ಕಲಬುರಗಿ: ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಹಾಗೂ ಬೋರಿ ನದಿಯಿಂದ 3.50 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿಬಿಟ್ಟದರಿಂದ ಭೀಮಾ ನದಿಯ ಪ್ರವಾಹದ ಅರ್ಭಟ ರಾತ್ರೋ ರಾತ್ರಿ ಹೆಚ್ಚಾಗಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿಗೆ ಸಮರ್ಕಿಸುವ ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ಶನಿವಾರ ರಾತ್ರಿ ಸೇತುವೆ ಸಮೀಪ ನೀರು ಹರಿಯುತ್ತಿತ್ತು, ಕ್ರಮೇಣ ಹೆಚ್ಚಿದ ಪ್ರವಾಹದಿಂದ ರವಿವಾರ ಬೆಳಗಿನ ಜಾವ ನೋಡಿದರೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ಬೀದರ್ – ಬೆಂಗಳೂರು, ಶ್ರೀ ರಂಗಪಟ್ಟಣಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ನೀರಿನ ರಭಸವನ್ನು ನೋಡಿಕೊಂಡು ಮುಂಜಾಗೃತಾ ಅಂಗವಾಗಿ ಈ ಕಟ್ಟಿಸಂಗಾವಿ ಬ್ರಿಡ್ಜ್ ಮೇಲೆ ಬೃಹತ್ ಗಾತ್ರದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದೀಗ ಸೇತುವೆಯೇ ಮುಳುಗಿದ್ದರಿಂದ ತುರ್ತು ವಾಹನ ಆಂಬ್ಯುಲೆನ್ಸ್ ಸೇರಿದಂತೆ ಯಾವುದೇ ವಾಹನಗಳ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಹಾಗಾಗಿ ಈ ಮಾರ್ಗದಲ್ಲಿ ತೆರಳುವ ದೂರದ ಪ್ರಯಾಣಿಕರಿಗೆ ತುಂಬ ಕಷ್ಟ ಎದುರಾಗಿದೆ.
ರಸ್ತೆ ಪಕ್ಕದಲ್ಲೇ ನಿಂತ ವಾಹನಗಳು:
ಸೇತುವೆ ಮುಳುಗುವ ಹಂತದಲ್ಲೇ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿದ್ದರಿಂದ ಕಲಬುರಗಿಯಿಂದ ಜೇವರ್ಗಿ ಹಾಗೂ ಜೇವರ್ಗಿಯಿಂದ ಕಲಬುರ್ಗಿಗೆ ತೆರಳುವ ವಾಹನಗಳು ಸಾಲು ಸಾಲಾಗಿ ನಿಂತಿವೆ. ಟ್ರಕ್, ಕ್ಯಾಂಟರ್, ಬಸ್, ಕಾರು, ಗೂಡ್ಸ್ ವಾಹನಗಳು ಸೇರಿದಂತೆ ಹಲವು ವಾಹನಗಳು ನಿಂತ ಜಾಗದಲ್ಲೇ ನಿಂತಿವೆ. ಇದರಿಂದ ವಾಹನ ಚಾಲಕರಿಗೆ ಊಟ, ನೀರು ಮತ್ತಿತರ ಸೌಲಭ್ಯಗಳಿಂದ ಬಳಲುತ್ತಿದ್ದಾರೆ.


