ಕಲಬುರಗಿ: ಗ್ರಾಮೀಣ ಭಾಗದಲ್ಲಿ ಹಿರಿಯ ನಾಗರಿಕರಲ್ಲಿ ಸಾಮಾನ್ಯವಾಗಿ ಕಂಡುಬರುವ ನಿರ್ಲಕ್ಷ್ಯತೆ ಮತ್ತು ಪ್ರತ್ಯೇಕತೆಯ ಭಾವನೆ ಉಂಟಾಗದಂತೆ ಅವರನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ದೇಹ ಮತ್ತು ಮನಸ್ಸನ್ನು ಸಕ್ರಿಯವಾಗಿಡುವ ಉದ್ದೇಶದಿಂದ ಕಲಬುರಗಿಯಲ್ಲಿ ಪ್ರಾಯೋಗಿಕವಾಗಿ ತೆರೆಯಲಾಗುತ್ತಿರುವ “ಸ್ಪಂದನ” ಗ್ರಾಮ ಹಿರಿಯರ ಕೇಂದ್ರದ ಲಾಂಛನವನ್ನು ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಡಗಡೆ ಮಾಡಿದರು.
ರವಿವಾರ ಕಲಬುರಗಿ ನಗರದ ವಾಜಪೇಯಿ ಬಡಾಣೆಯ ಪ್ರಬುದ್ಧ ಅಕಾಡೆಮಿ ಉದ್ಘಾಟನೆ ಕಾರ್ಯಕ್ರಮದಲ್ಲಿ “ಸ್ಪಂದನ” ಕೇಂದ್ರದ ಪೋಸ್ಟರ್ ಅನಾವರಣ ಮಾಡಿದರು.
ವಲಸೆ ಮತ್ತು ಹೆಚ್ಚುತ್ತಿರುವ ವಿಭಕ್ತ ಕುಟುಂಬಗಳ ವ್ಯವಸ್ಥೆ ಹಾಗೂ ಡಿಜಿಟಲ್ ಕ್ರಾಂತಿಯಿಂದಾಗಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಹಿರಿಯ ನಾಗರಿಕರಲ್ಲಿ ನಿರ್ಲಕ್ಷ್ಯ ಮತ್ತು ಪ್ರತ್ಯೇಕತೆಯ ಭಾವನೆ ಉಂಟಾಗುತ್ತದೆ. ಇದರಿಂದ ಹಿರಿಯ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮ ಕ್ಷೀಣಿಸುವ ಸಾಧ್ಯತೆ ಇದ್ದು, ಇದನ್ನು ತಪ್ಪಿಸಲೆಂದೇ ಈ ಕೇಂದ್ರಗಳು ತೆರೆದು ಅಲ್ಲಿ ಹಿರಿಯ ನಾಗರಿಕರನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಕಲಿಕಾ ಸಂಸ್ಥೆಯು ಟಾಟಾ ಟ್ರಸ್ಟ್ ಸಹಯೋಗದೊಂದಿಗೆ ಮುಂದಿನ ಎರಡು ವರ್ಷದಲ್ಲಿ ರಾಜ್ಯದಾದ್ಯಂತ 300 ಅರಿವು ಕೇಂದ್ರದಲ್ಲಿ ಈ ಸ್ಪಂದನಾ ಕೇಂದ್ರಗಳು ತೆರೆಯುತ್ತಿದ್ದು, ಅದರಂತೆ ಕಲಬುರಗಿಯ ಜಿಲ್ಲೆಯಲ್ಲಿ ಪ್ರಸಕ್ತ 2025-26ನೇ ಸಾಲಿನಲ್ಲಿ 20 ಸ್ಪಂದನ ಕೇಂದ್ರಗಳು ಹಿರಿಯರ ಯೋಗಕ್ಷೇಮ ವಿಚಾರಿಸಲು ಆರಂಭವಾಗಲಿವೆ.
ಈ ಕೇಂದ್ರಗಳಲ್ಲಿ ದಿನದ ಮೊದಲಾರ್ಧದಲ್ಲಿ ಮೀಸಲಾದ ಅವಧಿಯಲ್ಲಿ ಹಿರಿಯ ನಾಗರಿಕರಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಜೊತೆಗೆ ಅವರಿಗೆ ವ್ಯಾಯಾಮ, ಆರೋಗ್ಯ ತಪಾಸಣೆ, ಯೋಗಾಸನ ಮಾಡಿಸುವುದರ ಜೊತೆಗೆ ವಿವಿಧ ಸೌಲಭ್ಯಗಳು ಮತ್ತು ಅಗತ್ಯ ಸೇವೆಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ಎಲೆಲ್ಲಿ ಸ್ಪಂದನ ಕೇಂದ್ರಗಳು?
ಚಿತ್ತಾಪುರ ತಾಲೂಕಿನ ನಾಲವಾರ, ಕೊಲ್ಲೂರ, ಹಲಕಟ್ಟಾ, ಲಾಡ್ಲಾಪುರ, ಸನ್ನತ್ತಿ, ಭಾಗೋಡಿ, ಕಮರವಾಡಿ, ಸಾತನೂರ, ಆಲೂರ(ಬಿ) ಹಾಗೂ ಕಡಬೂರ, ಸೇಡಂ ತಾಲೂಕಿನ ರಿಬ್ಬನಪಲ್ಲಿ, ಕಾನಗಡ್ಡಾ, ಕೋಡ್ಲಾ, ಇಟ್ಕಲ್, ಮುಧೋಳ, ಲಿಂಗಂಪಲ್ಲಿ, ಕುರಕುಂಟಾ, ನೀಲಹಳ್ಳಿ, ಮಳಖೇಡ ಹಾಗೂ ಬಟಗೇರಾ(ಕೆ) ಗ್ರಾಮದ ಅರಿವು ಕೇಂದ್ರದಲ್ಲಿ ಸ್ಪಂದನ ಕೇಂದ್ರಗಳು ತೆರೆಯಲಿವೆ.


