ಕಲಬುರಗಿ: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಕೊಡಲಾಗುತ್ತಿರುವ ಇಂದಿರಾ ಕಿಟ್ ನಲ್ಲಿ ರಾಜ್ಯದ ಪ್ರತಿ ಕುಟುಂಬಕ್ಕೆ 2 ಕೆಜಿ ತೊಗರಿ ಬೇಳೆ ವಿತರಣೆ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಒಂದು ಕೆಜಿ ತೊಗರಿ ಬೇಳೆ ನೀಡುತ್ತಿದ್ದೆವು. ಅಧಿಕಾರ ಮುಗಿದ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇದೀಗ ತೊಗರಿ ವಿತರಿಸುವ ಕಾಲ ಮತ್ತೆ ಕೂಡಿ ಬಂದಿದೆ. ಪ್ರತಿ ತಿಂಗಳು 1 ಕೋಟಿಗೂ ಹೆಚ್ಚು ಕುಟುಂಬದವರಿಗೆ ತೊಗರಿ ಬೇಳೆ ನೀಡುತ್ತಿರುವುದರಿಂದ ತೊಗರಿ ಬೆಳೆಯುವ ಈ ಭಾಗದ ರೈತರಿಗೆ ದೊಡ್ಡ ಪ್ರಮಾಣದ ಲಾಭ ಆಗಲಿದೆ ಎಂದರು.
ತೊಗರಿ ಬೇಳೆಯಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿ ಇರುವುದರಿಂದ ದೈಹಿಕವಾಗಿ ಆರೋಗ್ಯ ಸದೃಢ ಇಟ್ಟುಕೊಳ್ಳಲು ಲಾಭವಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ ಕೊಡುತ್ತಿರುವ ತೊಗರಿಯನ್ನು ನೇರವಾಗಿ ರೈತರಿಂದ ಖರೀದಿ ಮಾಡಲಾಗುತ್ತಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಬೆಲೆ ನಿಗದಿಪಡಿಸಿ, ಟೆಂಡರ್ ಕರೆಯಲಾಗುತ್ತದೆ ಎಂದು ಹೇಳಿದರು.
ಬೀದರ್, ಯಾದಗಿರಿ, ರಾಯಚೂರು, ಬಾಗಲಕೋಟ, ವಿಜಯಪುರ ಹಾಗೂ ಕಲಬುರಗಿ ಯಲ್ಲಿ ಬೆಳೆ ನಷ್ಟದ ಕುರಿತಾಗಿ ಈಗಾಗಲೇ ಶೇ.70 ರಷ್ಟಕ್ಕೂ ಹೆಚ್ಚು ಸರ್ವೇ ಕಾರ್ಯ ನಡೆದಿದೆ. ಕಲಬುರಗಿ ಜಿಲ್ಲೆಯೊಂದಕ್ಕೆ 500 ಕೋಟಿಗೂ ಹೆಚ್ಚು ಪರಿಹಾರ ವಿಮೆ ಹಣ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಹಸಿ ಬರಗಾಲ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ರೈತರ ರಕ್ಷಣೆಗೆ ಬದ್ದವಾಗಿದೆ. ಸಿಎಂ ಸಹ ಖುದ್ದಾಗಿ ಬಂದು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಹಸಿ ಬರಗಾಲ ಘೋಷಣೆ ಎನ್ ಡಿ ಆರ್ ಎಫ್ ಕಾಯ್ದೆಯಡಿ ಘೋಷಣೆ ಮಾಡಬೇಕು. ಅದನ್ನು ಪರಿಶೀಲಿಸಿ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ.ವೈ ಪಾಟೀಲ್ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ರೆಡ್ಡಿ ಇದ್ದರು.
ಕೇಂದ್ರದಿಂದ ರಾಜ್ಯಕ್ಕೆ ನಿರಂತರ ಮಲತಾಯಿ ಧೋರಣೆ:
ಕೇಂದ್ರ ಸರ್ಕಾರ ರಾಜ್ಯದ ಮೇಲೆ ನಿರಂತವಾಗಿ ಮಲತಾಯಿ ದೋರಣೆ ಮಾಡುತ್ತಿದೆ. ಕರ್ನಾಟಕದ ಮೇಲೆ ಮೋದಿ ಸರಕಾರದ ಮೇಲೆ ವಕ್ರದೃಷ್ಟಿ ಇದೆ. ನಮ್ಮ ಸರಕಾರ ಅಲ್ಲ, ಹಿಂದಿನ ಬಿಜೆಪಿ ಸರಕಾರ ಇದ್ದಾಗಲೂ ಮಲತಾಯಿ ದೋರಣೆ ಮಾಡುತ್ತಿದೆ. 4.5 ಲಕ್ಷ ಕೋಟಿ ಜಿಎಸ್ ಟಿ ಕೊಟ್ಟರೂ ಅವರು ನಮಗೆ ಬರುವ ಅರ್ಧದಷ್ಟು ಪಾಲು ಕೊಡುತ್ತಿಲ್ಲ, ಸರಿಯಾದ ಕ್ರಮವಲ್ಲ. ಈ ಬಗ್ಗೆ ಬಿಜೆಪಿಗರು ಧ್ವನಿ ಇತ್ತಲ್ಲ. ಹೋಗಲಿ ಭೇಟಿ ಕೊಡುವ ಅವಕಾಶವೂ ನೀಡಲ್ಲ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ಡಿಕ್ಟೇಟರ್ ಶಿಪ್ ಅಧಿಕಾರ ನಡೆಸುತ್ತಿದೆ ಹೊರತು ಪ್ರಜಾಪ್ರಭುತ್ವ ಅಲ್ಲ. ಡೆಮಾಕ್ರೆಟಿಕ್ ಬದಲು. ಆಟೋಪ್ರೆಟಿಕ್ ಸರಕಾರ ಮಾಡುತ್ತಿದ್ದಾರೆ. ತಮ್ಮ ಸಿದ್ಧಾಂತದಂತೆ ಕೇಂದ್ರೀಕೃತ ಅಧಿಕಾರಕ್ಕೆ ಬಿಜೆಪಿ ಕೇಂದ್ರ ಸರಕಾರ ನಿಂತಿದೆ. ಇದು ದೇಶಕ್ಕೆ ಮಾರಕ. ಜಿಎಸ್ ಟಿ ಕಡಿತಗೊಳಿಸಿದ್ದೆ ಬಿಜೆಪಿ ಸರಕಾರದ ಸಾಧನೆ ಎನ್ನುವಂತೆ ತೋರಿಸುತ್ತಿದ್ದಾರೆ. ಇದು ಯಾವ ನ್ಯಾಯ. ಇಷ್ಟು ವರ್ಷ ಹೆಚ್ಚು ಮಾಡಿ, ಈಗ ಇಳಿಸಿ, ಸಂಭ್ರಮಿಸುತ್ತಿರುವುದು ಹಾಸ್ಯಸ್ಪದವಾಗಿದೆ ಎಂದರು.
ನವೆಂಬರ್ ಕ್ರಾಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲವೂ ಮಾಧ್ಯಮ ಸೃಷ್ಟಿ, ಯಾರೋ ಹೋಗುವವರಿಗೆ ಪ್ರಶ್ನೆ ಕೇಳಿದರೆ, ಅದಕ್ಕೆ ಪ್ರತಿಕ್ರಿಯೆ ನೀಡಿದ್ದರೆ, ಅದು ನವೆಂಬರ್ ಕ್ರಾಂತಿ ಆಗಲ್ಲ.
_ ಡಾ.ಶರಣಪ್ರಕಾಶ್ ಪಾಟೀಲ್ (ಸಚಿವ)


