ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ ಆರಂಭವಾಗಿದ್ದು, ಇದೇ ಅಕ್ಟೋಬರ್ 27 ಮತ್ತು 30 ಹಾಗೂ ನವೆಂಬರ್ 3ರಂದು ಕಲಬುರಗಿ ಜಿಲ್ಲೆಯಾದ್ಯಂತ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಈಶಾನ್ಯ ಶಿಕ್ಷಕರ ಕ್ಷೇತ್ರದ ಎಲ್ಲಾ ಮತದಾರರರು ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕ್ಷೇತ್ರದ ಸಹಾಯಕ ಮತದಾರರ ನೊಂದಣಾಧಿಕಾರಿಯಾಗಿರುವ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
01.11.2025ಕ್ಕೆ ಅರ್ಹತಾ ದಿನಾಂಕಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕ್ಷೇತ್ರದಾದ್ಯಂತ ನಡೆದಿದ್ದು, ಅರ್ಹ ಮತದಾರರು ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನವೆಂಬರ್ 6 ಕೊನೆಯ ದಿನವಾಗಿರುತ್ತದೆ. ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಈ ಮತದಾರರ ವಿಶೇಷ ನೊಂದಣಿ ಆಯೋಜಿಸಿದ್ದು, ಶಿಕ್ಷಕ ಮತದಾರರು ಇದರ ಲಾಭ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.
ಯಾವುದೇ ಒಂದು ಚುನಾವಣೆಯು ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಶಾಂತಿಯುತವಾಗಿ ನಡೆಯಬೇಕಾದಲ್ಲಿ ದೋಷರಹಿತ ಮತದಾರರ ಪಟ್ಟಿ ತಯಾರಿಸುವುದು ಅತ್ಯಗತ್ಯವಾಗಿರುತ್ತದೆ. ಈ ರೀತಿ ಮತದಾರರ ಪಟ್ಟಿ ಸಿದ್ದಪಡಿಸಬೇಕಾದಲ್ಲಿ ಅರ್ಹ ಮತದಾರರು ನೊಂದಾಯಿಸುವುದು ಅವಶ್ಯಕವಾಗಿರುತ್ತದೆ. ಸುಭದ್ರ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾಯಾದ್ಯಂತ ವಾಸವಿರುವ ಎಲ್ಲಾ ಅರ್ಹ ಮತದಾರರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಬೇಕೆಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಕೋರಿದ್ದಾರೆ.


