ಕಲಬುರಗಿ: ಪ್ರಾಕೃತಿಕವಾಗಿ ಕಲಬುರಗಿ ಜಿಲ್ಲೆಯ ಬಹುತೇಕ ನೆಲದ ಒಳ ಪದರದಲ್ಲಿ ಸುಣ್ಣದ ಕಲ್ಲು ಒಳಗೊಂಡಿರುವ ಹಿನ್ನಲೆಯಲ್ಲಿ ಇಲ್ಲಿನ ಮಣ್ಣಿಗೆ ಅತಿ ಹೆಚ್ಚು ನೀರು ಅಪಾಯಕಾರಿಯಾಗಿದೆ, ಹಾಗಾಗಿ ಬೆಳೆಗಳು ಹಾನಿಗೀಡಾಗುತ್ತಿದೆ ಎಂದು ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ಹೇಳಿದ್ದಾರೆ.
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ತೊಗರಿ, ಹತ್ತಿ ಹಾಗೂ ಇತರೆ ಬೆಳೆಗೆ ಬರಬಹುದಾದ ಕೀಟ ರೋಗ ಬಾಧೆ ಹಾಗೂ ಅದರ ನಿರ್ವಹಣೆಯ ಕುರಿತು ವಿವರಿಸಲು ನಮ್ಮ ಈ ನೆಲದ ಮಣ್ಣು ಒಂದು ಮಳೆಗೆ 15 ದಿನಗಳ ವರೆಗೆ ತೇವಾಂಶ ಹಿಡಿದಿಡುವ ಶಕ್ತಿ ಹೊಂದಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ 2025 ನೇ ಸಾಲಿನ ಜನವರಿ ಯಿಂದ ಸೆಪ್ಟೆಂಬರ್ ವರೆಗೆ ಈ 9 ತಿಂಗಳಲ್ಲಿ ವಾಡಿಕೆಯಂತೆ 609 ಮಿ.ಮೀ ಮಳೆಯಾಗಬೇಕಾಗಿದ್ದು, 900 ಮಿ.ಮೀ ಎಂದರೆ ಶೇ 48% ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಒಟ್ಟು 11 ತಾಲ್ಲೂಕುಗಳಲ್ಲಿ ಚಿಂಚೋಳಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕಾಳಗಿ ವಾಡಿಕೆಯಂತಾಗಿದೆ, ಉಳಿದ 9 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಅದರಲ್ಲೂ ಕಳೆದ ಮೇ ತಿಂಗಳಿನಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೊಲಗಳಲ್ಲಿ ನೀರು ನಿಲ್ಲುವ ಮೂಲಕ ಬೆಳೆಗಳಿಗೆ ಅನೇಕ ರೋಗಗಳು ಭಾದಿಸುತ್ತಿರುವುದು ರೈತರಿಗೆ ಸಂಕಷ್ಟ ತಂದಿದೆ ಎಂದರು.

ಮುಂಗಾರಿನಲ್ಲಿ ಬಿತ್ತಿರುವ ಜಿಲ್ಲೆಯ ಮೂಲ ಬೆಳೆಗಳಾದ ತೊಗರಿ, ಹತ್ತಿ, ಕಬ್ಬು ಸೇರಿದಂತೆ ಇತರೆ ದ್ವೀದಳ ಧಾನ್ಯಗಳು ಅತಿವೃಷ್ಟಿಯಿಂದ ನೆಟೆ ರೋಗ, ಸೊರಗು ರೋಗ, ಸೇರಿದಂತೆ ಹಲವು ರೋಗಗಳಿಗೆ ತುತ್ತಾದ ಈ ಸಮಯದಲ್ಲಿ ರೈತರು ಅನುಸರಿಸಬೇಕಾದ ಬೆಳೆ ಸಂರಕ್ಷಣೆಯ ವಿಧಾನಗಳು, ಬಳಸಬೇಕಾದ ಕೀಟನಾಶಕಗಳ ಕುರಿತು ವಿವರಣೆ ನೀಡಿದರು.
ಜಿಲ್ಲೆಯಲ್ಲಿ ಅವಶ್ಯಕತೆಗನುಗುಣವಾಗಿ 2025 ರ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳ ಬೇಡಿಕೆಯನ್ನು ಈಗಾಗಲೇ ಕೇಂದ್ರ ಕಚೇರಿಗೆ ಕಳುಹಿಸಿ ಕೊಡಲಾಗಿದೆ. ಜೋಳ ಕಡಲೆ ಶೇಂಗಾ ಕುಸುಬೆ ಮತ್ತು ಮೆಕ್ಕೆಜೋಳದ ಬಿತ್ತನೆ ಬೀಜಗಳು ಸಾಕಷ್ಟು ಪ್ರಮಾಣದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಶೇಖರಿಸಿಡಲಾಗಿದ್ದು, ಕುಸುಬಿ ಕಡಲೆ ಮತ್ತು ಶೇಂಗಾದ ಮತ್ತಷ್ಟು ಬಿತ್ತನೆ ಬೀಜಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ.
ಕೇಂದ್ರದ ಎನ್ ಡಿ ಆರ್ ಎಫ್/ಎಸ್ ಡಿ ಆರ್ ಎಫ್ ಮಾರ್ಗಸೂಚಿ ಅನ್ವಯ ಅತಿವೃಷ್ಟಿಯಿಂದ ಹಾಳಾದ ರೈತರ ಬೆಳೆಗಳಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದ್ದು, ಬೆಳೆ ವಿಮೆ ಪರಿಹಾರ ಪ್ರತ್ಯೇಕವಾಗಿರುತ್ತದೆ. ಈ ಆಗಷ್ಟ ಮಾಹೆಯವರೆಗೆ ಮಾಡಿರುವ ಸಮೀಕ್ಷೆಯಲ್ಲಿ 105852 ಹೆಕ್ಟೇರ್ ಬೆಳೆ ನಷ್ಟಕ್ಕೆ ರೂ 90 ಕೋಟಿ ರೂ. ಪರಿಹಾರ ಕೇಳಲಾಗಿದ್ದು, ಸೆಪ್ಟೆಂಬರ್ ಮಾಹೆಯ ಸಮೀಕ್ಷೆ ನಂತರ ಬೆಳೆಹಾನಿ ಕ್ಷೇತ್ರ ಹೆಚ್ಚಾಗಬಹುದು ಹಾಗೂ ಪರಿಹಾರ ಬೇಡಿಕೆ ಹಣ ಹೆಚ್ಚಾಗಲಿದೆ ಎಂದು ತಿಳಿಸಿದರು.
ರಸಗೊಬ್ಬರ ಕೊರತೆಯಿಲ್ಲ:
ಜಿಲ್ಲೆಯಲ್ಲಿ ರಸಗೊಬ್ಬರ ಪ್ರಸ್ತುತ ದಾಸ್ತಾನು ಕೊರತೆ ಇರುವುದಿಲ್ಲ, ಹಿಂಗಾರು ಬಿತ್ತನೆಗಾಗಿ ಮುಂಜಾಗ್ರತ ಕ್ರಮಕೈಗೊಂಡು 5000 ಟನ್ ಯೂರಿಯ ಹಾಗೂ 5000 ಟನ್ ಡಿ.ಎ.ಪಿ ಒದಗಿಸಲು ಬೇಡಿಕೆ ಸಲ್ಲಿಸಲಾಗಿದೆ. ಬೆಳೆ ವಿಮೆಯಡಿ ಈಗಾಗಲೇ ಜಿಲ್ಲೆಯಲ್ಲಿ 3,00,952 ರೈತರು ಬೆಳೆ ವಿಮೆ ಮಾಡಿಸಿದ್ದು, ಅದರಲ್ಲಿ 1,78,324 ಬೆಳೆ ನಾಶ ಕುರಿತಂತೆ localised calamity ಯಲ್ಲಿ ದೂರುಗಳನ್ನು ಈಗಾಗಲೇ ಸ್ವೀಕರಿಸಲಾಗಿದ್ದು, ಮಳೆ ಮುಂದುವರೆದಿರುವ ಹಿನ್ನಲೆಯಲ್ಲಿ ಸೆಪ್ಟೆಂಬರ್ ಮಾಹೆಯ ಅಂತ್ಯದವರೆಗೆ ಮತ್ತಷ್ಟು ದೂರುಗಳು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನಿ ಹಾಗೂ ಕೆ.ವಿ.ಕೆ ಮುಖ್ಯಸ್ಥ ಡಾ.ರಾಜು ತೆಗ್ಗೆಳ್ಳಿ ಮಾತನಾಡಿ, ಇಲ್ಲಿನ ನೆಲ ಹೆಚ್ಚಿನ ನೀರನ್ನು ಕುಡಿಯದಿರುವ ಕಾರಣಕ್ಕಾಗಿ ಬೋದುಗಳನ್ನು ಮಾಡಿ ಬಿತ್ತುವುದು ಉತ್ತಮ ಮಾರ್ಗವಾಗಿದೆ ಹಾಗೂ ಬೋದಿನ ನಡುವೆ ನಿಲ್ಲುವ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳುವುದು ಸೇರಿದಂತೆ ನೀರು ಹಿಂಗಿಸುವಅಥವಾ ಹೊರಗೆ ಹರಿಸುವ ವ್ಯವಸ್ಥೆಯನ್ನು ರೈತರು ಮಾಡಿಕೊಳ್ಳಬೇಕೆಂದರು.
ನೀರು ನಿಂತು ನಟೆ ಬಂದಿರುವ ಬೆಳೆಗಳನ್ನು ಮುಂಜಾಗ್ರತ ಕ್ರಮ ಕೈಗೊಂಡಲ್ಲಿ ಕಾಪಾಡಿಕೊಳ್ಳಬಹುದಾಗಿದೆ. ಈ ಸಮಯದಲ್ಲಿ ಮುಖ್ಯವಾಗಿ ತೊಗರಿ ಬೆಳೆಗೆ ಕಾಡುವ ಹಳದಿ ರೋಗಕ್ಕೆ ಯೂರಿಯ ಸಿಂಪರಣೆ ಮೂಲಕ ಸರಿ ಪಡಿಸಬಹುದು ಎಂದು ವಿವರಿಸಿ ಅಗತ್ಯ ಸಹಾಯಕ್ಕಾಗಿ ಸಮೀಪದ ರೈತ ಸಂಪರ್ಕ ಕೇಂದ್ರಗಳ ಸಹಾಯ ಪಡೆಯಲು ತಿಳಿಸಿದರು.
ತೊಗರಿ ಮತ್ತು ಹತ್ತಿ ಸೇರಿದಂತೆ ಇತರೆ ಬೆಳೆಗಳಿಗೆ ಕಾಡುವ ಹುಳಗಳ ನಾಶಕ್ಕೆ ಪ್ರಾಕೃತಿಕವಾಗಿ ಪಕ್ಷಿಗಳ ಆಹಾರವನ್ನಾಗಿ ಬಳಸುತ್ತವೆ. ಕೃಷಿ ವಿವಿ ಅಭಿವೃದ್ಧಿ ಪಡಿಸಿರುವ ಮೋಹಕ ಬಲೆಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಒಂದಕ್ಕೆ 85 ರೂ. ನಂತೆ ಸಿಗುತ್ತವೆ, ಎಕ್ಕರೆಗೆ ಎರಡು ಅಥವಾ ಅದಕ್ಕಿಂತ ಹೆ್ಚ್ಚಿನ ಬಲೆಗಳನ್ನು ಬಳಸುವುದು ಸೂಕ್ತ. ಅತಿ ಹೆಚ್ಚಿನ ಸಮಸ್ಯೆ ಇದ್ದಲ್ಲಿ ಕೀಟನಾಶಕಗನ್ನು ಬಳಸಬಹುದಾಗಿದೆ. ಕೃಷಿ ಇಲಾಖೆ ಶೇ 50% ರಿಯಯಾತಿಯಲ್ಲಿ ರೈತರಿಗೆ ಕೀಟ ನಾಶಕಗಳನ್ನು ಒದಗಿಸುತ್ತಿದೆ ಎಂದು ವಿವರಿಸಿದರು.
ತೊಗರಿಯಲ್ಲಿ ಕಾಂಡ ಮಚ್ಚೆ ರೋಗ ಕಾಣಿಸಿಕೊಂಡಿದ್ದು Ridomil Gold 2ಗ್ರಾಂ /ಲೀ ನೀರಿನಲ್ಲಿ ಬೆರೆಸಿ ಕಾಂಡಕ್ಕೆ ಸಿಂಪಡಿಸಿ.
ಕಬ್ಬು ಬೆಳೆಗೆ ಬಿಳಿನೊಣ ಸಮಸ್ಯೆ ಸೇರಿದಂತೆ ಎಲೆಯಂಚು ಕಂದು ಬಣ್ಣಕ್ಕೆ ತಿರುಗುವ ರೋಗಕ್ಕೆ ಯೂರಿಯಾ ಸಿಂಪರಣೆ ದಿವ್ಯಾ ಔಷಧಿಯಾಗಿದೆ ಎಂದು ಹೇಳಿದ ಅವರು ಕಬ್ಬು-ತೊಗರಿ ಸೇರಿದಂತೆ ಒಂದೇ ರೀತಿಯ ಬೆಳೆಗಳನ್ನು ಪದೇ ಪದೇ ಬೆಳೆಯುವುದು ಸಹ ಹಲವು ರೋಗಗಳಿಗೆ ಆಹ್ವಾನ ನೀಡಿದಂತೆ, ರೈತರು ಒಂದಿಷ್ಟು ವರ್ಷಗಳಿಗೊಮ್ಮೆ ಬೆಳೆಗಳನ್ನು ಬದಲಾಯಿಸಬೇಕು, ಇದರಿಂದ ರೋಗದ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಜ್ಞಾನಿ ಝಹಿರ್ ಅಹ್ಮದ್ ಮಾತನಾಡಿ, ಬೆಳೆಗಳಲ್ಲಿ ರೋಗಗಳು ಕಂಡು ಬಂದರೆ ಕ್ಷಣಿಕವಾಗಿ ರೈತರು ಹೆದರಬಾರದು, ಅದನ್ನ ರಕ್ಷಿಸಲು ಏನೆಲ್ಲ ಮಾಡಬೇಕೆಂದು ವಿಜ್ಞಾನಿಗಳಿಂದ ಸಲಹೆ ಪಡೆದರೆ ರೋಗದಿಂದ ಬೆಳೆಯುತ್ತಿರುವ ಬೆಳೆಯನ್ನು ಮತ್ತೆ ಅದಕ್ಕೆ ರೂಪ ಕೊಡಬಹುದು ಎಂದರು.
ಮುಂಬರುವ ಹಿಂಗಾರು ಬೆಳೆಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಇಲಾಖೆ ಹಾಗೂ ಕೆ.ವಿ.ಕೆ ವತಿಯಿಂದ ಮುಂದಿನ ಅಕ್ಟೋಬರ್ ಮಾಹೆಯ 3 ರಿಂದ 18 ರ ವರೆಗೆ “ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು” ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಇದೇ ವೇಳೆಯಲ್ಲಿ ಜಂಟಿ ನಿರ್ದೇಶಕ ಸಮದ್ ಪಟೇಲ್ ಅವರು ತಿಳಿಸಿದರು.


