ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ರಾಂತಿ ಮಾಡಿದ ಮಹಾದಾಸೋಹಿ ಡಾ. ಶರಣಬಸವಪ್ಪ ಅಪ್ಪ ಅವರಿಗೆ ಇದೇ 11 ರಂದು `ಚಿತ್ರ ನಮನ’ ಎಂಬ ವಿಶೇಷ ಕಾರ್ಯಕ್ರಮವೊಂದನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10.30 ಕ್ಕೆ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಚಿತ್ರಕಲಾವಿದ ಡಾ. ಎ.ಎಸ್. ಪಾಟೀಲ ಅವರು ರಚಿಸಿರುವ ಮಹಾದಾಸೋಹ ಸೂತ್ರಗಳ ವರ್ಣಚಿತ್ರ ಕಲಾಕೃತಿಗಳ ಪ್ರದರ್ಶನ ಮಾಡುವ ಮೂಲಕ ಡಾ. ಅಪ್ಪಾ ಅವರ ಸ್ಮರಣೆಯನ್ನು ವಿಶಿಷ್ಟವಾಗಿ ಆಯೋಜಿಸಲಾಗಿದೆ.
ಲಿಂ. ಡಾ. ಶರಣಬಸವಪ್ಪ ಅಪ್ಪಾ ಅವರು ಈ ಭಾಗದ ಶೈಕ್ಷಣಿಕ ಕ್ರಾಂತಿ ಮಾಡುವ ಮೂಲಕ ಅಕ್ಷರದ ಜ್ಯೋತಿ ಬೆಳಗಿಸಿದ್ದಾರೆ. ಜತೆಗೆ ಮಹಾದಾಸೋಹಗಳಿಂದ ಸಹಸ್ರ ಭಕ್ತರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಹಾಗೂ ಬಸವಾದಿ ಶರಣರ ದಾಸೋಹ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಮಹಾನ್ ಶರಣರಾಗಿ ಕಾರ್ಯ ಮಾಡಿದ್ದಾರೆ. ಅಂತ ಶ್ರೇಷ್ಠ ಸಂತನಿಗೆ ಪರಿಷತ್ತು ಚಿತ್ರ ನಮನದ ಮೂಲಕ ಅರ್ಥಪೂರ್ಣ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮ ಶ್ರೀ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಶಿವರಾಜ ಶಾಸ್ತ್ರೀ ಹೇರೂರ ಅವರು ಉದ್ಘಾಟಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಶರಣಬಸವೇಶ್ವರ ಸಂಸ್ಥಾನದ ಡಾ. ಅಲ್ಲಮಪ್ರಭು ದೇಶಮುಖ, ಲೋಕೋಪಯೋಗಿ ಇಲಾಖೆಯ ವೃತ್ತ ಅಧೀಕ್ಷಕ ಅಭಿಯಂತರರಾದ ಅಮೀನ್ ಮುಕ್ತರ್ ಅಹ್ಮದ್, ಡಾ. ಸದಾನಂದ ಪೆರ್ಲ, ಡಾ. ರೆಹಮಾನ್ ಪಟೇಲ್, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


