ಕಲಬುರಗಿ : ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಕ್ಷಣವನ್ನು ನೀಡುವುದು ಶಿಕ್ಷಕರ ಮಹತ್ವದ ಜವಾಬ್ದಾರಿಯಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ನಗರದ ಗೋದುತಾಯಿ ಶಿಕ್ಷಣ (ಬಿ.ಎಡ್) ಮಹಾವಿದ್ಯಾಲಯದಲ್ಲಿ ಶನಿವಾರ ಜ್ಞಾನ ಶಕ್ತಿ ವಿದ್ಯಾರ್ಥಿ ಅಕಾಡೆಮಿ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೇ, ಶಿಸ್ತು, ಸಂಸ್ಕಾರ, ಮಾನವೀಯ ಮೌಲ್ಯಗಳು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತಿದೆ.
ಮಹಿಳಾ ಶಿಕ್ಷಣವು ಸಮಾಜದ ಅಭಿವೃದ್ಧಿಯ ಮೂಲಸ್ತಂಭವಾಗಿದೆ. ಒಬ್ಬ ಹೆಣ್ಣುಮಗುವಿಗೆ ಶಿಕ್ಷಣ ನೀಡುವುದು ಎಂದರೆ ಒಂದು ಕುಟುಂಬಕ್ಕೆ, ಒಂದು ಸಮಾಜಕ್ಕೆ ಮತ್ತು ದೇಶದ ಭವಿಷ್ಯಕ್ಕೆ ಬೆಳಕು ನೀಡಿದಂತೆಯೇ. ಮಹಿಳೆಯರು ಶಿಕ್ಷಣದ ಮೂಲಕ ಸ್ವಾವಲಂಬಿಗಳಾಗುತ್ತಾರೆ, ಆತ್ಮವಿಶ್ವಾಸವನ್ನು ಹೊಂದುತ್ತಾರೆ ಮತ್ತು ಸಮಾಜದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಲಿಂ. ಪೂಜ್ಯ ದೊಡ್ಡಪ್ಪ ಅಪ್ಪ ಅವರು ಹೆಣ್ಣು ಮಕ್ಕಳಿಗಾಗಿಯೇ ಅಂದು ಆರಂಭಿಸಿದ ಶಾಲೆ ಇಂದು ಲಿಂ.ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ವಿಶ್ವವಿದ್ಯಾಲಯದ ಮಟ್ಟಕ್ಕೆ ಬೆಳೆಸಿದ್ದಾರೆ. ಈ ಭಾಗದ ಮಹಿಳೆಯರು ಹೆಚ್ಚಿನ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ವೈದ್ಯರಾದ ಡಾ.ಅರುಂಧತಿ ಪಾಟೀಲ ಮಾತನಾಡಿ, ಶರಣ ವಚನಗಳು ಸ್ಫೂರ್ತಿಯಾಗಲಿ, ಶರಣರು, ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಶರಣ ಸಂಸ್ಥಾನ ಈ ಭಾಗದ ವಿದ್ಯಾರ್ಥಿಗಳ ಜೀವನಕ್ಕೆ ದೊಡ್ಡ ಕೊಡುಗೆ ನೀಡಿದೆ, ನೀಡುತ್ತಾ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಮಹಿಳೆಯರಿಗಾಗಿ ಅನೇಕ ಶಾಲಾ ಕಾಲೇಜುಗಳನ್ನು ಆರಂಭಿಸಿ ಈ ಭಾಗದ ಮಹಿಳಾ ಸಬಲೀಕರಣಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಶ್ರಮ, ಸತ್ಯನಿಷ್ಠೆ, ಸೇವಾಭಾವ ಮತ್ತು ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಮಹಿಳೆಯಾಗಿ ನಿಮ್ಮ ಶಕ್ತಿ, ಸಹನೆ ಮತ್ತು ಬುದ್ಧಿಮತ್ತೆಯನ್ನು ಸಮಾಜದ ಒಳಿತಿಗೆ ಬಳಸಿಕೊಳ್ಳಿ ಎಂದರು.
ವೇದಿಕೆ ಮೇಲೆ ಪ್ರಾಚಾರ್ಯೆ ಡಾ.ಸೀಮಾ ಪಾಟೀಲ, ಡಾ.ಎಂ.ಆರ್.ಹುಗ್ಗಿ, ಸುಜಾತಾ ಇದ್ದರು. ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಕಲ್ಪನಾ ಭೀಮಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಉಪಪ್ರಾಚಾರ್ಯೆ ಸುಪ್ರಿಯಾ ನಾಗಶೆಟ್ಟಿ ಸ್ವಾಗತಿಸಿದರು. ಕು.ಸ್ವಾತಿ ಮತ್ತು ಕು.ನಾಗಲಕ್ಷ್ಮಿ ನಿರೂಪಿಸಿದರು. ರ್ಯಾಂಕ್ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಮಾತೋಶ್ರೀ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


