ಕಲಬುರಗಿ: ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ದೇವರ ಹುಂಡಿಯಲ್ಲಿದ್ದ ₹2.5 ಲಕ್ಷ ನಗದು ಸೇರಿದಂತೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಗರದ ಉದನೂರ ರಸ್ತೆಯ ಅಮೋಘ ನಗರದಲ್ಲಿ ನಡೆದಿದೆ.
ಅಮೋಘ ನಗರದ ಉಮೇಶ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯವರು ಊರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ, ದೇವರ ಹುಂಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ₹2.5 ಲಕ್ಷ ನಗದು ಹಣವನ್ನು ದೋಚಿದ್ದಾರೆ. ಅಲ್ಲದೆ, ಮೂರು ಗ್ರಾಂ ಚಿನ್ನ ಹಾಗೂ 26 ತೊಲೆ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


