ಕಲಬುರಗಿ| ಹತ್ತು ವರ್ಷಗಳಲ್ಲಿ ಅಸಮಾನತೆಯಿಂದ ಕಲ್ಯಾಣ ಕರ್ನಾಟಕ ಪಾರು: ಮುಖ್ಯಮಂತ್ರಿ ಸಿದ್ದರಾಮಯ್ಯ

Date:

Share post:

ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು 371-ಜೆ ಜಾರಿ ಮಾಡಿ, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗಲೆಲ್ಲ ವರ್ಷದಿಂದ ವರ್ಷಕ್ಕೆ ಸಾವಿರಾರು ಕೋಟಿ ರೂ.ಗಳ ಅನುದಾನ ಹೆಚ್ಚಿಗೆ ನೀಡಿ ಮುಖ್ಯವಾಗಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ದಿಯ ವೇಗವನ್ನು ಹೆಚ್ಚಿಸಿದ್ದು, ಇದೇ ರೀತಿ ಅಭಿವೃದ್ಧಿ ಕಾರ್ಯಗಳು ಮುಂದುವರೆದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದರು.

ಅವರು ಇಂದು ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಯಡ್ರಾಮಿ ಪಟ್ಟಣದ ಕೆಪಿಎಸ್ ಶಾಲಾ ಆವರಣ ಆಯೋಜಿಸಲಾಗಿದ್ದ ಪ್ರಜಾಸೌಧ. ಕೆಪಿಎಸ್ ಶಾಲೆ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ರಾಜ್ಯದಲ್ಲಿ ಅಸಮಾನತೆ ಹೋಗಲಾಡಿಸಲು ನಂಜುಂಡಪ್ಪ ಅವರ ವರದಿಯನ್ನು ಆಧರಿಸಿ ಶಿಫಾರಸ್ಸುಗಳನ್ನು ಜಾರಿಗೆ ತರಲಾಗಿದೆ. ಇದರ ಪರಿಣಾಮಗಳ ಬಗ್ಗೆ ವರದಿ ಸಲ್ಲಿಸಲು ಗೋವಿಂದ ರಾವ್ ಸಮಿತಿ ರಚಿಸಲಾಗಿದೆ. ಶೀಘ್ರದಲ್ಲಿ ವರದಿಯ ಶಿಫಾರಸುಗಳನ್ನು ಜಾರಿ ಮಾಡಲಾಗುವುದು ಎಂದರು.

ಕಲ್ಯಾಣ ಕರ್ನಾಟಕದ ಹೊಸ ತಾಲ್ಲೂಕುಗಳಲ್ಲಿ 163.55 ಕೋಟಿ ರೂ ವೆಚ್ಚದಲ್ಲಿ 17 ಹೊಸ ಪ್ರಜಾಸೌಧಗಳು ಮತ್ತು 600 ಕೋಟಿ ರೂ ರಿಂದ 900 ಕೋಟಿ ರೂ ವೆಚ್ಚದಲ್ಲಿ 300 ಕೆಪಿಎಸ್ ನೂತನ ಶಾಲೆಗಳ ಮಂಜೂರಾತಿ, ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳ ಸರ್ವತೋಮುಖ ಏಳಿಗೆಗೆ 905.87 ಕೋಟಿ ರೂ ಗಳ ಬೃಹತ್ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.

ನಾವು ನುಡಿದಂತೆ ನಡೆದಿದ್ದೇವೆ, ಮುಂದೆಯೂ ಸಹ ಅದೇ ರೀತಿ ನಡೆದುಕೊಳ್ಳುತ್ತೇವೆ, ನೀಡಿದ ಭರವಸೆಗಳೆಲ್ಲವನ್ನು ಈಡೇರಿಸುತ್ತೇವೆ, 2013-18 ರ ಅಧಿಕಾರದ ಸಮಯದಲ್ಲಿ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ, ಪ್ರಸ್ತುತ ಸರ್ಕಾರದಲ್ಲಿ ನೀಡಿರುವ ಭರವಸೆಗಳೊಂದಿಗೆ ಗ್ಯಾರಂಟಿ ಯೋಜನೆಗಳನ್ನು ಸಹ ನೀಡಿದ್ದೇವೆ.

ರಾಜ್ಯದಲ್ಲಿ ಒಟ್ಟು 63 ಹೊಸ ತಾಲ್ಲೂಕುಗಳು ಘೋಷಣೆಯಾಗಿವೆ, 2018-23 ರ ವರೆಗೆ ಈ ತಾಲ್ಲೂಕುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಳೆ ಸರ್ಕಾರ ವಿಫಲವಾಗಿದೆ, ನಾವು ಅಧಿಕಾರಕ್ಕೆ ಬಂದಮೇಲೆ 49 ಹೊಸ ತಾಲ್ಲೂಕುಗಳ ಪ್ರಜಾಸೌಧಗಳಿಗೆ ಮಂಜೂರಾತಿ ನೀಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿನ ಹೊಸ 19 ತಾಲ್ಲೂಕುಗಳಲ್ಲಿ ಈಗ ನಾವು 17 ತಾಲ್ಲೂಕುಗಳಿಗೆ ಹೊಸ ಪ್ರಜಾಸೌಧ ಹಾಗೂ ನಾಡಕಚೇರಿ ಕಟ್ಟಲು ಮಂಜೂರಾತಿ ನೀಡಿದ್ದೇವೆ ಎಂದರು.

ಈ ಭಾಗದಲ್ಲಿ ಈ ಸಾಲಿನಲ್ಲಿ ಆದ ಅತಿವೃಷ್ಟಿ ಬೆಳೆಹಾನಿ ಕುರಿತು ಪರಿಶೀಲನೆ ಮಾಡಿ ಎಸ್ ಡಿ ಆರ್ ಎಫ್ ಪರಿಹಾರದ ಜೊತೆ 1031 ಕೋಟಿ ರೂ ಹೆಚ್ಚಿನ ಅನುದಾನವನ್ನು ರಾಜ್ಯದವತಿಯಿಂದ ನೀಡಲಾಗಿದೆ ಎಂದರು. ಎಲ್ಲಾ ರೈತರಿಗೆ ಪರಿಹಾರದ ಹಣ ಈಗಾಗಲೇ ನೇರವಾಗಿ ಹಾಕಲಾಗಿದೆ. ರೈತರೊಂದಿಗೆ ನಾವು ಸದಾ ಇದ್ದೇವೆ, ಈ ಭಾಗದ ತೊಗರಿ ನಟೆ ರೋಗಕ್ಕೆ ಪರಿಹಾರ ಒದಗಿಸಿದ್ದೇವೆ. ಅದೇ ರೀತಿ ಕಬ್ಬಿಗೆ ಬೆಂಬಲ ಬೆಲೆಯಾಗಿ ಸುಮಾರು 300 ಕೋಟಿ ರೂ ಒದಗಿಸಲಾಗಿದೆ.

ಈ ಸಾಲಿನಲ್ಲಿ ಕೆಕೆಆರ್ ಡಿಬಿಗೆ ನೀಡಿರುವ ಐದು ಸಾವಿರ ಕೋಟಿ ರೂ ವೆಚ್ಚ ಮಾಡಿದಲ್ಲಿ ಹೆಚ್ಚಿನ ಅನುದಾನ ಒದಗಿಸುವ ಕುರಿತು ಯೋಚಿಸಲಾಗುವುದು. ಈ ಭಾಗದ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸರ್ಕಾರ:

ಪ್ರಸ್ತುತ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ 1 ಲಕ್ಷದ 12 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ವೆಚ್ಚ ಮಾಡಲಾಗಿದೆ. ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಯಂತೆ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದರು.

ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ವತಿಯಿಂದ 592 ಭರವಸೆಗಳನ್ನು ನೀಡಲಾಗಿತ್ತು. 243 ಭರವಸೆಗಳನ್ನು ಈಡೇರಿಸಲಾಗಿದೆ. ಉಳಿದ ಅವಧಿಯಲ್ಲಿ ಮಿಕ್ಕ ಭರವಸೆಗಳನ್ನು ಈಡೇರಿಸಲಾಗುವುದು ಎಂದರು.

ಕಳೆದ ಬಾರಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಪ್ರಾಣಾಳಿಕೆಯಲ್ಲಿ ಸೇರಿರದ 30 ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿತ್ತು. ಎರಡೂವರೆ ವರ್ಷದಲ್ಲಿ ಕೊಟ್ಟ ಎಲ್ಲಾ ಭರವಸೆಗಳ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲಾಗಿದೆ ಎಂದರು.

ರೈತರ ಪರವಾದ ಸರ್ಕಾರ:

ಈ ಬಾರಿ ಮಳೆ ಹೆಚ್ಚಾಗಿ ಬೆಳೆ ಹಾನಿಯಾಗಿರುವುದರಿಂದ ವೈಮಾನಿಕ ಸಮೀಕ್ಷೆ ಕೈಗೊಂಡು ಪರಿಶೀಲಿಸಿ ಪರಿಹಾರ ಕೊಡಲು ನಿರ್ಧರಿಸಿ ಎಸ್ ಡಿ.ಆರ್.ಎಫ್ ನಿಂದ 1218 ಕೋಟಿ ಜೊತೆಗೆ ಸರ್ಕಾರದ ವತಿಯಿಂದ ಒಟ್ಟು 1031ಕೋಟಿ ಹೆಚ್ಚುವರಿಯಾಗಿ ಒದಗಿಸಲಾಗಿದೆ.ರಾಜ್ಯದಲ್ಲಿ ಒಟ್ಟು 14.21 ಲಕ್ಷ ರೈತರ ಬೆಳೆ ಹಾನಿಯಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ 721786 ರೈತರ ಬೆಳೆ ಹಾನಿಗೊಳಗಾಗಿದೆ. 1072 ಕೋಟಿ ಬೆಳೆ ಹಾನಿಗೆ ಪರಿಹಾರ ನೀಡಿದೆ. ಕಲಬುರ್ಗಿ ಜಿಲ್ಲೆಯಲ್ಲಿ 323318 ರೈತರ ಬೆಳೆ ಹಾನಿಯಾಗಿದ್ದು 498 ಕೋಟಿ ಪರಿಹಾರ ನೀಡಲಾಗಿದೆ ಎಂದರು.

ರೈತರ ಖಾತೆಗಳಿಗೆ ಅನುದಾನವನ್ನು ತಲುಪಿಸುವ ಕೆಲಸ ಮಾಡಿದ್ದೇವೆ. ರೈತರ ಸಹಾಯಕ್ಕೆ ಸರ್ಕಾರ ಸದಾ ಮುಂದಾಗಿದೆ. ನೆಟ್ಟೆ ರೋಗಕ್ಕೆ ತುತ್ತಾದ ತೊಗರಿ ಬೆಳೆಗೆ 233 ಕೋಟಿ ರೂ. ಗಳನ್ನು ಒದಗಿಸಲಾಗಿದೆ. ಕಬ್ಬಿನ ಬೆಲೆ ಕಡಿಮೆ ಎಂದು ರೈತರು ಪ್ರತಿಭಟಿಸಿದಾಗ ಅವರ ನೆರವಿಗೆ ಸರ್ಕಾರ ಧಾವಿಸಿ ಸರ್ಕಾರದಿಂದ 50 ಹಾಗೂ ಕಾರ್ಖಾನೆಯಿಂದ 50 ರೂ. ನಿಗದಿ ಮಾಡಿ 300 ಕೋಟಿ ಗಳನ್ನು ಸರ್ಕಾರದಿಂದ ಕಬ್ಬಿನ ಬೆಳೆಗಾರರಿಗೆ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ, ಶರಣಬಸಪ್ಪ ದರ್ಶನಾಪುರ, ಶರಣ ಪ್ರಕಾಶ್ ಪಾಟೀಲ್, ಮಧು ಬಂಗಾರಪ್ಪ, ರಹೀಂ ಖಾನ್, ಜಿಲ್ಲೆಯ ಶಾಸಕರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಚಾಂದ ಬೀಬೀ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಕಲಬುರಗಿ: ಚಾಂದ ಬೀ ಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 77ನೆಯ ಗಣರಾಜ್ಯೋತ್ಸವ...

ಕಲಬುರಗಿ| ಹಾಸ್ಟೆಲ್ ಸಿಬ್ಬಂದಿಗಳಿಗೆ ಐದು ತಿಂಗಳಿಂದ ಸಿಗದ ವೇತನ; ಪ್ರತಿಭಟನೆ

ಕಲಬುರಗಿ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕಳೆದ 16-20...

ಕಲಬುರಗಿ| ಕೆ.ಹೆಚ್.ಬಿ ಗ್ರೀನ್ ಪಾರ್ಕಿನಲ್ಲಿ 77ನೇ ಗಣರಾಜ್ಯೋತ್ಸ ಆಚರಣೆ

ಕಲಬುರಗಿ: ಕೆ. ಹೆಚ್.ಬಿ.ಗ್ರೀನ್ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಲ್ಲಿನ...

ಕಲಬುರಗಿ| ರಸ್ತೆ ಸುರಕ್ಷತಾ ಜಾಗೃತಿ ಬೈಕ್ ರ್ಯಾಲಿಗೆ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಚಾಲನೆ

ಕಲಬುರಗಿ: ಪೊಲೀಸರು ಕೇವಲ ಕಾನೂನು ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಕಟ್ಟುನಿಟ್ಟಿನ ಅನುಷ್ಠಾನ...