ಕಲಬುರಗಿ: ಸೂಪರ್ ಎಲ್ನಿನೋ ಕಾರಣದಿಂದ ನಾಡಿನಾದ್ಯಂತ ಬರದ ಛಾಯೆ ಆವರಿಸಿದ್ದರಿಂದ ವಿಭಾಗವಾರು ಬರ ಪರಿಸ್ಥಿತಿ ಖುದ್ದಾಗಿ ಅರಿಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಲಬುರಗಿಗೆ ಆಗಮಿಸುತ್ತಿದ್ದಾರೆ ಎಂದು ರಾಜ್ಯದ ಗೃಹ, ಐ.ಟಿ-ಬಿ.ಟಿ ಹಾಗೂ ಇ- ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ರವಿವಾರ ನಗರದ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸೂಪರ್ ಎಲ್ನಿನೋ ಸಮಸ್ಯೆ ಇಲ್ಲಷ್ಟೆ ಇಲ್ಲ. ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಯೂರೋಪ್ ಕೆಲ ಭಾಗದಲ್ಲಿಯೂ ಕಂಡುಬಂದಿದೆ. ಇದು ಮಳೆ ಕೊರತೆ ಜೊತೆಗೆ ಬಿಸಿ ಗಾಳಿ ಹೆಚ್ಚಿಸಲಿದೆ. ಹೀಗಾಗಿ ಮುಂದಿನ ದಿನದಲ್ಲಿ ಇದರ ಸವಾಲನ್ನು ಸಮರ್ಥವಾಗಿ ಎದುರಿಸಲು ಈಗಾಗಲೆ ಸಿ.ಎಂ ಅವರು ಬೆಂಗಳೂರಿನಲ್ಲಿ ಎರಡು ಸಲ ಸಭೆ ನಡೆಸಿದ್ದು, ಇದೀಗ ಕಲ್ಯಾಣ ಕರ್ನಾಟಕದಿಂದಲೆ ವಿಭಾಗವಾರು ಬರ ಕುರಿತು ಸಭೆ ಇಲ್ಲಿ ಮಂಗಳವಾರ ನಡೆಸಲಿದ್ದಾರೆ ಎಂದರು.
ಮುಖ್ಯಮಂತ್ರಿಗಳು ಸೋಮವಾರ ಬೀದರ್ ಗೆ ಆಗಮಿಸಿ ಬಸವಕಲ್ಯಾಣಕ್ಕೆ ಮೊದಲು ಭೇಟಿ ನೀಡಲಿದ್ದಾರೆ. ಸಂಜೆ ವೇಳೆಗೆ ಕಲಬುರಗಿಗೆ ಬರಲಿದ್ದಾರೆ. ನಂತರ, ಸಮಯಾವಕಾಶಕ್ಕೆ ಅನುಗುಣವಾಗಿ ಶರಣಬಸವೇಶ್ವರ ದೇವಾಲಯ ಹಾಗೂ ಕೆ.ಬಿ.ಎನ್. ದರ್ಗಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಮಂಗಳವಾರ ಬೆಳಿಗ್ಗೆ ವಿಭಾಗೀಯ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದು, ಬರ ಪರಿಸ್ಥಿತಿ ಹಾಗೂ ಬರ ಎದುರಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸುರ್ದೀರ್ಘ ಚರ್ಚೆ ನಡೆಸಲಿದ್ದಾರೆ. ನಂತರ, ಮಾಧ್ಯಮಗಳಿಗೆ ವಿವರಣೆ ನೀಡಲಿದ್ದಾರೆ ಎಂದರು.
ಜೂನ್ ಅಂತ್ಯದ ವರೆಗೆ ನಿರೀಕ್ಷಿತ ಮಳೆ ಬಂದಿಲ್ಲ. ಇದೂವರೆಗೆ ಶೇ.35ರಷ್ಟು ಮಳೆ ಕೊರತೆಯಾಗಿದ್ದರಿಂದ ಉದ್ದು, ಹೆಸರು ಬೆಳೆ ಕೈಕೊಟ್ಟಂತಾಗಿದೆ. ಮೋಡ ಬಿತ್ತನೆ ಚರ್ಚೆಯು ನಡೆಯುತ್ತಿದೆಯಾದರು ಸರ್ಕಾರದ ಮುಂದೆ ಸದ್ಯಕ್ಕೆ ಪ್ರಸ್ತಾವನೆ ಇಲ್ಲ. ಜುಲೈ ತಿಂಗಳ ಅಂತ್ಯದ ವರೆಗೆ ಮಳೆ ಬರುವ ನಿರೀಕ್ಷೆ ಹೊಂದಲಾಗಿದೆ ಎಂದರು.
ರಾಜ್ಯದಲ್ಲಿ ಡಿ.ಕೆ.ಶಿವಕುಮಾರ ನೇತೃತ್ವದ ನೂತನ ಸರ್ಕಾರ ಯುವಕರ ಉಜ್ವಲ ಭವಿಷ್ಯಕ್ಕೆ ಅನೇಕ ಯುವ ಯೋಜನೆಗಳನ್ನು ಹಾಕಿಕೊಂಡಿದೆ.
ಯುವ ಕರ್ನಾಟಕದ ನಿರ್ಮಾಣ ಸರ್ಕಾರದ ಸಂಕಲ್ಪವಾಗಿದೆ. ಮುಂದಿನ ಭವಿಷ್ಯ ಯುವಕರ ಕೈಯಲ್ಲಿ ಇರುವುದರಿಂದಾಗಿ ಯುವಕರಿಗಾಗಿ ಯೋಜನೆಗಳನ್ನು ತರಲು ಸಿಎಂ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಎಂದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ದಿ ಹಾಗೂ ಆರ್ಥಿಕ ಪ್ರಗತಿಗಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮ ಹಾಗೂ ಯೋಜನೆಗಳ ನೀಲಿ ನಕ್ಷೆ ತಯಾರಿಕೆಗೆ ಅಧಿಕಾರಿ ವರ್ಗಕ್ಕೆ ಸೂಚನೆ ಕೊಟ್ಟಿದ್ದಾರೆ ಎಂದರು.
ಗೃಹ ಇಲಾಖೆಯ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಅಗತ್ಯವಿರುವ ಕಡೆ ನೂತನ ಪೊಲೀಸ್ ಠಾಣೆ ಸ್ಥಾಪನೆ ಸೇರಿದಂತೆ ತರಬಹುದಾದ ಬದಲಾವಣೆಗಳ ಬಗ್ಗೆ ಒಂದು ವಾರದ ನಂತರ ವಿವರವಾಗಿ ಚರ್ಚಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
*ಭೀಮೆಗೆ ನೀರು ಬಿಡಲು ಮಹಾರಾಷ್ಡ್ರಕ್ಕೆ ಪತ್ರ:*
ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಭೀಮಾ ನದಿಗೆ ನೀರು ಬಿಡುವಂತೆ ಸರ್ಕಾರ ಈಗಾಗಲೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಮಂಗಳವಾರ ನಡೆಯಲಿರುವ ವಿಭಾಗವಾರು ಸಭೆಯಲ್ಲಿ ಈ ಕುರಿತು ಸಹ ಚರ್ಚೆ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್ ಇದ್ದರು.


