀದರ ಜಿಲ್ಲೆಯಲ್ಲಿ 3,794 ಪುರುಷ, 3,244 ಮಹಿಳೆ ಸೇರಿ 7,038, ಕಲಬುರಗಿ ಜಿಲ್ಲೆಯಲ್ಲಿ 5,672 ಪುರುಷ, 4,980 ಮಹಿಳೆ ಸೇರಿ 10,652, ಯಾದಗಿರಿ ಜಿಲ್ಲೆಯಲ್ಲಿ 1,548 ಪುರುಷ, 711 ಮಹಿಳೆ ಸೇರಿ 2,259, ಕೊಪ್ಪಳ ಜಿಲ್ಲೆಯಲ್ಲಿ 1,845 ಪುರುಷ, 869 ಮಹಿಳೆ ಸೇರಿ 2,714 ಹಾಗೂ ರಾಯಚೂರು ಜಿಲ್ಲೆಯಲ್ಲಿ 3,178 ಪುರುಷ, 2,224 ಮಹಿಲೆ ಸೇರಿ 5,402 ಮತದಾರರು ಇದ್ದಾರೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.
*144 ಮತಗಟ್ಟೆ ಸ್ಥಾಪನೆ:*
ಕ್ಷೇತ್ರದಾದ್ಯಂತ ಕಲಬುರಗಿ ಜಿಲ್ಲೆಯಲ್ಲಿ-40, ಬೀದರ-33, ರಾಯಚೂರು-16, ಬಳ್ಳಾರಿ-9, ಕೊಪ್ಪಳ-20, ಯಾದಗಿರಿ-8, ವಿಜಯನಗರ-18 ಮತಗಟ್ಟೆಗಳು ಸೇರಿದಂತೆ ಒಟ್ಟು 144 ಮತಗಟ್ಟೆಗಳು ಸ್ಥಾಪಿಸಲಾಗಿದೆ.
*ಮತ ಅಮಾನ್ಯವಾಗದಿರಲಿ:*
ಈ ಚುನಾವಣೆಯಲ್ಲಿ ಮತದಾನವು ಮತಪತ್ರ ಮುಖಾಂತರ ಪ್ರಾಶಸ್ತ ಮತ ನೀಡಲು ಅವಕಾಶವಿರುತ್ತದೆ. ಇಲ್ಲಿ ನೋಟಾಗೆ ಅವಕಾಶ ಇರುವುದಿಲ್ಲ. ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗೂ ಪ್ರಾಶಸ್ತ್ಯದ ರೂಪದಲ್ಲಿ ಮತದಾರ ಮತ ನೀಡಬಹುದಾಗಿದೆ. ಪ್ರಾಶಸ್ತ್ಯ ಮತ ನೀಡುವಾಗ ಕ್ರಮ ಸಂಖ್ಯೆ ಕೈಬಿಟ್ಟು ಚಲಾಯಿಸಿದ ನಂತರದ ಮತಗಳು ಅಮಾನ್ಯವಾಗಲಿದ್ದು, ಮತದಾರರು ಇದನ್ನು ಮುಖ್ಯವಾಗಿ ಗಮನಿಸಬೇಕು. ಇನ್ನು ಮತಪತ್ರದಲ್ಲಿ ಆಯೋಗದಿಂದ ನೀಡಲಾಗಿರುವ ನೆರಳೆ ಬಣ್ಣದ (Violet sketch pen) ಪೆನ್ನಿನ ಮುಖಾಂತರ ಮಾತ್ರ ಪ್ರಾಶಸ್ತ ಮತವನ್ನು ಚಲಾಯಿಸತಕ್ಕದ್ದು. ಬೇರೆ ಇತರೆ ಬಣ್ಣದ ಪೆನ್ನಿನಿಂದ ಮತ ಚಲಾಯಿಸಿದ್ದಲ್ಲಿ ಹಾಗೂ ಗುರುತುಗಳನ್ನೊಳಗೊಂಡ ಚಲಾಯಿಸಲಾದ ಮತಗಳು ಅಮಾನ್ಯಗೊಳ್ಳಲಿವೆ ಎಂದು ಜಹೀರಾ ನಸೀಮ್ ಸ್ಪಷ್ಟಪಡಿಸಿದ್ದಾರೆ.
*ಮತದಾರರಿಗೆ ರಜೆ:*
ಕ್ಷೇತ್ರದಾದ್ಯಂತ ಮತ ಚಲಾಯಿಸಲು ಅನುಕೂಲವಾಗುವಂತೆ ಕ್ಷೇತ್ರದ ನೊಂದಾಯಿತ ಮತದಾರರಿಗೆ ಸರ್ಕಾರ ರಜೆ ಘೊಷಿಸಿದೆ. ಇದಲ್ಲದೆ ಮತದಾನಕ್ಕೆ ಕ್ಷೇತ್ರದಾದ್ಯಂತ ಸ್ಥಾಪಿಸಲಾಗಿರುವ 144 ಮತದಾನ ಕೇಂದ್ರದಲ್ಲಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳಿಗೂ ಸಹ ಅ.23 ರಂದು ರಜೆ ಘೋಷಿಸಲಾಗಿದೆ ಎಂದಿದ್ದಾರೆ.
*14 ಪರ್ಯಾಯ ಗುರುತಿನ ಚೀಟಿ:*
ಇನ್ನು ಮತದಾರರ ಗುರುತಿನ ಚೀಟಿ ಹೊಂದಿರದ ಮತದಾರರು ಚುನಾವಣಾ ಅಯೋಗದ ನಿರ್ದೇಶನದಂತೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಇಂಡಿಯನ್ ಪಾಸ್ಪೋರ್ಟ್, ಕೇಂದ್ರ/ ರಾಜ್ಯ ಸರ್ಕಾರ / ನಿಗಮ-ಮಂಡಳಿ/ ಸ್ಥಳೀಯ ಸಂಸ್ಥೆ/ ಖಾಸಗಿ ಸಂಸ್ಥೆ ನೀಡಿರುವ ಗುರುತಿನ ಚೀಟಿ, ಎಂ.ಪಿ, ಎಂ.ಎಲ್.ಎ, ಎಂ.ಎಲ್.ಸಿ ಗಳಿಗೆ ನೀಡಲಾಗಿರುವ ಅಧಿಕೃತ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆ ನೀಡುವ ಗುರುತಿನ ಚೀಟಿ, ವಿಶ್ವವಿದ್ಯಾಲಯ ನೀಡಿರುವ ಡಿಪ್ಲೋಮಾ-ಪದವಿ ಪ್ರಮಾಣ ಪತ್ರ, ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಗುರುತಿನ ಚೀಟಿ, ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ ವಿತರಿಸುವ ಯು.ಡಿ.ಐ.ಡಿ ಕಾರ್ಡ್ ಹೀಗೆ 14 ರಲ್ಲಿ ಯಾವುದಾದರು ಒಂದು ಮೂಲ ಗುರುತಿನ ಚೀಟಿ ತೋರಿಸಿ ಮತ ಚಲಾಯಿಸಬಹುದಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.


