ಕಲಬುರಗಿ: ಕಳ್ಳತನ ಪ್ರಕರಣದ 8 ಆರೋಪಿಗಳನ್ನು ಬಂಧಿಸಿ, ಅವರ ಬಳಿ 4.90 ಲಕ್ಷ ರೂಪಾಯಿಗಳ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಆಳಂದ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಳಂದ ತಾಲ್ಲೂಕಿನ ತಡಕಲ್ ಗ್ರಾಮದ 38 ವರ್ಷದ ವಿನಾಯಕ ತಂದೆ ಸೈಬಣ್ಣ ಎಂಬಾತರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಒಟ್ಟಾರೆ 8 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಶರಣಬಸಪ್ಪ ಕೊಡ್ಲಾ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 25,000 ರೂಪಾಯಿಗಳ ನಗದು ಹಣ, ಎರಡು ಎಮ್ಮೆಗಳು (ಮೌಲ್ಯ: 1,10,000 ರೂ.), ಒಂದು ಆಕಳು (ಮೌಲ್ಯ: 55,000 ರೂ.) ಮತ್ತು ಕಳ್ಳತನಕ್ಕೆ ಬಳಸಿದ ಅಶೋಕ್ ಲೈಲ್ಯಾಂಡ್ ಗೂಡ್ಸ್ಡ್ ವಾಹನ (ನಂ. ಕೆಎ-32-ಡಿ-4414, ಮೌಲ್ಯ: 3,00,000 ರೂ.) ಸೇರಿವೆ. ಒಟ್ಟು ಮೌಲ್ಯ 4,90,000 ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಕುರಿತಾಗಿ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸಲು ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


