ಕಲಬುರಗಿ: ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರನ್ನಾಗಿ 52ನೇ ವಾರ್ಡ್‌ನ ಪಾಲಿಕೆ ಸದಸ್ಯೆ ಶೋಭಾ ಗುರುರಾಜ ದೇಸಾಯಿ ಅವರನ್ನು ನೇಮಕ ಮಾಡಲಾಗಿದೆ.
ಪಕ್ಷದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಚಂದು ಪಾಟೀಲ ಹಾಗೂ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಪಾಲಿಕೆ ಸದಸ್ಯರು, ಮುಖಂಡರ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಸಂಬಂಧ ಮೇಯರ್ ವರ್ಷಾ ಜಾನೆ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಆ ಮೂಲಕ ಪಾಲಿಕೆಯ ಮೇಯರ್, ಉಪಮೇಯರ್, ವಿರೋಧ ಪಕ್ಷದ ನಾಯಕ ಹುದ್ದೆಗಳು ಮಹಿಳೆಯರ ಪಾಲಾದಂತಾಗಿವೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ದತ್ತಾತ್ರೇಯ ಪಾಟೀಲ, ‘ಪಾಲಿಕೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಈ ಹುದ್ದೆಗೆ ಆಯ್ಕೆಯಾಗಿರುವುದು ಮಹತ್ವದ ಕ್ಷಣವಾಗಿದ್ದು, ಮಹಿಳೆಯರಿಗೆ ವಿಶೇಷ ಗೌರವ ನೀಡುವ ಮೂಲಕ ನಮ್ಮ ಪಕ್ಷವು ಹೊಸ ದಾಖಲೆ ನಿರ್ಮಿಸಿದೆ. ಮಹಿಳೆಯರಿಗೆ ರಾಜಕೀಯದಲ್ಲಿ ನೀಡಲಾಗುತ್ತಿರುವ ಪ್ರಾಮುಖ್ಯತೆ, ಸಮಾಜದಲ್ಲಿ ಹೆಣ್ಣುಮಕ್ಕಳ ಸ್ಥಾನವನ್ನು ಮತ್ತಷ್ಟು ಎತ್ತಿ ಹಿಡಿಯುವಂತಹುದು. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಶೇ 33ರಷ್ಟು ಮಹಿಳಾ ಮೀಸಲಾತಿ ವಿಧೇಯಕದ ಆತ್ಮವನ್ನು ಪ್ರತಿಬಿಂಬಿಸುವಂತಾಗಿದೆ’ ಎಂದಿದ್ದಾರೆ.


