ಕಲಬುರಗಿ: ಚಿತ್ತಾಪುರ ಮತಕ್ಷೇತ್ರದ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ ಮೂರ್ತಿ ಭಗ್ನಗೊಳಿಸಿ ಅವಮಾನಿಸಿದ ಕಿಡಿಗೇಡಿಗಳನ್ನು 24 ಗಂಟೆಗಳಲ್ಲಿ ಬಂಧಿಸಿ ಜೈಲಿಗಟ್ಟಬೇಕು ಎಂದು ಮಾಜಿ ಸಚಿವ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಒತ್ತಾಯಿಸಿದ್ದಾರೆ.
ಮುತ್ತಗಾ ಗ್ರಾಮಕ್ಕೆ ಭೇಟಿ ನೀಡಿ ಭಗ್ನಗೊಂಡ ಚೌಡಯ್ಯ ನವರ ಮೂರ್ತಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ಮೂರ್ತಿಯ ಅವಮಾನ ಕೇವಲ ಮುತ್ತಗಾ ಗ್ರಾಮದವರಿಗೆ ನೋವು ತಂದಿಲ್ಲ, ಬದಲಾಗಿ ಇಡೀ ರಾಜ್ಯದ ಸಮಸ್ತ ಕೋಲಿ ಸಮಾಜದವರಿಗೆ ನೋವುಂಟು ಮಾಡಿದೆ ಹಾಗೂ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ಭಾವೋದ್ವೇಗದಿಂದ ಹೇಳಿದರು.
ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ತಕ್ಷಣ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ನಾನು ಇಂದೇ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಮಾತನಾಡುತ್ತೇನೆ ಎಂದು ಹೇಳಿದರು.
ಅಂಬಿಗರ ಚೌಡಯ್ಯನವರ ಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅದಕ್ಕೆ ತಗಲುವ ಖರ್ಚನ್ನು ನನ್ನ ಧರ್ಮಪತ್ನಿ ಅಮರೇಶ್ವರಿ ಚಿಂಚನಸೂರ ಅವರು ಕೊಡಲು ಸಿದ್ಧರಿದ್ದಾರೆ. ಬರುವ ಜನವರಿ 21 ರಂದು ಅಂಬಿಗರ ಚೌಡಯ್ಯ ಜಯಂತಿ ಒಳಗಾಗಿ ಹೊಸ ಮೂರ್ತಿ ಮಾಡಿಸಿ ಜಯಂತಿ ದಿನದಂದು ಅನಾವರಣ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೀಮಣ್ಣ ಸಾಲಿ, ಮುತ್ತಗಾ ಕೋಲಿ ಸಮಾಜದ ಅಧ್ಯಕ್ಷ ಶಿವರಾಜ್ ನಾಟೀಕಾರ, ಬಸವರಾಜ ಜೀರಕಲ್, ವಿಜಯಕುಮಾರ್ ನಾಟೀಕಾರ, ಸುಧಾಕರ್ ರಾಮಗುಂಡ, ದೇವಣ್ಣ ಹಳ್ಳಿ, ರಾಹುಲ್ ಜೀರಕಲ್, ಮಲ್ಲೇಶಿ ಜೀರಕಲ್, ಗಜಣ್ಣ ಭಂಕೂರ, ಮಂಜು ವಾಲೀಕಾರ ಶಂಕರವಾಡಿ ಸೇರಿದಂತೆ ಇತರರು ಇದ್ದರು.


