ಕಲಬುರಗಿ| ಫೆಬ್ರವರಿ 21 ರಿಂದ 28ರವರಿಗೆ ಕಲಬುರಗಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ: ಸಚಿವ ಪ್ರಿಯಾಂಕ್ ಖರ್ಗೆ

Date:

Share post:

ಕಲಬುರಗಿ: ಕಲಬುರಗಿಯನ್ನು ಕರ್ನಾಟಕದ ಸೃಜನಶೀಲ ನಗರವನ್ನಾಗಿ ರೂಪಿಸುವ ಗುರಿಯೊಂದಿಗೆ ಕಲಬುರಗಿಯಲ್ಲಿ ಮೊದಲ ಬಾರಿಗೆ ಜಿಲ್ಲಾಡಳಿತ ಮತ್ತು ಬೆಂಗಳೂರಿನ ರಂಗಶಂಕರ ಸಹಯೋಗದಲ್ಲಿ ಫೆಬ್ರವರಿ 21 ರಿಂದ 28 ರವರೆಗೆ ರಾಷ್ಟ್ರೀಯ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಕಲಬುರಗಿಯ ಸಮಸ್ತ ಕಲಾಭಿಮಾನಿಗಳು ಈ ನಾಟಕೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ನಾಟಕೋತ್ಸವ-26 ರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಕಲಬುರಗಿ ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಬೆಂಗಳೂರಿನ ಪ್ರಸಿದ್ಧ ರಂಗಶಂಕರ ಸಹಭಾಗಿತ್ವದಲ್ಲಿ ಮುಂದಿನ ಐದು ವರ್ಷಗಳ ಕಾಲ ನಿರಂತರ ನಾಟಕೋತ್ಸವ ಆಯೋಜಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ನಾಟಕೋತ್ಸವದಲ್ಲಿ ನಗರದ ಎಸ್ ಎಮ್ ಪಂಡಿತ್ ರಂಗಮಂದಿರದಲ್ಲಿ ಕನ್ನಡದ ಪ್ರಸಿದ್ಧ ನಾಟಕಗಳು ಸೇರಿದಂತೆ ವಿವಿಧ ರಾಜ್ಯಗಳ ಬೇರೆ ಭಾಷೆಯ ನಾಟಕಗಳನ್ನು, ಕಲಬುರಗಿ ರಂಗಾಯಣದಲ್ಲಿ ವಿಶೇಷವಾಗಿ ಮಕ್ಕಳಿಗಾಗಿ ನಾಟಕಗಳು ಮತ್ತು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ರಂಗಭೂಮಿ ಕುರಿತಂತೆ ಹೆಸರಾಂತ ರಂಗಕರ್ಮಿಗಳೊಂದಿಗೆ ಪ್ರತಿದಿನ ವಿವಿಧ ವಿಷಯಗಳ ಕುರಿತು ಸಂವಾದಗಳನ್ನು ಸಹ ಹಮ್ಮಿಕೊಳ್ಳಲಾಗಿದೆ.

 

ಈ ಮೂಲಕ, ಕಲಬುರಗಿಯಲ್ಲಿ ರಂಗಭೂಮಿಯನ್ನು ಸಮಾಜದ ಎಲ್ಲಾ ವರ್ಗದ ಜನರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವುದಲ್ಲದೆ, ಅದೊಂದು ಕ್ರಿಯಾಶೀಲವಾದ ಮತ್ತು ಎಲ್ಲರೂ ವಾಲ್ಗೊಳ್ಳುವಂತಹ ಸಾಂಸ್ಕೃತಿಕ ಅನುಭವವನ್ನಾಗಿ ರೂಪಿಸಲಾಗುತ್ತಿದೆ.

ಇದೇ ಕಾರಣಕ್ಕಾಗಿ, ಅತ್ಯಂತ ಜನಪ್ರಿಯ, ವಿವಿಧ ಶೈಲಿಯ ಪ್ರದರ್ಶನಗಳನ್ನು ಈ ನಾಟಕೋತ್ಸವಕ್ಕಾಗಿ ಆಯ್ಕೆ ಮಾಡಲಾಗಿದೆ. ಪ್ರಾದೇಶಿಕ ಕಲಾ ಪ್ರಕಾರಗಳನ್ನು ಮತ್ತು ಕಲಾವಿದರನ್ನು ಗುರುತಿಸಿ, ಅವರಿಗೆ ಬೆಂಬಲ ನೀಡುವ ಮೂಲಕ ಸ್ಥಳೀಯ ರಂಗಭೂಮಿ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಸಮೃದ್ಧಗೊಳಿಸುವುದು ಈ ರಂಗೋತ್ಸವದ ಪ್ರಮುಖ ಆಶಯವಾಗಿದೆ.

ಕಾರ್ಯಾಗಾರಗಳು, ಉಪನ್ಯಾಸಗಳು ಮತ್ತು ಆಯ್ದ ಪ್ರದರ್ಶನಗಳ ಮೂಲಕ ಸ್ಥಳೀಯ ಪ್ರತಿಭೆಗಳು ಬೆಳೆಯಲು ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಈ ನಾಟಕೋತ್ಸವ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ.

ಪಾರಂಪರಿಕ ಮತ್ತು ಸಮಕಾಲೀನ ಕಲೆಗಳನ್ನು ಸಮ್ಮಿಳಿತಗೊಳಿಸಿ ಪ್ರೇಕ್ಷಕರಿಗೆ ಸಮಗ್ರ ಕಲಾತ್ಮಕ ಅನುಭವವನ್ನು ನೀಡುವ ಮೂಲಕ, ಕಲಬುರಗಿಯನ್ನು ಸೃಜನಶೀಲ ಸಂವಾದ ಮತ್ತು ಕಲಾತ್ಮಕ ನಾವೀನ್ಯತೆಯ ಕೇಂದ್ರವನ್ನಾಗಿ ರೂಪಿಸಬಹುದಾಗಿದೆ.

ಕಲಬುರಗಿಯನ್ನು ಕರ್ನಾಟಕದ ಒಂದು ಕ್ರಿಯಾಶೀಲ ಸಾಂಸ್ಕೃತಿಕ ಹೆಗ್ಗುರುತನ್ನಾಗಿ ರೂಪಿಸುವ ಆಶಯವನ್ನು ‘ಕಲಬುರಗಿ ನಾಟಕೋತ್ಸವ’ ಹೊಂದಿದೆ. ಇದು ಕೇವಲ ತನ್ನ ಐತಿಹಾಸಿಕ ಪರಂಪರೆಗೆ ಮಾತ್ರವಲ್ಲದೆ, ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜೀವಂತ ಕಲಾ ಕ್ಷೇತ್ರಕ್ಕೂ ಹೆಸರುವಾಸಿಯಾಗಬೇಕು ಎಂಬುದು ಈ ನಾಟಕೋತ್ಸವದ ಪರಿಕಲ್ಪನೆಯಾಗಿದೆ.

ಇಲ್ಲಿನ ಸಾಂಸ್ಕೃತಿಕ ಅನನ್ಯತೆಗೆ ರಾಷ್ಟ್ರೀಯ ಮಟ್ಟದ ಮಾನ್ಯತೆ ತಂದುಕೊಡುವ ಮೂಲಕ ಹಾಗೂ ರಂಗಭೂಮಿ, ಸಂಗೀತ ಮತ್ತು ಪೂರಕ ಕಲೆಗಳ ಮೂಲಕ ಪ್ರವಾಸೋದ್ಯಮದ ಆಕರ್ಷಣೆಗಳನ್ನು ವೈವಿಧ್ಯಗೊಳಿಸುವ ಮೂಲಕ, ಸಾಂಸ್ಕೃತಿಕ ಆಸಕ್ತರು ಭೇಟಿ ನೀಡಲೇಬೇಕಾದ ತಾಣವಾಗಿ ಕಲಬುರಗಿಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

 

*ಸಂಜೆ ನಾಟಕ ಪ್ರದರ್ಶನಗಳು (ಸ್ಥಳ: ಎಸ್.ಎಮ್. ಪಂಡಿತ್ ರಂಗಮಂದಿರ)*

ಪ್ರತಿದಿನ ಸಂಜೆ 7:00 ಗಂಟೆಗೆ ದೇಶದ ವಿವಿಧ ಭಾಗಗಳ ಶ್ರೇಷ್ಠ ನಾಟಕಗಳು ಪ್ರದರ್ಶನಗೊಳ್ಳಲಿವೆ:

• ಫೆ. 21: ಬಿ. ಜಯಶ್ರೀ ನಿರ್ದೇಶನದ ‘ಕರಿಮಾಯಿ’ (ಸ್ಪಂದನ, ಬೆಂಗಳೂರು).

• ಫೆ. 22: ಅಜಿತೇಶ್ ಗುಪ್ತಾ ನಿರ್ದೇಶನದ ‘ಜೋ ಡೂಬಾ ಸೋ ಪಾರ್’ (ಅರಣ್ಯ ಥಿಯೇಟರ್ ಗ್ರೂಪ್, ಮುಂಬೈ).

• ಫೆ. 23: ಬಿ.ವಿ. ರಾಜಾರಾಂ ನಿರ್ದೇಶನದ ‘ಮುಖ್ಯಮಂತ್ರಿ’ (ಕಲಾಗಂಗೋತ್ರಿ, ಬೆಂಗಳೂರು).

• ಫೆ. 24: ಸುಮೀತ್ ವ್ಯಾಸ್ ನಿರ್ದೇಶನದ ‘ಪುರಾನಾ ಚಾವಲ್’ (ಡಿ ಫಾರ್ ಡ್ರಾಮಾ, ಮುಂಬೈ).

• ಫೆ. 25: ಗಣೇಶ್ ಮಂದಾರ್ತಿ ಅವರ ‘ಕಾಮರೂಪಿಗಳು’ (ಸಂಚಯ, ಬೆಂಗಳೂರು).

• ಫೆ. 26: ಅನುರೂಪ ರಾಯ್ ನಿರ್ದೇಶನದ ‘ಎಬೌಟ್ ರಾಮ್’ ಪಪೆಟ್ ಪ್ರದರ್ಶನ (ನವದೆಹಲಿ).

• ಫೆ. 27: ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ‘ಕಾಲಚಕ್ರ’ (ರಂಗಾಯಣ, ಕಲಬುರಗಿ).

• ಫೆ. 28: ಲಕ್ಷ್ಮಣ ಕೆ.ಪಿ. ನಿರ್ದೇಶನದ ‘ಬಾಬ್ ಮಾರ್ಲೆ ಪ್ರಮ್ ಕೋಡಿಹಳ್ಳಿ’ (ಜಂಗಮ ಕಲೆಕ್ಟಿವ್).

*ಮಕ್ಕಳಿಗಾಗಿ ನಾಟಕಗಳು (ಸ್ಥಳ: ಕರ್ನಾಟಕ ರಂಗಾಯಣ, ಕಲಬುರಗಿ)*

ಬೆಳಿಗ್ಗೆ 11:00 ಗಂಟೆಗೆ ಶಾಲಾ ಮಕ್ಕಳಿಗಾಗಿ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ:

• ಫೆ. 22 ಮತ್ತು 23: ರಂಗ ಶಂಕರದ ‘ಸರ್ಕಲ್ ಆಫ್ ಲೈಫ್’.

• ಫೆ. 24 ಮತ್ತು 25: ಮುಂಬೈನ ರೆಡ್ ಎಂಟರ್ಟೈನ್ಮೆಂಟ್ನ ‘ಜಾಬ್ ಲೆಸ್ ಜಾಬ್’.

• ಫೆ. 26 ಮತ್ತು 27: ರಂಗ ಶಂಕರದ ‘ಚಿಪ್ಪಿ, ದಿ ಚಿಕ್ಕಲಿ’.

*ನಾಟಕ ಸಂವಾದಗಳು (ಸ್ಥಳ: ಜಿಲ್ಲಾ ಕಸಾಪ ಸಭಾಂಗಣ)*

ಸಮಯ: ಪ್ರತಿದಿನ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00 ರವರೆಗೆ

• ಫೆ. 22: ಕರ್ನಾಟಕದ ಕಂಪನಿ ನಾಟಕಗಳು – ಬಿ. ಜಯಶ್ರೀ.

• ಫೆ. 23: ರಂಗಾಭಿನಯದ ಸೂಕ್ಷ್ಮತೆಗಳು – ಎಚ್. ಕೆ. ಶ್ವೇತಾರಾಣಿ.

• ಫೆ. 24: ನಾಟಕ ಮತ್ತು ಜಾನಪದ ಕಲೆಗಳು – ಕೃಷ್ಣಮೂರ್ತಿ ಹನೂರು.

• ಫೆ. 25: ನಿರ್ದೇಶನದ ಟಿಪ್ಪಣಿಗಳು – ನಟರಾಜ್ ಹೊನ್ನವಳ್ಳಿ.

• ಫೆ. 26: ಭಾರತದ ಅಭಿಜಾತ ರಂಗಭೂಮಿ – ಜೆ. ಶ್ರೀನಿವಾಸಮೂರ್ತಿ.

• ಫೆ. 27: ರಂಗ ಪಠ್ಯವನ್ನು ತಯಾರಿಸಿಕೊಳ್ಳುವುದು – ಲಕ್ಷ್ಮಣ ಕೆ. ಪಿ.

Share post:

spot_imgspot_img

Popular

More like this
Related

ಕಲಬುರಗಿ| ಚಾಂದ ಬೀಬೀ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಕಲಬುರಗಿ: ಚಾಂದ ಬೀ ಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 77ನೆಯ ಗಣರಾಜ್ಯೋತ್ಸವ...

ಕಲಬುರಗಿ| ಹಾಸ್ಟೆಲ್ ಸಿಬ್ಬಂದಿಗಳಿಗೆ ಐದು ತಿಂಗಳಿಂದ ಸಿಗದ ವೇತನ; ಪ್ರತಿಭಟನೆ

ಕಲಬುರಗಿ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕಳೆದ 16-20...

ಕಲಬುರಗಿ| ಕೆ.ಹೆಚ್.ಬಿ ಗ್ರೀನ್ ಪಾರ್ಕಿನಲ್ಲಿ 77ನೇ ಗಣರಾಜ್ಯೋತ್ಸ ಆಚರಣೆ

ಕಲಬುರಗಿ: ಕೆ. ಹೆಚ್.ಬಿ.ಗ್ರೀನ್ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಲ್ಲಿನ...

ಕಲಬುರಗಿ| ರಸ್ತೆ ಸುರಕ್ಷತಾ ಜಾಗೃತಿ ಬೈಕ್ ರ್ಯಾಲಿಗೆ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಚಾಲನೆ

ಕಲಬುರಗಿ: ಪೊಲೀಸರು ಕೇವಲ ಕಾನೂನು ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಕಟ್ಟುನಿಟ್ಟಿನ ಅನುಷ್ಠಾನ...