ಕಲಬುರಗಿ ನಗರದಲ್ಲಿನ 7 ಕೆರೆ ಜಾಗ ಒತ್ತುವರಿ ತೆರವುಗೊಳಿಸಿ, ಜಮೀನು ಜಪ್ತಿ ಮಾಡಿ: ನ್ಯಾ. ಬಿ.ಎಸ್.ಪಾಟೀಲ

Date:

Share post:

ಕಲಬುರಗಿ: ಕಲಬುರಗಿ ಮಹಾನಗರದಲ್ಲಿ ನಿಜಾಮರ ಕಾಲದಿಂದ ಇರುವ 7 ಕೆರೆಗಳಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಿ ಜಮೀನನ್ನು ಮರಳಿ ಸರ್ಕಾರದ ಸ್ವಾಧೀನಕ್ಕೆ ಪಡೆಯಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತಿಳಿಸಿದರು.

ಸೋಮವಾರ ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ನಗರದಲ್ಲಿನ ಕೆರೆ ಒತ್ತುವರಿ ಸಂಬಂಧ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಙಧಿಸಿದಂತೆ ಇಂದಿಲ್ಲಿ ವಿಚಾರಣೆ ನಡೆಸಿದ್ದು, ನಿಜಾಮ ಸರ್ಕಾರದಿಂದಲೆ ಜಮೀನು ಹಂಚಿಕೆಯಾಗಿದೆ ಎಂದು ಹೇಳಲಾಗುತ್ತಿದೆಯಾದರು ಅಧಿಕಾರಿಗಳ ಬಳಿ ಅಧಿಕೃತ ದಾಖಲೆ ಇಲ್ಲ. ಕಂದಾಯ ದಾಖಲೆಯಲ್ಲಿ ಅದು ಸರ್ಕಾರಿ ಜಮೀನಾಗಿದೆ. ಹೀಗಾಗಿ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದ ಅವರು, ಒತ್ತುವರಿಯಾದ ಜಾಗದಲ್ಲಿ ಪ್ರಸ್ತುತ ಇರುವ ಜನವಸತಿ ಬಗ್ಗೆಯೂ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದರು.

ಹಿಂದೆ 3-4 ವರ್ಷದ ಹಿಂದೆ ಕಲಬುರಗಿಗೆ ಬಂದು ಹೋಗಿದ್ದೆ. ಇದೀಗ ನೋಡಿದರೂ ಇಲ್ಲಿ ಇನ್ನು ಕಸದ ಸಮಸ್ಯೆ ಇದೆ. ಕಸ ಸಂಗ್ರಹಣೆ ಸರಿಯಾಗಿ ನಡೆಯುತ್ತಿಲ್ಲ. ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಅಧಿಕಾರಿ ವರ್ಗ ಮಾಡಬೇಕು. ಜನರು ಸಹ ತಮ್ಮ ನಗರ ಸ್ವಚ್ಛವಾಗಿರಿಸಲು ಜಾಗೃತರಾಗುವ ಅವಶ್ಯಕತೆ ಇದೆ ಎಂದು ನ್ಯಾ.ಬಿ.ಎಸ್.ಪಾಟೀಲ ಒತ್ತಿ ಹೇಳಿದರು.

ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಲೋಕಾಯುಕ್ತ ಸಂಸ್ಥೆಯ 8 ತಂಡಗಳು ಜೇವರ್ಗಿ, ಆಳಂದ, ಕಲಬುರಗಿ ತಹಶೀಲ್ದಾರ ಮತ್ತು ಉಪ ನೋಂದಣಾಧಿಕಾರಿಗಳ ಕಚೇರಿ, ಬಿ.ಇ.ಓ ಕಚೇರಿ, ಅಗ್ನಿಶಾಮಕ ಠಾಣೆ, ತಾಲೂಕ ಪಂಚಾಯತ್ ಕಚೇರಿ, ಡಿ.ಸಿ. ಕಚೇರಿ, ಆರ್.ಟಿ.ಓ. ಚೆಕ್ ಪೋಸ್ಟ್ ಹೀಗೆ ಇಬ್ಬರು ನ್ಯಾಯಾಂಗ ಅಧಿಕಾರಿಗಳು ಸೇರಿದಂತೆ ಲೋಕಾಯುಕ್ತ ಎಸ್.ಪಿ., ಡಿ.ವೈ.ಎಸ್.ಪಿ, ಪಿ.ಐ ಸೇರಿದಂತೆ ಸಿಬ್ಬಂದಿ ವರ್ಗ ತಪಾಸಣೆ ಮಾಡಿ ಅನೇಕ ನ್ಯೂನತೆಗಳು, ಅಕ್ರಮಗಳ ಕುರಿತು ಪತ್ತೆ ಹಚ್ಚಲಾಗಿದೆ. ಇನ್ನು ತಪಾಸಣೆ ವೇಳೆಯಲ್ಲಿ ಬೀದರ ಜಿಲ್ಲೆಯ ಹುಮನಾಬಾದ ಚೆಕ್ ಪೋಸ್ಡ್ ನಲ್ಲಿ ಏಜೆಂಟರ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ. ಆಳಂದ ಚೆಕ್ ಪೋಸ್ಟ್ನಲ್ಲಿ ಅಕ್ರಮವಾಗಿ ಚೆಕ್ ಪೋಸ್ಟ್ ತೆರೆದು ಹಣ ವಸೂಲು ಮಾಡುತ್ತಿರುವುದು ಕಂಡುಬಂದಿದೆ. ಈಗಾಗಲೆ ಸಂಬಂಧಪಟ್ಟವರ ಮೇಲೆ ಎಫ್.ಐ.ಆರ್. ದಾಖಲಿಸಿದ್ದು, ಇದೀಗ ಅಕ್ರಮ ಚೆಕ್ ಪೋಸ್ಟ್ ತೆರವುಗೊಳಿಸಿದೆ. ಇಂದಿಲ್ಲಿ ನಡೆದ ಸಭೆಯಲ್ಲಿ ತಪಾಸಣೆಯಲ್ಲಿ ಕಂಡುಬಂದ ನ್ಯೂನತೆಗಳನ್ನ್ಲು ಸರಿಪಡಿಸುವಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ಮೂರು ದಿನದಿಂದ ಬೀದರ, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸುಮಾರು 80-85 ಅಧಿಕಾರಿ-ಸಿಬ್ಬಂದಿಗಳ ತಂಡ ತಪಾಸಣೆಯಲ್ಲಿ ನಿರತವಾಗಿದೆ ಎಂದರು.

ಲೋಕಾಯಕ್ತ ಸಂಸ್ಥೆ ನಡೆಸುವ ದಾಳಿ ಪ್ರಕರಣಗಳಲ್ಲಿ ಶೇ.25ರಷ್ಟು ಅಪಾದಿತರಿಗೆ ಮಾತ್ರ ಶಿಕ್ಷೆಯಾಗುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನ್ಯಾ. ಬಿ.ಎಸ್.ಪಾಟೀಲ ಅವರು, ಶೇ.60-75 ರಷ್ಟು ಶಿಕ್ಷೆ ಆಗಬೇಕೆಂಬುದು ನಮ್ಮ ಉದ್ದೇಶವಾಗಿದೆಯಾದರು ಪ್ರಕರಣಗಳಲ್ಲಿ ದೂರು ನೀಡಿದ ವ್ಯಕ್ತಿಯೆ ನಂತರ ದೂರು ನಾನು ಕೊಟ್ಟಿಲ್ಲ ಎಂದು ಉಲ್ಟಾ ಹೊಡೆಯುತ್ತಾರೆ. ಸಾಕ್ಷಿ ಹೇಳಬೇಕಾದ ಛಾಯಾ ಸರ್ಕಾರಿ ನೌಕರ ಸರಿಯಾಗಿ ಹೇಳಿಕೆ ನೀಡದ ಕಾರಣ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜೂನ್ 2022ರಲ್ಲಿ ತಾವು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ 8 ಸಾವಿರ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು. ಇದುವರೆಗೆ ಹೊಸದಾಗಿ 44 ಸಾವಿರ ಪ್ರಕರಣ ದಾಖಲಿಸಿ ಇದರಲ್ಲಿ 23 ಸಾವಿರ ಪ್ರಕರಣ ವಿಲೇವಾರಿ ಮಾಡಲಾಗಿದೆ. ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರ ಪಾತ್ರ ಇದೆ. ಸರ್ಕಾರಿ ನೌಕರ ಇರುವುದು ಜನರ ಕೆಲಸಕ್ಕೆ ಎಂಬುದನ್ನು ಜನ ಮೊದಲು ಅರ್ಥ ಮಾಡಿಕೊಳ್ಳಬೇಕು. ದುಡ್ಡು ಕೊಡದೆ ಕೆಲಸ ಮಾಡಿಸಿಕೊಳುವ ಪ್ರವೃತ್ತಿ ಈ ಭಾಗದಲ್ಲಿ ಹೆಚ್ಚು ಬೆಳೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಲೋಕಾಯುಕ್ತ ಹೆಸರಿಲ್ಲಿ ವಸೂಲಿಗಿಳಿದರೆ ದೂರು ಕೊಡಿ:

ಇನ್ನು ಇತ್ತೀಚೆಗೆ ಲೋಕಾಯುಕ್ತ ಪೊಲೀಸ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುವ ಪ್ರವೃತ್ತಿ ಅಲ್ಲಲ್ಲಿ ಕೇಳಿಬರುತ್ತಿದೆ. ಲೋಕಾಯುಕ್ತ ಎಂದಾಕ್ಷಣ ಅಧಿಕಾರಿಗಳು ಹಣ ನೀಡುತ್ತಿದ್ದಾರೆ. ಹೀಗೆ ಲೋಕಾಯುಕ್ತ ಹೆಸರಿನಲ್ಲಿ ಯಾರೆ ದುಡ್ಡು ಕೇಳಿದಲ್ಲಿ ಅಗತ್ಯ ದಾಖಲೆಗಳೊಂದಿಗೆ ಲೋಕಾಯುಕ್ತ ಸಂಸ್ಥೆಗೆ ದೂರು ಕೊಡಿ. ಮುಂದಿನದು ಲೋಕಾಯುಕ್ತ ಸಂಸ್ಥೆ ನೋಡಿಕೊಳ್ಳಲಿದೆ ಎಂದು ಬಿ.ಎಸ್.ಪಾಟೀಲ ಸ್ಪಷ್ಟಪಡಿಸಿದರು.

ಯುದ್ದೋಪಾದಿಯಲ್ಲಿ ಆರ್.ಓ. ಪ್ಲ್ಯಾಂಟ್ ಸರಿಪಡಿಸಿ:

ಕಲಬುರಗಿ ಜಿಲ್ಲೆಯಾದ್ಯಂತ 2011-12ರಲ್ಲಿ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಗ್ರಾಮೀಣದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ 510 ನೀರು ಶುದ್ಧಿಕರಣ ಘಟಕ ಸ್ಥಾಪಿಸಲಾಗಿದ್ರು, ಇದರಲ್ಲಿ ಪ್ರಸ್ತುತ ಬಳಕೆಯಲ್ಲಿ 132 ಮಾತ್ರ ಇವೆ. 336 ಕಾರ್ಯಚರಣೆ ಇಲ್ಲದೆ ಸ್ಥಗಿತಗೊಂಡಿವೆ. ಕಲುಷಿತ ನೀರು ಸೇವನೆಯಿಂದಾಗುವ ಅವಘಡ ತಪ್ಪಿಸಲೆಂದೆ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆಯಾದರು, ಅಧಿಕಾರಿಗಳ ಬೇಜವಾಬ್ದಾರಿತನ, ನಿಷ್ಕಾಳಜಿಯಿಂದ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿವೆ. ಇದೆಲ್ಲವನ್ನು ಯುದ್ದೋಪಾದಿಯಲ್ಲಿ ಸರಿಪಡಿಸಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಸದರಿ ಘಟಕವನ್ನು ಮರು ಚಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ಸಹ ಮಾಡಲಿದೆ ಎಂದು ನ್ಯಾ.ಬಿ.ಎಸ್.ಪಾಟೀಲ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಷ್ ಖರ್ಬಿಕರ್, ಕಾರ್ಯದರ್ಶಿ ಶ್ರೀನಾಥ್ ಕೆ., ಅಪರ ನಿಬಂಧಕ(ವಿಚಾರಣೆ) ವಿಜಯಾನಂದ., ಕಲಬುರಗಿ ಲೋಕಾಯುಕ್ತ ಎಸ್.ಪಿ. ಸಿದ್ದರಾಜು, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರಾದ ಸಾಹಿತ್ಯ, ಪ್ರಭುರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಚಾಂದ ಬೀಬೀ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಕಲಬುರಗಿ: ಚಾಂದ ಬೀ ಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 77ನೆಯ ಗಣರಾಜ್ಯೋತ್ಸವ...

ಕಲಬುರಗಿ| ಹಾಸ್ಟೆಲ್ ಸಿಬ್ಬಂದಿಗಳಿಗೆ ಐದು ತಿಂಗಳಿಂದ ಸಿಗದ ವೇತನ; ಪ್ರತಿಭಟನೆ

ಕಲಬುರಗಿ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕಳೆದ 16-20...

ಕಲಬುರಗಿ| ಕೆ.ಹೆಚ್.ಬಿ ಗ್ರೀನ್ ಪಾರ್ಕಿನಲ್ಲಿ 77ನೇ ಗಣರಾಜ್ಯೋತ್ಸ ಆಚರಣೆ

ಕಲಬುರಗಿ: ಕೆ. ಹೆಚ್.ಬಿ.ಗ್ರೀನ್ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಲ್ಲಿನ...

ಕಲಬುರಗಿ| ರಸ್ತೆ ಸುರಕ್ಷತಾ ಜಾಗೃತಿ ಬೈಕ್ ರ್ಯಾಲಿಗೆ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಚಾಲನೆ

ಕಲಬುರಗಿ: ಪೊಲೀಸರು ಕೇವಲ ಕಾನೂನು ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಕಟ್ಟುನಿಟ್ಟಿನ ಅನುಷ್ಠಾನ...