ಕಲಬುರಗಿ: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿ ಸರ್ಕಾರ ರಚನೆಗೆ ಮುಂದಾಗಿದ್ದರು ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ದೆಹಲಿಯಲ್ಲಿ ರಹಸ್ಯ ಸಭೆ ನಡೆದಿತ್ತು. ತಮಗೆ 60ರಿಂದ 70 ಕಾಂಗ್ರೆಸ್ ಶಾಸಕರ ಬೆಂಬಲವಿದೆ ಎಂದು ಡಿಕೆಶಿ ಪರವಾಗಿ ಹೇಳಲಾಗಿತ್ತು. ಹಾಗಾಗಿ ಅಲ್ಲಿನ ಮಾತುಕತೆಯ ಪ್ರಕಾರ ಸಿಎಂ ಹುದ್ದೆ ಡಿ.ಕೆ ಶಿವಕುಮಾರ್ ಹಾಗೂ ಡಿಸಿಎಂ ಹುದ್ದೆ ವಿಜಯೇಂದ್ರ ಅವರಿಗೆ ನೀಡುವ ನಿರ್ಧಾರ ಮಾಡಲಾಗಿತ್ತು. ಆದರೆ ಡಿಕೆಶಿ ಪರ 12 ರಿಂದ 13 ಶಾಸಕರೂ ಇಲ್ಲ ಎನ್ನುವುದನ್ನು ನಮ್ಮ ಆಂತರಿಕ ವರದಿಯಿಂದ ಗೊತ್ತಾಯಿತು. ಹಾಗಾಗಿ ಅದು ಅಲ್ಲಿಗೆ ನಿಂತು ಹೋಯಿತು ಎಂದರು.
ಅಲ್ಲದೆ, ಡಿಕೆಶಿ ಅವರು ಬಿಜೆಪಿ ಜೊತೆಗೆ ಕೈಜೋಡಿಸಿದರೆ ಅಷ್ಟು ಶಾಸಕರೂ ಅವರೊಂದಿಗೆ ಇರುವುದಿಲ್ಲ ಎಂಬ ಮಾತುಗಳೂ ಕೇಳಿಬಂದವು. ಬಹುತೇಕ ಶಾಸಕರು ಸಿದ್ದರಾಮಯ್ಯ ಅವರೊಂದಿಗೆ ಇದ್ದಾರೆ. ಇನ್ನೊಂದೆರಡು ವರ್ಷ ಮುಸ್ಲಿಮರ ಪರ ನಿಲುವುಳ್ಳ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಇದ್ದರೂ ಚಿಂತೆ ಇಲ್ಲ. ಡಿ.ಕೆ.ಶಿವಕುಮಾರ್ ಅವರಂತಹ ಭ್ರಷ್ಟರು ಮುಖ್ಯಮಂತ್ರಿಯಾಗಬಾರದು. ಶಿವಕುಮಾರ್ ಹಾಗೂ ವಿಜಯೇಂದ್ರ ಇಬ್ಬರೂ ಭ್ರಷ್ಟರು. ಇಬ್ಬರೂ ಒಂದಾದರೆ ಕರ್ನಾಟಕವನ್ನೇ ಮಾರಿಬಿಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.


