ಕಲಬುರಗಿ| ಸೇಡಂನಲ್ಲಿ 26ನೇ ವರ್ಷದ ‘ಅಮ್ಮ ಪ್ರಶಸ್ತಿ’ ಪ್ರದಾನ; ಅಮ್ಮನ ಪ್ರೀತಿಗೆ ಜಗತ್ತಿನ ಯಾವುದೇ ಮೌಲ್ಯ ಸರಿಸಾಟಿಯಲ್ಲ

Date:

Share post:

ಕಲಬುರಗಿ (ಸೇಡಂ): ಅಮ್ಮನ ಪ್ರೀತಿ ಜಗದಗಲ ಮತ್ತು ಮುಗಿಲಗಲವಾಗಿದೆ. ಅದಕ್ಕೆ ಸರಿಸಾಟಿಯಾದುದು ಯಾವುದೂ ಇಲ್ಲ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.

ನಗರದ ಐತಿಹಾಸಿಕ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ನೀಡಲಾಗುವ ‘ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದ್ದ ರಾಷ್ಟ್ರಕೂಟರ ನಾಡು ಈ ನೆಲದ ಇತಿಹಾಸ ಮತ್ತು ಪ್ರಸಿದ್ಧಿಗೆ ಸಾಕ್ಷಿಯಾಗಿದೆ. ಇಂದು ‘ಅಮ್ಮ ಪ್ರಶಸ್ತಿ’ಯ ಮೂಲಕ ಸೇಡಂ ಮತ್ತೊಮ್ಮೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಭಿಮಾನದಿಂದ ನುಡಿದರು.

ರಾಜ್ಯದ ವಿವಿಧ ಭಾಗಗಳಿಗೆ ಹಾಗೂ ಹೊರರಾಜ್ಯಗಳಿಗೆ ಪ್ರವಾಸ ಹೋದಾಗ ಅಲ್ಲಿನ ಸಾಹಿತಿಗಳು, ಕವಿಗಳು ಮತ್ತು ರಾಜಕಾರಣಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸೇಡಂ ಎಂದಾಕ್ಷಣ ಬಸವರಾಜ ಪಾಟೀಲ್ ಸೇಡಂ ಹಾಗೂ ‘ಅಮ್ಮ ಪ್ರಶಸ್ತಿ’ಯನ್ನು ನೆನಪಿಸಿಕೊಳ್ಳುತ್ತಾರೆ. ಇದು ಸೇಡಂಗೆ ‘ಅಮ್ಮ ಪ್ರಶಸ್ತಿ’ ತಂದುಕೊಟ್ಟಿರುವ ಗೌರವದ ಕಿರೀಟವಾಗಿದೆ ಎಂದರು.

ತಾಯಿಯ ಪ್ರೀತಿ, ತ್ಯಾಗ, ಬಲಿದಾನ, ದೇಶಪ್ರೇಮ ಹಾಗೂ ಬದುಕಿಗೆ ದಾರಿದೀಪವಾಗುವ ಮೌಲ್ಯಗಳನ್ನು ನೆನಪಿಸುವ ಉದ್ದೇಶದಿಂದ ‘ಅಮ್ಮ ಪ್ರಶಸ್ತಿ’ಯನ್ನು ಸ್ಥಾಪಿಸಿ, ನಿರಂತರ 26 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಮಹಿಪಾಲರೆಡ್ಡಿ ಮುನ್ನೂರ್ ಅವರ ಕಾರ್ಯ ಶ್ಲಾಘನೀಯ. ತಾಯಿಯ ಮೇಲಿನ ಅಪಾರ ಪ್ರೀತಿಯಿಂದ ಇಂತಹ ಸಾರ್ಥಕ ಕಾರ್ಯ ಕೈಗೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಈ ಸಾಧನೆಗೆ ಕುಟುಂಬದವರ ಸಹಕಾರ ಹಾಗೂ ಸಾಹಿತ್ಯ ವಲಯದ ಬೆಂಬಲ ದೊರೆಯುತ್ತಿರುವುದು ಮಹತ್ವದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಮ್ಮ ಪ್ರಶಸ್ತಿ’ಯನ್ನು ಹಣದ ಮೌಲ್ಯದಲ್ಲಿ ಅಳೆಯಲು ಸಾಧ್ಯವಿಲ್ಲ. ‘ಅಮ್ಮ’ ಎಂಬ ಪದ ಮತ್ತು ಅದರ ಹಿಂದಿರುವ ಅಂತಃಕರಣದ ಪ್ರೀತಿ ಜಗತ್ತಿನ ಎಲ್ಲ ಮೌಲ್ಯಗಳಿಗಿಂತ ಮಿಗಿಲಾದುದು. ಪ್ರತಿವರ್ಷ ನೂರಾರು ಕವಿಗಳು, ಸಾಹಿತಿಗಳು ಪ್ರಶಸ್ತಿಗಾಗಿ ತಮ್ಮ ಕೃತಿಗಳನ್ನು ಕಳುಹಿಸುತ್ತಾರೆ. ಕಳೆದ 26 ವರ್ಷಗಳಲ್ಲಿ ಸಾವಿರಾರು ಸಾಹಿತಿಗಳು ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರೂ, ಆಯ್ದ ಕೆಲವರಿಗೆ ಮಾತ್ರ ಈ ಗೌರವ ಲಭಿಸಿದೆ. ಇದರಿಂದ ಪ್ರಶಸ್ತಿಯ ಮಹತ್ವ ಮತ್ತು ಮೌಲ್ಯ ಇನ್ನಷ್ಟು ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ತಂದೆಯ ಸ್ಮರಣಾರ್ಥ ಬಡ ಮಹಿಳೆಯರಿಗೆ ನೆರವು ನೀಡುವ ಕಾರ್ಯವನ್ನು ಕುಟುಂಬದವರು ಮುಂದುವರಿಸಿಕೊಂಡು ಬರುತ್ತಿರುವುದು ಅನುಕರಣೀಯ. ಸಮಾಜಮುಖಿ ಕಾರ್ಯಗಳ ಮೂಲಕ ತಂದೆ-ತಾಯಿಯ ನೆನಪನ್ನು ಜೀವಂತವಾಗಿಡುತ್ತಿರುವುದು ಇತರರಿಗೂ ಮಾದರಿಯಾಗಿದೆ. ಈ ಕಾರ್ಯದಲ್ಲಿ ರತ್ನಕಲಾ ಮಹಿಪಾಲರೆಡ್ಡಿ ಅವರ ಪಾತ್ರ ಹಿರಿದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸೇಡಂನ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಹಿರಿಮೆಗೆ ‘ಅಮ್ಮ ಪ್ರಶಸ್ತಿ’ ಮಹತ್ವದ ಕೊಡುಗೆ ನೀಡಿದೆ. ಈ ಪ್ರಶಸ್ತಿಯ ಮೂಲಕ ನಾಡಿನ ಸಾಹಿತಿಗಳಿಗೆ ಗೌರವ ಸಲ್ಲಿಸುತ್ತಿರುವ ಆಯೋಜಕರ ಪ್ರಯತ್ನ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ಹಿರಿಯ ಸಾಹಿತಿ ಸಂಗಮೇಶ ಬಾದವಾಡಗಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರಶಸ್ತಿಗಳಿಗಾಗಿ ಸರದಿಯಲ್ಲಿ ನಿಲ್ಲುವವರ ಸಂಖ್ಯೆ ಹೆಚ್ಚುತ್ತಿದ್ದು, ಕೆಲವು ಪ್ರಶಸ್ತಿಗಳ ಮೌಲ್ಯ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ. ಪ್ರಶಸ್ತಿಗಳು ಅರ್ಹತೆಗೆ ತಕ್ಕಂತೆ ದೊರೆಯಬೇಕು. ಲಭಿಸುವ ಪ್ರಶಸ್ತಿ ಸಾಧನೆಗೆ ಮೆಟ್ಟಿಲಾಗಬೇಕು. ಪ್ರಶಸ್ತಿ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡು, ಯಾವುದೇ ಶಿಫಾರಸಿಗೆ ಅವಕಾಶ ನೀಡದಿರುವುದರಿಂದಲೇ ಕನ್ನಡ ಸಾಹಿತ್ಯ ವಲಯದಲ್ಲಿ ‘ಅಮ್ಮ ಪ್ರಶಸ್ತಿ’ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿದ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್ ಹಾಗೂ ಹಿರಿಯ ಪತ್ರಕರ್ತ ಟಿ.ವಿ. ಶಿವಾನಂದನ್ ಮಾತನಾಡಿ, ‘ಅಮ್ಮ ಪ್ರಶಸ್ತಿ’ ಸ್ಥಾಪಿಸುವ ಮೂಲಕ ಎಲ್ಲರ ಅಮ್ಮಂದಿರಿಗೆ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ. ತಾಯಿಯ ಅಂತಃಕರಣ ಮತ್ತು ಪ್ರೀತಿಯೇ ಈ ಪ್ರಶಸ್ತಿಗೆ ನಿಜವಾದ ಮೌಲ್ಯ ತಂದುಕೊಟ್ಟಿದೆ ಎಂದು ನುಡಿದರು.

ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ವೇದಿಕೆಯಲ್ಲಿದ್ದರು. ನಿವೃತ್ತ ಶಿಕ್ಷಕ ನಾಗಪ್ಪ ಮಾಸ್ಟರ್ ಮುನ್ನೂರ್ ಅವರ ಸ್ಮರಣಾರ್ಥ ಬಡ ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಕಳೆದ 19 ವರ್ಷಗಳಿಂದ ಹೊಲಿಗೆ ಯಂತ್ರಗಳನ್ನು ವಿತರಿಸುವ ಪರಂಪರೆಯನ್ನು ಮುಂದುವರಿಸಲಾಗಿದೆ. ಈ ಬಾರಿ ಮಷಾಕ್ ಬೀ ಹಾಗೂ ಶಿಲ್ಪಾ ಕುಂಬಾರ ಅವರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಪ್ರತಿಷ್ಠಾನದ ಸಿದ್ದಪ್ರಸಾದರೆಡ್ಡಿ ಸ್ವಾಗತಿಸಿದರು. ಸಂಸ್ಥಾಪಕ ಮಹಿಪಾಲರೆಡ್ಡಿ ಮುನ್ನೂರ್ ನಿರೂಪಿಸಿ, ವಂದಿಸಿದರು. ವಿಜಯಲಕ್ಷ್ಮಿ ಡಪ್ಪಲ್ ಹಾಗೂ ಮಹೇಶ ಅಲ್ಲೂರ ಅವರು ಅಮ್ಮನ ಕುರಿತ ಪ್ರಾರ್ಥನಾ ಗೀತೆ ಹಾಡಿದರು.

ಪ್ರತಿಷ್ಠಾನದ ಶಿವಶರಣರೆಡ್ಡಿ ಪಾಟೀಲ, ಪ್ರಭಾಕರ ಜೋಶಿ, ರವೀಂದ್ರ ಮುನ್ನೂರ್, ಚಂದ್ರಶೇಖರರೆಡ್ಡಿ ಬಿರಾದಾರ ಬಿಲಕಲ್, ಸಾಹಿತಿಗಳಾದ ಲಿಂಗಾರೆಡ್ಡಿ ಶೇರಿ, ಸಿದ್ದಪ್ಪ ತಳ್ಳಳ್ಳಿ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಪ್ರೊ. ಬಿ.ಆರ್. ಅಣ್ಣಾಸಾಗರ, ವೆಂಕಟರೆಡ್ಡಿ ತುನ್ನೂರ್, ವಿಜಯಕುಮಾರ ಆಡಕಿ, ರಾಜು ದೇಶಮುಖ, ಸುಜಿತಕುಮಾರ ಡಪ್ಪಲ್, ಕಿಷ್ಟಪ್ಪ ಮಾಸ್ಟರ್, ಶಾಮ ಇಲ್ಲಾಳ, ಡಾ. ನಾಗರಾಜ ಮನ್ನೆ, ಸಂತೋಷಕುಮಾರ ಕುಲಕರ್ಣಿ, ಶಶಿಕಲಾ ಮಕ್ತಾಲ್, ಸುಲೋಚನಾ ಸ್ವಾಮಿ ಬಿಬ್ಬಳ್ಳಿ, ವೆಂಕಟರೆಡ್ಡಿ ಯಾದಗಿರಿ, ಚೇತನ್ ಹುಮನಾಬಾದ್, ನಿಖಿತಾ ರೆಡ್ಡಿ, ಶಿವು ಮಕ್ತಾಲ್, ವಿಜಯಭಾಸ್ಕರರೆಡ್ಡಿ, ಕಾರ್ತಿಕರೆಡ್ಡಿ ಹಾಗೂ ಮಹಾದೇವರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಮ್ಮ ಪ್ರಶಸ್ತಿ ಪುರಸ್ಕೃತರು:

ಪ್ರತಿಭಾ ನಂದಕುಮಾರ ಅವರ ‘ಇಳಿದು ಬರುವುದಿಲ್ಲ ತಾಯಿ’, ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ದ್ರೌಪದಿಯ ವಾಷಿಂಗ್ ಮಿಷನ್ನು’, ಜಯರಾಮಚಾರಿ ಅವರ ‘ಪ್ರೀತಿಲಿ ಬಿದ್ದ ಪಾಪಸಕಳ್ಳಿ’, ಡಾ. ಶರಣಮ್ಮ ಪಾಟೀಲ ಅವರ ‘ರರಾಚಿ’, ಪದ್ಮಲತಾ ಮೋಹನ್ ಅವರ ‘ಎಲ್‌ಬಿಡಬ್ಲ್ಯೂ’, ಮಮತಾ ಅರಸೀಕೆರೆ ಅವರ ‘ಗೂಡು ಸೇರಿದ ಹಕ್ಕಿಗಳು’ ಹಾಗೂ ಚೀ. ಜ. ರಾಜೀವ ಅವರ ‘ಪ್ರಿಯ ಗಾಂಧಿ’ ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

Share post:

spot_imgspot_img

Popular

More like this
Related

ಕಲಬುರಗಿ| ಕಲಬುರಗಿಯಲ್ಲಿ ಬಡವರಿಗೆ ಉಚಿತ ನಿವೇಶನ: ಜಮೀನು ಪರಿಶೀಲಿಸಿದ ಡಿ.ಸಿ ಇಕ್ರಮ್ ಶರೀಫ್

ಕಲಬುರಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಭೂ ಗ್ಯಾರಂಟಿ ಯೋಜನೆಯಡಿ ಬಡವರು ಹಾಗೂ...

ಕಲಬುರಗಿ| ಕೆಕೆಸಿಸಿಐ ವಜ್ರ ಮಹೋತ್ಸವ: ಕಾರ್ಯಕ್ರಮದ ಅಂತಿಮ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ 

ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ (ಕೆಕೆಸಿಸಿಐ) ವಜ್ರ...

ಕಲಬುರಗಿ| ದೇವರ ಹುಂಡಿಯಲ್ಲಿದ್ದ ₹2.5 ಲಕ್ಷ, ಚಿನ್ನ, 26 ತೊಲೆ ಬೆಳ್ಳಿ ಕಳ್ಳತನ

ಕಲಬುರಗಿ: ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ದೇವರ ಹುಂಡಿಯಲ್ಲಿದ್ದ ₹2.5...

ಕಲಬುರಗಿ| ರೈತರ ಸಮಗ್ರ ಅಭಿವೃದ್ಧಿಗೆ ಗ್ರಾಮೀಣ ನಾವೀನ್ಯ ಕೇಂದ್ರಗಳ ಸ್ಥಾಪನೆ

ಕಲಬುರಗಿ: ರೈತರ ಸಮಗ್ರ ಅಭಿವೃದ್ಧಿ ಹಾಗೂ ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ...