ಕಲಬುರಗಿ: ರೈತರ ಸಮಗ್ರ ಅಭಿವೃದ್ಧಿ ಹಾಗೂ ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ ಕೃಷಿ, ಆರೋಗ್ಯ, ಶಿಕ್ಷಣ, ಕೌಶಲ ತರಬೇತಿ, ಉದ್ಯೋಗ ಮತ್ತು ಉದ್ಯಮಶೀಲತೆಗೆ ಸಂಬಂಧಿಸಿದ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಗ್ರಾಮೀಣ ನಾವೀನ್ಯ ಕೇಂದ್ರಗಳನ್ನು ಸ್ಥಾಪಿಸಲು ಶ್ರೀ ಸತ್ಯ ಸಾಯಿ ಮಾನವಾಭ್ಯುದಯ ವಿಶ್ವವಿದ್ಯಾಲಯ (SSSUHE) ಹಾಗೂ ಬೀಯಿಂಗ್ ಫಾರ್ಮರ್ ಫೌಂಡೇಷನ್ ಒಪ್ಪಂದ ಮಾಡಿಕೊಂಡಿವೆ.
ಈ ಕುರಿತು ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಒಪ್ಪಂದಕ್ಕೆ ಬೀಯಿಂಗ್ ಫಾರ್ಮರ್ ಫೌಂಡೇಷನ್ ಪರವಾಗಿ ಸಾಂಬಶಿವರೆಡ್ಡಿ ಶ್ರೀನಿವಾಸ ಬಾಲಾಜಿ ಹಾಗೂ ವಿಶ್ವವಿದ್ಯಾಲಯದ ಪರವಾಗಿ ಕುಲಪತಿ ಪ್ರೊ. ಶ್ರೀಕಂಠ ಮೂರ್ತಿ ಕೆ. ಸಹಿ ಹಾಕಿದರು. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಉಪಸ್ಥಿತರಿದ್ದರು.
ಗ್ರಾಮೀಣ ಭಾಗದ ರೈತರು ಹಾಗೂ ಜನರಿಗೆ ಕೃಷಿ, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಉದ್ಯಮಕ್ಕೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಈ ಕೇಂದ್ರಗಳ ಪ್ರಮುಖ ಉದ್ದೇಶ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕೃಷಿ ವಿಶ್ವವಿದ್ಯಾಲಯ ಹಾಗೂ ಜಾಗತಿಕ ಕೃಷಿ ನಾವೀನ್ಯ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿಯೂ ಎರಡೂ ಸಂಸ್ಥೆಗಳು ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಕುಲಪತಿ ಪ್ರೊ. ಶ್ರೀಕಂಠ ಮೂರ್ತಿ ತಿಳಿಸಿದರು.
ಕೇಂದ್ರಗಳಲ್ಲಿ ಕೃಷಿ ಮತ್ತು ಆಹಾರ ಉತ್ಪನ್ನಗಳ ಅಭಿವೃದ್ಧಿ, ಆಧುನಿಕ ಕೃಷಿ ಪದ್ಧತಿಗಳ ತರಬೇತಿ, ಕೌಶಲ ಅಭಿವೃದ್ಧಿ, ಉದ್ಯೋಗ ಮಾಹಿತಿ ಹಾಗೂ ರೈತ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ರೈತರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಳ್ಳಲು ಆನ್‌ಲೈನ್ ಮಾರಾಟ ವ್ಯವಸ್ಥೆಯನ್ನೂ ರೂಪಿಸಲಾಗುತ್ತದೆ. ಕೃಷಿ ಉತ್ಪಾದನೆ ಹಾಗೂ ಮೌಲ್ಯವರ್ಧನೆಗೆ ಉತ್ತೇಜನ ನೀಡುವ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೂ ನೆರವಾಗುವ ಉದ್ದೇಶವಿದೆ.
ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ಸಾಯಿ ಸ್ವಾಸ್ಥ್ಯ ಕೇಂದ್ರ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಯೋಜನೆಯೂ ಇದೆ. ಇದರ ಜತೆಗೆ ಹಿರಿಯ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ವಸತಿ ಮತ್ತು ಆರೈಕೆ ವ್ಯವಸ್ಥೆ ರೂಪಿಸುವ ಉದ್ದೇಶ ಹೊಂದಲಾಗಿದೆ.
ಬೀಯಿಂಗ್ ಫಾರ್ಮರ್ ಫೌಂಡೇಷನ್ ಕೃಷಿ ತರಬೇತಿ, ಉದ್ಯಮಶೀಲತೆ ಹಾಗೂ ವಿವಿಧ ಯೋಜನೆಗಳಿಗೆ ದಾನಿಗಳ ಮೂಲಕ ಹಣಕಾಸಿನ ನೆರವು ಒದಗಿಸಲಿದೆ. ವಿಶ್ವವಿದ್ಯಾಲಯವು ಕೇಂದ್ರಗಳ ನಿರ್ವಹಣೆ, ಅಗತ್ಯ ಸಿಬ್ಬಂದಿ ನೇಮಕ, ತರಬೇತಿ ಮತ್ತು ಶೈಕ್ಷಣಿಕ ಸಹಕಾರದ ಹೊಣೆ ವಹಿಸಲಿದೆ.


