ಕಲಬುರಗಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಐದಾರು ಜನರ ಗುಂಪೊಂದು ಸೇರಿ ರೌಡಿಶೀಟರ್ ಓರ್ವನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಶಹಾಬಾದ್ ಹೊರವಲಯದ ಭಂಕೂರ ಸಮೀಪ ಗುರುವಾರ ಸಂಜೆ ನಡೆದಿದೆ.
ರೌಡಿಶೀಟರ್ ಆಗಿರುವ ಹಾಗೂ 134 ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶಂಕರ ಅಳ್ಕೊಳ್ಳಿ ಮೇಲೆಯೇ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.
ಅಲ್ಲಿನ ಐನಾಪುರ ಧಾಬಾದಲ್ಲಿ ಸಂಬಂಧಿಕರು, ಗೆಳೆಯರೊಂದಿಗೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಬಿಳಿ ಬಣ್ಣದ ಬೊಲೇರೊದಲ್ಲಿ ಬಂದ ಯುವಕರ ಗುಂಪು, ಶಂಕರ ಹೆಸರು ಹೇಳಿ ಕೂಗಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದೆ, ಹಲ್ಲೆಯಿಂದ ಶಂಕರನ ತಲೆಗೆ ಗಾಯವಾಗಿದ್ದು, ಸಣ್ಣಪುಟ್ಟ ಗಾಯವಾಗಿವೆ ಎಂದು ಹೇಳಲಾಗಿದೆ. ಅಲ್ಲಿಂದ ಕಾಲ್ಕಿತ್ತ ಶಂಕರ ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ಪರಾರಿಯಾಗಿದ್ದರಿಂದ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಧಾಬಾದಲ್ಲಿ ನಡೆಯುತ್ತಿರುವ ಗದ್ದಲ ನೋಡಿದ ಹೈವೇ ಪೆಟ್ರೋಲಿಂಗ್ ವಾಹನದಲ್ಲಿದ್ದ ಪೊಲೀಸರು ಧಾಬಾಕ್ಕೆ ಬಂದಿದ್ದಾರೆ. ಪೊಲೀಸರು ವಾಹನದ ಕೀ ಅಲ್ಲೆ ಬಿಟ್ಟಿದ್ದರಿಂದ ಶಂಕರ ವಾಹನದ ಹಿಂದೆ ಕುಳಿತ್ತಿದ್ದಾನೆ. ಹಲ್ಲೆಕೋರರು ಹೈವೇ ಪೆಟ್ರೋಲಿಂಗ್ ವಾಹನದ ಮೇಲೆ ದಾಳಿ ಮಾಡಿದಾಗ, ಶಂಕರ ಚಾಲಕನ ಸ್ಥಾನದಲ್ಲಿ ಕುಳಿತು ತಾನೇ ವಾಹನ ಚಲಾಯಿಸಿಕೊಂಡು ಕಲಬುರಗಿಯತ್ತ ಹೋಗಿದ್ದಾನೆ. ಹಲ್ಲೆಕೋರರು ತಮ್ಮ ವಾಹನದಲ್ಲಿ ಬೆನ್ನು ಹತ್ತಿದಾಗ, ಮರತೂರ ಕ್ರಾಸ್‌ನತ್ತ ಹೊರಳಿ ಮರತೂರ ಸ್ಟೇಷನ ತಾಂಡಾದ ಬಳಿ ರಸ್ತೆ ಬದಿಗೆ ಇದ್ದ ಕಟ್ಟಿಗೆ ತುಂಡುಗಳಿಗೆ ಹಾಯಿಸಿದ್ದಾನೆ ಇದರಿಂದ ಹೈವೇ ಪೆಟ್ರೋಲಿಂಗ್ ವಾಹನ ಕೂಡ ಜಖಂ ಆಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಶಂಕರನನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕಲಬುರಗಿ ಐಜಿಪಿ, ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ ಲಾಡೆ, ಬೆರಳಚ್ಚು ತಜ್ಞರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


