ಕಲಬುರಗಿ| “ಆನೆ ಕದ್ದರು ಕಳ್ಳ – ಅಡಿಕೆ ಕದ್ದರೂ ಕಳ್ಳ”; ತಪ್ಪಿತಸ್ಥ ಸರ್ಕಾರಿ ನೌಕರರ ಮೇಲೆ ಕಟ್ಟುನಿಟ್ಟಿನ ಕ್ರಮ: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್

Date:

Share post:

ಕಲಬುರಗಿ: ಕಾನೂನಿನಲ್ಲಿ ಸರ್ಕಾರಿ ನೌಕರರ ಪ್ರತಿ ತಪ್ಪಿಗೂ ತನ್ನದೇ ಆದ ಶಿಕ್ಷೆ ಇದೆ, ಎಲ್ಲಾ ಕಳ್ಳರನ್ನು ಒಂದೇ ತಕ್ಕಡಿಯಲ್ಲಿ ತೂಗುವುದಿಲ್ಲ, “ಆನೆ ಕದ್ದರು ಕಳ್ಳ – ಅಡಿಕೆ ಕದ್ದರೂ ಕಳ್ಳ” ಆಗುವ ಕಾರಣಕ್ಕೆ ತಪ್ಪಿತಸ್ಥ ಸರ್ಕಾರಿ ನೌಕರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರು ಸರ್ಕಾರಿ ನೌಕರರಿಗೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ “ಕಲಬುರಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ” ಉದ್ದೇಶಿಸಿ ಮಾತನಾಡಿದ ಅವರು ಲೋಕಾಯುಕ್ತ ಬೆಂಗಳೂರಿನ ಕೇಂದ್ರ ಕಚೇರಿಯಿಂದ ರಾಜ್ಯದಲ್ಲಿ ವಲಯವಾರು ನೇರ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಜನವರಿ 2 ರಿಂದ ಇಂದಿನವರೆಗೆ ಬೀದರ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಗಳಲ್ಲಿ ವಿವಿಧ ಇಲಾಖೆಗಳ ತಪಾಸಣೆ ಮಾಡಲಾಗಿದೆ ಎಂದರು.

ಇಬ್ಬರೂ ನ್ಯಾಯಾದೀಶರನ್ನು ಒಳಗೊಂಡಂತೆ ಒಬ್ಬ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ, 5 ಅಪರ ಪೊಲೀಸ್ ವರಿಷ್ಠಾಧಿಕಾರಿಗಳು, 16 ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮತ್ತು 26 ಪೊಲೀಸ್ ಸಿಬ್ಬಂದಿ ಒಳಗೊಂಡ ಒಟ್ಟು 48 ಅಧಿಕಾರಿಗಳನ್ನು 8 ತಂಡಗಳನ್ನಾಗಿ ವಿಂಗÀಡಿಸಿ ಒಟ್ಟು 5 ದಿನಗಳ ಕಾಲ ಈ ನಾಲ್ಕು ಜಿಲ್ಲೆಗಳ ವಿವಿಧ ತಾಲ್ಲೂಕುಗಳಲ್ಲಿ ತಪಾಸಣೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ ವಿವಿಧ ಸೇವೆ ನೀಡುವ 2 ತಾಲ್ಲೂಕು ಕಚೇರಿಗಳು, 2 ನೊಂದಣಾಧಿಕಾರಿಗಳ ಕಚೇರಿ, 105 ವಿವಿಧ ವಿದ್ಯಾರ್ಥಿ ವಸತಿ ನಿಲಯಗಳು, 5 ವಸತಿ ಸಹಿತ ಶಾಲೆಗಳು, 2 ಶಿಕ್ಷಣಾಧಿಕಾರಿಗಳ ಕಚೇರಿ, 2 ಅಗ್ನಿ ಶಾಮಕ ಕಚೇರಿ, 2 ರಸ್ತೆ ಸಾರಿಗೆ ಕಚೇರಿ ಸೇರಿದಂತೆ 7 ವಿವಿಧ ಸ್ಥಳೀಯ ಕಾರ್ಪೊರೇಷನ್, ವಿಭಾಗೀಯ ಅಧಿಕಾರಿಗಳ ಕಚೇರಿ ಸೇರಿದಂತೆ ಇತರೆ ಕೆಲವು ಕಚೇರಿಗಳ ತಪಾಸಣೆಯನ್ನು ನಡೆಸಲಾಗಿದೆ. ಇಂದು ಮತ್ತು ನಾಳೆ ಸಹ ತಪಾಸಣೆ ಮುಂದುವರೆಯಲಿದೆ ಎಂದರು.

ನಕಲಿ ಚೆಕ್‍ಪೋಸ್ಟ್:

ಬೀದರ್ ಜಿಲ್ಲೆಯ ಹುಮ್ನಾಬಾದ್ ವ್ಯಾಪ್ತಿಯಲ್ಲಿ ಅತ್ಯಂತ ಗಂಭೀರವಾದ ಪ್ರಕರಣವನ್ನು ದಾಖಲಿಸಲಾಗಿದ್ದು, ನಕಲಿ ಚೆಕ್ ಪೋಸ್ಟ್ ಸೃಷ್ಟಿಸಿ ವಾಹನ ಚಾಲಕರಿಂದ ಹಣ ಸುಲಿಗೆ ಮಾಡಲಾಗುತ್ತಿದ್ದ ವಿಷಯ ತಪಾಸಣೆ ವೇಳೆ ಕಂಡು ಬಂದಿದ್ದು, ಇದೊಂದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪುರಾವೆ ಸಮೇತ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ನಂತರ ನಕಲಿ ಚೆಕ್ ಪೋಸ್ಟ್‍ನ್ನು ಎತ್ತಂಗಡಿ ಮಾಡಲಾಗಿರುವುದು ಸಹ ನಮ್ಮ ಗಮನಕ್ಕೆ ಬಂದಿದ್ದು, ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದರು.

ಅದೇ ರೀತಿಯಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಸರ್ಕಾರಿ ಚೆಕ್ ಪೋಸ್ಟ್‍ನಲ್ಲಿ ಸರ್ಕಾರಿ ನೌಕರರಲ್ಲದವರು ಎಂದರೆ ಏಜೆಂಟ್‍ಗಳು ಹಣ ಸಂಗ್ರಹಿಸುವ ಪ್ರಕರಣ ಹಾಗೂ ಅಧಿಕಾರಿಗಳು ಖಾಸಗಿಯವರನ್ನು ಬಳಸಿಕೊಂಡು ತಾವು ಸುರಕ್ಷಿತವಾಗಿರಲು ತಾಂತ್ರಿಕವಾಗಿ ಮಾಡಿರುವ ಕೆಲವು ಅಂಶಗಳು ಸಹ ತಪಾಸಣೆ ವೇಳೆ ಕಂಡು ಬಂದಿದ್ದು ಅವರ ಮೇಲೆ ಸಹ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಆರ್.ಓ ದುಸ್ಥಿತಿ: ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 854 ಗ್ರಾಮಗಳಿದ್ದು, ಅದರಲ್ಲಿ 395 ಗ್ರಾಮಗಳಲ್ಲಿ ಒಟ್ಟು 510 ಕುಡಿಯುವ ನೀರಿನ ಆರ್.ಓ. ಗಳನ್ನು ತಲಾ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಪ್ರಸ್ತುತ 132 ಮಾತ್ರ ಸುಸ್ಥಿಯಲ್ಲಿದ್ದು, ಉಳಿದ 336 ದುರಸ್ಥಿಯಲ್ಲಿರುವುದು ಈ ಜಿಲ್ಲೆಯ ಜನರ ದುರಂತವಾಗಿದೆ. ಕುಡಿಯುವ ನೀರು ಮೂಲಭೂತ ಹಕ್ಕಾಗಿದ್ದು, ಸಾರ್ವಜನಿಕರಿಗೆ ಒಳ್ಳೆಯ ಕುಡಿಯುವ ನೀರನ್ನು ಒದಗಿಸದಿರುವುದು ಇಲ್ಲಿನ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಈ ಕುರಿತಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ಸ್ಪಷ್ಟನೆ ಪಡೆದು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಲು ಹಾಗೂ ಅಗತ್ಯ ಅನುದಾನ ಒದಗಿಸುವಂತೆ ರಾಜ್ಯ ಮಟ್ಟದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಹೇಳಿದರು.

ಜಲಮೂಲ ಕೆರೆಗಳಿಗೆ ಜೀವ ನೀಡಿ:

ಕೆರೆಗಳನ್ನು ಸಂರಕ್ಷಿಸಿದಲ್ಲಿ ಅವು ನಮ್ಮನ್ನು ರಕ್ಷಿಸುತ್ತವೆ, ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 254 ಕೆರೆಗಳಿದ್ದು, ಇವುಗಳಲ್ಲಿ ಕಲಬುರಗಿ ನಗರದಲ್ಲಿರುವ 7 ಕೆರೆಗಳು ಮಾತ್ರ ಒತ್ತುವರಿಯಾಗಿದ್ದು, ಉಳಿದ ಕೆರೆಗಳು ಒತ್ತುವರಿಯಾಗಿಲ್ಲ ಎನ್ನುವ ಜಿಲ್ಲಾಡಳಿತದ ವರದಿ ಸಂಶಯಾಸ್ಪದವಾಗಿದ್ದು, ಇದು ನೈಜತೆಯಿಂದ ಕೂಡಿಲ್ಲ. ಹಲವು ಕೆರೆಗಳು ಇಂದು ನಗರೀಕರಣದ ಬಲೆಯಲ್ಲಿ ಮಾಯವಾಗಿವೆ. ಇವೆಲ್ಲವುಗಳ ಕುರಿತಂತೆ ಜಿಲ್ಲಾಡಳಿತ ಮೂಲ ದಾಖಲೆಗಳು ಹಾಗೂ ಹೈದ್ರಾಬಾದ್ ನಿಜಾಮರು ಇತಿಹಾಸದಲ್ಲಿ ಕೆರೆಗಳನ್ನು ಖಾಸಗಿಯವರಿಗೆ ದಾನವಾಗಿ ನೀಡಿರುವ ಕುರಿತಂತೆ ದಾಖಲೆಗಳಿದ್ದಲ್ಲಿ ಕೂಡಲೇ ಲೋಕಾಯುಕ್ತಕ್ಕೆ ಸಲ್ಲಿಸುವಂತೆ ಈ ಹಿಂದೆ ಸಮಯ ನೀಡಿ 6 ತಿಂಗಳಾಗಿದ್ದರು ಸಹ ಈವರೆಗೆ ದಾಖಲೆಗಳನ್ನು ಸಲ್ಲಿಸಿಲ್ಲ. ತುರ್ತಾಗಿ ವರದಿ ನೀಡುವಂತೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿ ವಸತಿ ನಿಲಯಗಳು:

ಕಳೆದ ನಾಲ್ಕು ದಿನಗಳಿಂದ 105 ವಿದ್ಯಾರ್ಥಿ ವಸತಿ ನಿಲಯಗಳು ಹಾಗೂ 4 ವಸತಿ ಶಾಲೆಗಳಿಗೆ ಭೇಟಿ ನೀಡಲಾಗಿದ್ದು, ನಗರದ ಗುಲಬರ್ಗಾ ವಿಶ್ವವಿದ್ಯಾನಿಲಯದ ಅಲ್ಪಸಂಖ್ಯಾತರ ಮಹಿಳಾ ವಸತಿ ನಿಲಯ ಮಾತ್ರ ಉತ್ತಮವಾಗಿದ್ದು, ಉಳಿದಂತೆ ಎಲ್ಲಾ ವಸತಿ ನಿಲಯಗಳ ಸ್ಥಿತಿ ಶೋಚನಿಯವಾಗಿದೆ. ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ನೀಡಬೇಕಾದ ಮೂಲಭೂತವಾದ ಆಹಾರ, ಆರೋಗ್ಯ, ಸ್ವಚ್ಚತೆ ಮತ್ತು ಶಿಕ್ಷಣ ನೀಡಲು ನಪಾಸಾದ ಸಂಬಂಧಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಸಾವಿರಾರು ಕೋಟಿಗಳನ್ನು ಖರ್ಚು ಮಾಡುತ್ತಿದ್ದರು ಸಹ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗದಿರುವುದಕ್ಕೆ ಇಂತಹ ಕೆಟ್ಟ ಮನಸ್ಸಿನ ಅಧಿಕಾರಿಗಳೆ ಕಾರಣ ಎಂದು ಕಟುವಾಗಿ ಟೀಕಿಸಿದರು.

ಸಾರ್ವಜನಿಕರ ಅರ್ಜಿ-ಅಹವಾಲುಗಳು:ತಪಾಸಣೆ ಸಂದರ್ಭದಲ್ಲಿ ಹಲವಾರು ತಾಲ್ಲೂಕು ಕಚೇರಿಗಳು ಸೇರಿದಂತೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ತಿ ಹೆಸರು ಬದಲಾವಣೆ, ಪಡಿತರ ಚೀಟಿ ಸೇರಿದಂತೆ ಸರ್ಕಾರದ ವಿವಿಧ ಸೌಲತ್ತುಗಳಿಗಾಗಿ ಸಾರ್ವಜನಿಕರು ಸಲ್ಲಿಸಿರುವ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ವಿವಿಧ ಕಾರಣಗಳಿಗಾಗಿ ಕಚೇರಿಯಲ್ಲಿಯೇ ಉಳಿದುಕೊಂಡಿರುವುದು ಕಂಡು ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಜಿಲ್ಲಾಡಳಿತದಿಂದ ಸ್ಪಷ್ಟನೆ ಕೇಳಿದರು. ಸಾರ್ವಜನಿಕರ ಅರ್ಜಿಗಳಲ್ಲಿ ಸಮಸ್ಯೆ ಅಥವಾ ತಪ್ಪುಗಳಿದ್ದಲ್ಲಿ ಅವರಿಗೆ ತಿಳಿ ಹೇಳಿ ಜಾಗೃತಿ ಮೂಡಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಜವಾಬ್ದಾರಿಯಾಗಿದೆ ಎಂದರು.

ಚಾಲನೆಯಲ್ಲಿಲ್ಲದ ಶೌಚಾಲಯಗಳು:ಜಿಲ್ಲೆಯಲ್ಲಿ ಅನೇಕ ವರ್ಷಗಳ ಹಿಂದೆಯೇ ಬಯಲು ಶೌಚಮುಕ್ತ ಜಿಲ್ಲೆ ಎಂದು ಘೋಷಿಸಿಕೊಂಡಿದ್ದರೂ ಇಂದು ಸಹ ನಾವು ಸಂಜೆ ಸಮಯದಲ್ಲಿ ಈ ಪ್ರಕರಣಗಳನ್ನು ಕಾಣಬಹುದಾಗಿದೆ. ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲೆಯಲ್ಲಿರುವ ಒಟ್ಟು ಹಳ್ಳಿಗಳು, ಮನೆಗಳು ಹಾಗೂ ಅವರು ಶೌಚಾಲಯ ಹೊಂದಿದ್ದಾರೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಬೇಕು. ವೈಜ್ಞಾನಿಕವಾಗಿ ವಿವರವಾದ ವರದಿಯೊಂದನ್ನು ಸಿದ್ಧಪಡಿಸಿ ಅದರಲ್ಲಿ ಎಷ್ಟು ಶೌಚಾಲಯಗಳು ಸುಸ್ಥಿಯಲ್ಲಿವೆ, ದುರಸ್ತಿಗೊಳಪಟ್ಟಿವೆ ಹಾಗೂ ಇದ್ದು ಇಲ್ಲದಂತಿರುವ ಶೌಚಾಲಯಗಳನ್ನು ಪಟ್ಟಿ ಮಾಡಿ ಈ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಹೇಳಿದರು.

ಕರ್ನಾಟಕದ ಕಲ್ಯಾಣಕ್ಕಾಗಿ ಕೆಲಸ ಮಾಡಿ: ಕಳೆದ ನಾಲ್ಕು ದಿನಗಳ ತಪಾಸಣಾ ವರದಿ ಹಾಗೂ ತಂಡಗಳು ನೀಡಿದ ಮಾಹಿತಿ ಈ ಅತ್ಯಂತ ಅತೃಪ್ತಿಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಈ ಭಾಗ ಅತ್ಯಂತ ಹಿಂದುಳಿಯಲು ಇಲ್ಲಿನ ಸರ್ಕಾರಿ ನೌಕರರೇ ಕಾರಣ, ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಗಳನ್ನು ಭಾಗದ ಕಲ್ಯಾಣಕ್ಕಾಗಿ ವ್ಯಯ ಮಾಡುತ್ತಿದ್ದರು ಸಹ ಅದು ಸಾರ್ವಜನಿಕರಿಗೆ ಸರಿಯಾಗಿ ಮುಟ್ಟದಿರುವುದು ದುರಂತ.

ಇಂತಹ ಜಾಗಗಳಲ್ಲಿ ಹೆಚ್ಚಿನ ಕೆಲಸ ಮಾಡಬೇಕು, ಕೋವಿಡ್ ಸಮಯದಲ್ಲಿ ತಾವೆಲ್ಲ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವುದು ತಿಳಿದ ವಿಚಾರವಾಗಿದೆ. ಈ ಭಾಗ ಹಿಂದೆ ಉಳಿಯಲು ಮುಖ್ಯ ಕಾರಣ ಇಲ್ಲಿನ ಜನರು ದೂರು ದಾಖಲಿಸುವುದಿಲ್ಲ, ಕರ್ನಾಟಕದ ಇತರೆಡೆ ಈ ರೀತಿ ಇಲ್ಲ.

ಉತ್ತಮ ಆಡಳಿತ ನೀಡುವ ಮೂಲಕ ಮಾದರಿ ಅಧಿಕಾರಿಗಳಾಗಿ, ಜನರಲ್ಲಿ ಸರ್ಕಾರಿ ಸೌಲತ್ತುಗಳು ಹಾಗೂ ಸ್ವಚ್ಛತೆ ಕುರಿತಂತೆ ಜಾಗೃತಿ ಮೂಡಿಸಿ, ಸುಂದರ ನಗರಗಳನ್ನು ಮಾದರಿಯನ್ನಾಗಿ ತೆಗೆದುಕೊಂಡು ತಮ್ಮ ನಗರವನ್ನು ಸಹ ಅತ್ಯಂತ ಸ್ವಚ್ಛ ನಗರಿಯನ್ನಾಗಿ ರೂಪಿಸಲು ಪಣ ತೊಡಿ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಎಡಿಜಿಪಿ ಮನೀಶ ಖರ್ಬೆಕರ್, ಕಾರ್ಯದರ್ಶಿ ಶ್ರೀನಾಥ ಕೆ ಹಾಗೂ ಅಪರ ನಿಬಂಧಕ ವಿಜಯಾನಂದ ಅವರು ಕಳೆದ ನಾಲ್ಕು ದಿನಗಳ ತಪಾಸಣೆ ಸಮಯದಲ್ಲಿ ಕಂಡು ಬಂದ ವಿಶೇಷ ಪ್ರಕರಣಗಳು ಹಾಗೂ ದಾಖಲಿಸಿರುವ ಮೊಕದ್ದಮೆಗಳ ಕುರಿತು ಸಭೆಗೆ ವಿವರಿಸಿದರು.

ಸಭೆಯಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ ಶರಣಪ್ಪ ಎಸ್.ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಭಂವರ್ ಸಿಂಗ್ ಮೀನಾ, ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸುಲು, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಿದ್ದರಾಜು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಚಾಂದ ಬೀಬೀ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಕಲಬುರಗಿ: ಚಾಂದ ಬೀ ಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 77ನೆಯ ಗಣರಾಜ್ಯೋತ್ಸವ...

ಕಲಬುರಗಿ| ಹಾಸ್ಟೆಲ್ ಸಿಬ್ಬಂದಿಗಳಿಗೆ ಐದು ತಿಂಗಳಿಂದ ಸಿಗದ ವೇತನ; ಪ್ರತಿಭಟನೆ

ಕಲಬುರಗಿ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕಳೆದ 16-20...

ಕಲಬುರಗಿ| ಕೆ.ಹೆಚ್.ಬಿ ಗ್ರೀನ್ ಪಾರ್ಕಿನಲ್ಲಿ 77ನೇ ಗಣರಾಜ್ಯೋತ್ಸ ಆಚರಣೆ

ಕಲಬುರಗಿ: ಕೆ. ಹೆಚ್.ಬಿ.ಗ್ರೀನ್ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಲ್ಲಿನ...

ಕಲಬುರಗಿ| ರಸ್ತೆ ಸುರಕ್ಷತಾ ಜಾಗೃತಿ ಬೈಕ್ ರ್ಯಾಲಿಗೆ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಚಾಲನೆ

ಕಲಬುರಗಿ: ಪೊಲೀಸರು ಕೇವಲ ಕಾನೂನು ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಕಟ್ಟುನಿಟ್ಟಿನ ಅನುಷ್ಠಾನ...