ಕಲಬುರಗಿ: ಸರಳತೆ ಕಾರಣದಿಂದಲೇ ಶಿಕ್ಷಕರು ಸಮಾಜದಲ್ಲಿ ಗೌರವದ ಸ್ಥಾನ ಪಡೆದುಕೊಂಡಿದ್ದಾರೆ. ಶಿಕ್ಷಕರ ಪರಿಶ್ರಮ ವಿದ್ಯಾರ್ಥಿಗಳ ಏಳಿಗೆಯಲ್ಲಿ ಅಡಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಎನ್ ಪಿ ಎಸ್ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ನಮೋಶಿ ಹೇಳಿದರು.
ಅವರು ಎನ್ ಪಿ ಎಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ, ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ , ಉಪನ್ಯಾಸಕರ ಸಂಘ ಹಾಗೂ ಧಾರವಾಡದ ಪಿ.ಎಸ್ ಹಂಚಿನಮನಿ ಸಂಚಾಲಿತ ಎನ್ ಪಿ ಎಸ್ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಸುಧಾರಣೆಗಾಗಿ ಇತಿಹಾಸ ಹಾಗೂ ಕನ್ನಡ ವಿಷಯಗಳ ಉಪನ್ಯಾಸಕರ ಒಂದು ದಿನದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪಿಯುಸಿ ದ್ವಿತೀಯ ವರ್ಷದ ಹಂತವು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವವಾಗಿರುವದರಿಂದ ವೃತ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳು ಮದ್ಯೆಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಯ ಮಾಡುತ್ತಿದ್ದಾರೆ. ಆದರೂ ನಮ್ಮ ಕಲ್ಯಾಣ ಕರ್ನಾಟಕದ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ ಸುಧಾರಣೆ ಕಾಣುತ್ತಿಲ್ಲ, ಅದಕ್ಕಾಗಿ ಇಲಾಖೆಯ ಹಾಗೂ ಪ್ರಾಚಾರ್ಯರ, ಉಪನ್ಯಾಸಕರ ಸಂಘಟನೆಗಳು ಈ ರೀತಿಯ ಪುನಶ್ಚೇತನ ಕಾರ್ಯಾಗಾರ ಹಮ್ಮಿಕೊಳ್ಳುತ್ತಿರುವದು ಶ್ಲಾಘನೀಯ ಎಂದು ಹೇಳಿದರು.
ಇಂತಹ ಕಾರ್ಯಕ್ರಮಗಳಿಗೆ ಸದಾ ನನ್ನ ಬೆಂಬಲವಿದೆ ಎಂದು ಹೇಳಿದರು.
ಪ್ರಾಚಾರ್ಯ ಸಂಘದ ಅಧ್ಯಕ್ಷ ರಾದ ಬಸವರಾಜ ಬಿರಾಜದಾರ ಮಾತನಾಡಿ, ಕಲ್ಯಾಣ ಕರ್ನಾಟಕದ ಉಪನ್ಯಾಸಕರ ನಡೆ ಪಿಯುಸಿ ಫಲಿತಾಂಶ ಹೆಚ್ಚಿಸುವ ಕಡೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ಉಪನಿರ್ದೇಶಕ ಸುರೇಶ್ ಅಕ್ಕಣ್ಣ ಮಾತನಾಡಿ, ಕಲಬುರಗಿ ಜಿಲ್ಲೆಯ ಈ ವರ್ಷದ ಫಲಿತಾಂಶ 31 ನೇ ಸ್ಥಾನದಲ್ಲಿದ್ದು ಅದನ್ನು ಈ ಬಾರಿ 13 ನೇ ಸ್ಥಾನಕ್ಕೆ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಉಪನ್ಯಾಸಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಂಡು ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಜಯಪೂರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಆರ್ ಸಿ ಹಿರೇಮಠ ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕುಬಿಹಾಳ ಎಸ್ ಯು ಎಸ್ ಜೆ ಕಾಲೇಜಿನ ಉಪನ್ಯಾಸಕರಾದ ತೌಸಿಪ್ ಕಲ್ಮನಿಯವರನ್ನು ಸನ್ಮಾನಿಸಲಾಯಿತು.
ಅನುದಾನಿತ ಕಾಲೇಜುಗಳ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷರಾದ ಬಿ.ಎಸ್ ಮಾಲಿಪಾಟೀಲ ಮಾತನಾಡಿ, ಪುನಶ್ಚೇತನ ಕಾರ್ಯಾಗಾರವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು ಕಾರಣರಾದ ಅನುದಾನಿತ ಸಿಬ್ಬಂದಿಗಳಲ್ಲಿ ಒಬ್ಬರಾದ ಐ.ಕೆ ಪಾಟೀಲ್ ಅವರ ಕಾರ್ಯ ಶ್ಲಾಘನೀಯ ಎಂದರು.
ಉಪನ್ಯಾಸಕ ಐ.ಕೆ ಪಾಟೀಲ್ ಮಾತನಾಡಿ, ಶೈಕ್ಷಣಿಕ ಸುಧಾರಣೆ ಬಗ್ಗೆ ಅತ್ಯಂತ ಕಳಕಳಿಯಿಂದ ಹೊಂದಿರುವ ಶಶೀಲ್ ನಮೋಶಿ ಅವರು ಫಲಿತಾಂಶ ಸುಧಾರಣೆ ಕಾರ್ಯಗಳಿಗೆ ನಮಗೆ ತಮ್ಮ ಸಂಸ್ಥೆಗಳ ಶಾಲಾ ಕಾಲೇಜುಗಳಲ್ಲಿ ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ, ಅವರ ಬೆಂಬಲಕ್ಕೆ ಋಣಿಯಾಗಿದ್ದೇವೆ ಎಂದರು.
ನೋಡಲ್ ಅಧಿಕಾರಿಗಳು ಹಿರಿಯ ಪ್ರಾಚಾರ್ಯರಾದ ಶ್ರೀಶೈಲಪ್ಪ ಬೋನಾಳ, ಪದವಿಪೂರ್ವ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗಾಧಿಕಾರಿ ಡಾ.ಚಂದ್ರಶೇಖರ ದೊಡಮನಿ, ಕನ್ನಡ ವಿಷಯದ ಸಂಘಟನಾಧಿಕಾರಿಗಳಾದ ದೇವಿದಾಸ ಪವಾರ್, ಅಶೋಕ್ ನಂದಿ, ಅನುದಾನಿತ ಪದವಿಪೂರ್ವ ಕಾಲೇಜುಗಳ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಬಿ.ಎಸ್ ಮಾಲಿಪಾಟೀಲ, ಎನ್ ಪಿ ಎಸ್ ಕಾಲೇಜಿನ ಪ್ರಾಚಾರ್ಯರಾದ ಮಟ್ಟಾಥಿಲಾನಿ ದೇವಸ್ಸಿ ಆಡಳಿತಾಧಿಕಾರಿ ವಿಶ್ವನಾಥ್ ಗರುಡ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕರ ವಿಜಯಕುಮಾರ್ ರೋಣದ ಪ್ರಾರ್ಥಿಸಿದರು,ಉಪನ್ಯಾಸಕಿ ಶ್ವೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಸಂಗೀತಾ ಸಡಕೀನ ವಂದಿಸಿದರು.


