ಕಲಬುರಗಿ: 17 ವರ್ಷದಿಂದ ಸೇಡು ಮನಸ್ಸಿನಲ್ಲಿಟ್ಟುಕೊಂಡು ತನ್ನ ತಂದೆಯ ಕೊಲೆ ಮಾಡಿದ ಆರೋಪಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಸೀತನೂರ ಗ್ರಾಮದ ಬ್ರಿಡ್ಜ್ ಸಮೀಪ ರವಿವಾರ ನಡೆದಿದೆ.
ಸೀತನೂರ ಗ್ರಾಮದ ನಿವಾಸಿ ಶಿವರಾಯ ಹಣಮಂತಾಯ ಮಾಲಿಪಾಟೀಲ್ (65) ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ.
ಹೊಲದಿಂದ ಮನೆಗೆ ಬರುತ್ತಿದ್ದಾಗ ಶಿವರಾಯನನ್ನು ಅದೇ ಗ್ರಾಮದ ಲಕ್ಷ್ಮೀಕಾಂತ್ ನಾಗೇಂದ್ರಪ್ಪ ಮಾಂಗ್ ಎಂಬಾತ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ನಡೆಸಿದ್ದರಿಂದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆ ಆರೋಪಿಯಾಗಿರುವ ಲಕ್ಷ್ಮೀಕಾಂತ್ ಅವರ ತಂದೆ ನಾಗೇಂದ್ರ ಮಾಂಗ್ ಅವರನ್ನು 2008ರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಶಿವರಾಯ ಮಾಲಿಪಾಟೀಲ್ ಪ್ರಮುಖ ಆರೋಪಿಯಾಗಿದ್ದ. ಆ ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಬೆನ್ನಲ್ಲೇ ತನ್ನ ತಂದೆಯ ಕೊಲೆಯ ಪ್ರತೀಕಾರಕ್ಕೆ ಲಕ್ಷ್ಮೀಕಾಂತ್ ಸಂಚು ರೂಪಿಸಿ, 17 ವರ್ಷಗಳ ಬಳಿಕ ಶಿವರಾಯನನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಿ ಸೇಡು ತೀರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಶಿವರಾಯನ್ನು ಕೊಲೆ ಮಾಡಿರುವ ಆರೋಪಿ ಲಕ್ಷ್ಮೀಕಾಂತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಸೇರಿದಂತೆ ಸ್ಥಳೀಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


