ಕಲಬುರಗಿ| ಪ್ರಬುದ್ಧ ಅಕಾಡೆಮಿಯಲ್ಲಿ ಈ ಭಾಗದ ಪ್ರತಿಭಾವಂತ ಅಭ್ಯರ್ಥಿಗಳ ಭವಿಷ್ಯ ಅರಳಲಿ, ಕನಸು ನನಸಾಗಲಿ: ಸಚಿವ ಪ್ರಿಯಾಂಕ್ ಖರ್ಗೆ

Date:

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಪ್ರತಿಭಾವಂತ ಅಭ್ಯರ್ಥಿಗಳಿಗಳು ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಅಗತ್ಯ ತರಬೇತಿ‌ ನೀಡುವ ಕನಸು ಇಂದು ನನಸಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಲಬುರಗಿ ನಗರದ ಹೊರವಲಯದ ವಾಜಪೇಯಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಬುದ್ಧ ಪರೀಕ್ಷಾ ಪೂರ್ವ ತರಬೇತಿ ಅಕಾಡೆಮಿ ( ಕೇಂದ್ರ ) ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ನಾವು ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಈ ಕೇಂದ್ರಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಭವಿಷ್ಯದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಆದರೆ, ನಮ್ಮ ನಂತರ ಅಧಿಕಾರಕ್ಕೆ ಬಂದ ಸರ್ಕಾರ ಈ ಕೇಂದ್ರದ ಕಾಮಗಾರಿ ಕೈಗೊಳ್ಳಲಿಲ್ಲ. ಆದರೆ, ಈಗ ನಾವೇ ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ಸುಮಾರು 10,000 ಚದರ ಅಡಿಯಲ್ಲಿ ರೂ 30 ಕೋಟಿ ವೆಚ್ಚದಲ್ಲಿ ಅಕಾಡೆಮಿ ನಿರ್ಮಾಣವಾಗಿದೆ. ಈಗ ನಾವೇ ಈ ಕೇಂದ್ರ ಉದ್ಘಾಟನೆ ಮಾಡಿದ್ದೇವೆ. ಇದು ನಮ್ಮ ಬದ್ಧತೆಯಾಗಿದೆ, ಎಂದರು‌.

ತಾವು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಪ್ರಬುದ್ಧ ಯೋಜನೆಯಡಿಯಲ್ಲಿ ವಿದ್ಯಾರ್ಥಿಯೊಬ್ಬರಿಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ನೀಡಿದ್ದರಿಂದ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಭಾರತದಲ್ಲಿ ಬಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಪಡೆದುಕೊಂಡ ಬಗ್ಗೆ ನೆನಪಿಸಿಕೊಂಡ ಪ್ರಿಯಾಂಕ್ ಖರ್ಗೆ, ಪ್ರಬುದ್ಧ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡ ಅಭ್ಯರ್ಥಿಗಳು ಉನ್ನತ ಹುದ್ದೆಗಳನ್ನು ಹೊಂದಿ ನಾಡಿಗೆ ಹೆಸರು ತರಲಿ ಎಂದು ಹರಸಿದರು‌.

ಅಕಾಡೆಮಿ ಕೇವಲ ಕಟ್ಟಡವಲ್ಲ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳ ಭವಿಷ್ಯ ಅಡಗಿದೆ. ಅವರ ಕನಸುಗಳು ಇಲ್ಲಿ ಸಾಕಾರಗೊಳ್ಳಲಿವೆ. ಈ ಹಿಂದೆ ಪಿಎಸ್ ಐ ಪರೀಕ್ಷೆಯಲ್ಲಿ ಅಕ್ರಮ ನಡೆದಾಗ ಅದರಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳ ಒಂದು ಹೊತ್ತಿನ ಊಟಕ್ಕೆ ಪರದಾಡುವಂತಾಗಿತ್ತು. ತರಬೇತಿ ಪಡೆಯಲು ಬೆಂಗಳೂರಿಗೆ ಬಂದಿದ್ದ ವಿದ್ಯಾರ್ಥಿಗಳು ” ಮೂರು ನಾಲ್ಕು ಅನ್ನ ಹಾಕು” ಎಂದು ವಾಟ್ಸಪ್ ಗ್ರೂಪ್ ಮಾಡಿಕೊಂಡು ಬೆಂಗಳೂರಿನಲ್ಲಿ ಎಲ್ಲೆಲ್ಲಿ ಉಚಿತ ಊಟ ಸಿಗುತ್ತದೆ ಎಂದು ಮಾಹಿತಿ ಹಂಚಿಕೊಂಡು ಛತ್ರಗಳ ವಿವರ ಹಾಕಿ ಅಲ್ಲಿ ಊಟ ಮಾಡಿಕೊಂಡು ಬರುತ್ತಿದ್ದರು. ಆ ದೃಶ್ಯ ನನ್ನ ಕಣ್ಣ‌ಮುಂದೆ ಬಂದು, ಕಣ್ಣೀರು ಬರುವಂತಾಗಿತ್ತು. ಅಂತಹ ಯಾವುದೇ ಸ್ಥಿತಿ ನಮ್ಮ ಭಾಗದ ಮಕ್ಕಳಿಗೆ ಬಾರದಿರಲಿ ಎಂದು ಕಲಬುರಗಿಯಲ್ಲಿ ಪ್ರಬುದ್ಧ ಅಕಾಡೆಮಿ ಕೇಂದ್ರ ಸ್ಥಾಪನೆಗೆ ಒತ್ತು ನೀಡಿದ್ದೆ ಎಂದು ಪ್ರಿಯಾಂಕ್ ಖರ್ಗೆ ನೆನಪಿಸಿಕೊಂಡು ಭಾವುಕರಾದರು.

ಪ್ರಬುದ್ಧ ಅಕಾಡೆಮಿ ಒಂದು ಉತ್ಕೃಷ್ಟ ತರಬೇತಿ ಕೇಂದ್ರವಾಗಿ ಬಲಗೊಳ್ಳಬೇಕು ಎಂದು ಅಭಿಪ್ರಾಯಪಟ್ಟ ಸಚಿವರು, ಈ ಭಾಗದ ಐಎಎಸ್ ಅಧಿಕಾರಿಗಳು ಇಲ್ಲಿನ ಅಭ್ಯರ್ಥಿಗಳಿಗೆ ಪಾಠ ಮಾಡಲು ಮುಂದೆ ಬರಬೇಕು. ಅದಕ್ಕೆ ಅನುಕೂಲವಾಗುವಂತೆ ರೋಸ್ಟರ್ ಪದ್ದತಿ ರೂಪಿಸಿ ಎಂದು ವೇದಿಕೆಯ ಮೇಲಿದ್ದ ಅಧಿಕಾರಿಗಳಿಗೆ ಸಲಹೆ ನೀಡಿದರು.

ಅಕಾಡೆಮಿಗೆ ಅಭ್ಯರ್ಥಿಗಳು ಬಂದು ಹೋಗಲು ಕೆಕೆಆರ್ಟಿಸಿ ವತಿಯಿಂದ ಎರಡು ಸಿಟಿ‌ಬಸ್ ಗಳ ಸೇವೆಯನ್ನು ಇಂದಿನಿಂದಲೆ ಒದಗಿಸಲಾಗುತ್ತಿದೆ. ಜೊತೆಗೆ ನಿವೃತ್ತ ಪ್ರೊಫೆಸರ್ ಗಳು ಕೂಡಾ ಇಲ್ಲಿನ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ 10,000 ಅಭ್ಯರ್ಥಿಗಳು ಕೆಇಎ ಮೂಲಕ ಪರೀಕ್ಷೆ ಎದುರಿಸಿದ್ದಾರೆ. ಅವರಲ್ಲಿ ಮೆರಿಟ್ ಆಧಾರದ ಮೇಲೆ 500 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗುತ್ತದೆ. ಅವರೆಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಿಯಾಂಕ್ ಖರ್ಗೆ ಹಾರೈಸಿದರು.

ಸಚಿವ ಡಾ ಶರಣಪ್ರಕಾಶ ಪಾಟೀಲ್ ಮಾತನಾಡಿ ನಮ್ಮ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡುವ ಕೇಂದ್ರದ ಕೊರತೆ ಇತ್ತು. ಆ ಕೊರತೆಯನ್ನು ಪ್ರಬುದ್ಧ ಅಕಾಡೆಮಿ ನೀಗಿಸಲಿದೆ ಎಂದರು.

ಬೆಂಗಳೂರು ಸೇರಿದಂತೆ ಇತರೆ ಮೆಟ್ರೋ ನಗರಗಳಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಸೇರಿಸಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅಭ್ಯರ್ಥಿಗಳಿಗೆ ಅವಕಾಶಗಳಿವೆ. ಆದರೆ, ಈ ಭಾಗದಲ್ಲಿ ಅಂತಹ ಅವಕಾಶಗಳಿರಲಿಲ್ಲ. ಪ್ರಬುದ್ಧ ಅಕಾಡೆಮಿ ಮೂಲಕ ಅಭ್ಯರ್ಥಿಗಳು ಅಗತ್ಯ ತರಬೇತಿ ಪಡೆಯಲು ಅನುಕೂಲವಾಗಲಿದೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ ಕೆಲಸದಲ್ಲಿರುವ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಬಿಡುವು ಮಾಡಿಕೊಂಡು ಬಂದು ಇಲ್ಲಿನ ಅಭ್ಯರ್ಥಿಗಳಿಗೆ ಪಾಠ‌ಮಾಡಿ, ಪರೀಕ್ಷೆ ಗಳನ್ನು ಹೇಗೆ ಎದುರಿಸಬೇಕು ಎನ್ನುವ ಅನುಭವ ಹೇಳಿದರೆ ಅವರಿಗೂ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಹಿರಿಯ ನಾಯಕ ಮಲ್ಲಕಾರ್ಜುನ ಖರ್ಗೆ ಅವರು ಕಲಬುರಗಿ ಜಿಲ್ಲೆಗೆ ಹಲವಾರು ಪ್ರಮುಖ ಯೋಜನೆಗಳನ್ನು ತಂದಿದ್ದಾರೆ. ಆರ್ಟಿಕಲ್ 371(J), ಇಎಸ್ಐ, ಕೇಂದ್ರಿಯ ವಿದ್ಯಾಲಯ, ಪೊಲೀಸ್ ತರಬೇತಿ ಕೇಂದ್ರ, ಪೊಲೀಸ್ ವಲಯ ಕಚೇರಿ ಹಾಗೂ ಇತರ ಪ್ರಮಖ ಯೋಜನೆಗಳನ್ನು ಅವರು ತಂದಿದ್ದಾರೆ.

ಈಗ ಅವರ ಮಗ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಲು ಪ್ರಬುದ್ಧ ಅಕಾಡೆಮಿ ತಂದಿದ್ದಾರೆ. ಅವರೊಂದಿಗೆ ಮತ್ತೊಬ್ಬ ಸಚಿವ ಶರಣಪ್ರಕಾಶ ಪಾಟೀಲ ಕೈ ಜೋಡಿಸಿದ್ದಾರೆ. ಇವರಿಬ್ಬರು ಜಿಲ್ಲೆಗೆ ನಕ್ಷತ್ರಗಳಿದ್ದಂತೆ. ಸಾವಿರಾರು ಕೋಟಿ ವೆಚ್ಚಗಳ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರು ವಹಿಸಿ ಮಾತನಾಡಿ ಇಲ್ಲಿನ ಯುವಕರು ಈ ಅವಕಾಶವನ್ನು ಬಳಸಿಕೊಂಡು ಒಳ್ಳೆಯ ಉದ್ಯೋಗ ಪಡೆಯುವ ಮೂಲಕ ಜಿಲ್ಲೆಗೆ ಒಳ್ಳೆಯ ಹೆಸರು ತರುವಂತೆ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಂ. ವೈ.ಪಾಟೀಲ, ವಿಧಾನಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ, ಕುರಿ ಮತ್ತು ಉಣ್ಣೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ದೇವಿಂದ್ರಪ್ಪ ಮರತೂರು, ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ್ ಎಂ ವೈ ಪಾಟೀಲ, ಜೆಸ್ಕಾಂ ಅಧ್ಯಕ್ಷ, ಪ್ರವೀಣ್ ಪಾಟೀಲ ಹರವಾಳ, ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ಸೈಯದ್ ಮಹೆಮೂದ್ ಚಿಸ್ತಿ ಸಾಹೇಬ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಕೆಕೆಆರ್ ಡಿಬಿ ಕಾರ್ಯದರ್ಶಿ ನಲೀನ್ ಅತುಲ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿಒಇ ಭಂವರ್ ಸಿಂಗ್ ಮೀನಾ, ನಗರ ಪೊಲೀಸ್ ಕಮೀಷನರ್ ಡಾ ಶರಣಪ್ಪ ಎಸ್ ಡಿ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಸಮಾಜ ಕಲ್ಯಾಣ ಇಲಾಖೆಯ ಜಂಟಿ‌ ನಿರ್ದೇಶಕಿ ಪ್ರೀತಿ ಚಂದ್ರಶೇಖರ ಸೇರಿದಂತೆ ವಿದ್ಯಾರ್ಥಿಗಳು, ನಾಗರಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

spot_imgspot_img

Popular

More like this
Related

ಕಲಬುರಗಿ| ನುಡಿದಂತೆ ನಡೆಯುವ ಸರ್ಕಾರ‌ ನಮ್ಮದು, ಇದೂವರೆಗೆ 243 ಭರವಸೆ ಈಡೇರಿಸಿದ್ದೇವೆ: ಸಿದ್ದರಾಮಯ್ಯ

ಕಲಬುರಗಿ: ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ...

ಕಲಬುರಗಿ| ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

ಕಲಬುರಗಿ: "ನಮ್ಮ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ...

ಕಲಬುರಗಿ| ಸುಗಮ ಆಡಳಿತಕ್ಕಾಗಿ ಪ್ರಜಾಸೌಧಗಳ ನಿರ್ಮಾಣ: ಡಾ.ಅಜಯ್ ಧರ್ಮಸಿಂಗ್

ಕಲಬುರಗಿ: ಸುಗಮ ಆಡಳಿತಕ್ಕಾಗಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಈ ಭಾಗದ...

ಕಲಬುರಗಿ| ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಮಾಡಿ: ಮಲ್ಲಿಕಾರ್ಜುನ ಖರ್ಗೆ  

ಕಲಬುರಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿಯಲು ಮುಖ್ಯ ಕಾರಣ ಈ ಭಾಗದಲ್ಲಿ...