ಕಲಬುರಗಿ: ನೆರೆ ಹಾವಳಿ, ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿದ್ದು, ಜಿಲ್ಲೆಯನ್ನು ಅತಿವೃಷ್ಟಿ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ, ಸಾಲ ಮನ್ನಾ ಸೇರಿದಂತೆ ಈ ಪ್ರದೇಶವನ್ನು ‘ಹಸಿ ಬರಗಾಲ’ ಎಂದು ಘೋಷಿಸಬೇಕೆಂದು ಆಗ್ರಹಿಸಿ, ಇದೇ ಅ.13ರಂದು ಕರೆ ನೀಡಿರುವ ಕಲಬುರಗಿ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ರೈತ, ದಲಿತ, ಕನ್ನಡ, ಮಹಿಳಾ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಮುಖಂಡ ದಯಾನಂದ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಅಂದು ಬೆಳಗ್ಗೆ 8 ಗಂಟೆಯಿಂದ ನಗರದ ಕೇಂದ್ರ ಬಸ್ ನಿಲ್ದಾಣದ, ಆಳಂದ ಚೆಕ್ ಪೋಸ್ಟ್, ರಾಮಮಂದಿರ ಸರ್ಕಲ್ ಜೇವರ್ಗಿ ರಸ್ತೆ, ಸೇಡಂ ರಿಂಗ ರೋಡ್, ಹುಮನಾಬಾದ ರಿಂಗ್ ರೋಡ್, ಹೀರಾಪುರ ಕ್ರಾಸ್, ಹೈಕೋರ್ಟ್ ರಸ್ತೆಯ ಪಕ್ಕದ ಅಫಜಲಪುರ ರಿಂಗ್ ರೋಡ್, ಶಹಾಬಾದ ರಿಂಗ್ ರೋಡ್ ಸಮೀಪದಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಬೃಹತ್ ಮೆರವಣಿಗೆ ಮೂಲಕ ಬಂದು ಜಗತ್ ಸರ್ಕಲ್‌ನಲ್ಲಿ ರೈತ ಸಭೆ ನಡೆಸಲಾಗುವುದು ಎಂದರು.
ನಗರದ ಅಲ್ಲಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಎತ್ತಿನ ಗಾಡಿ, ಟ್ರಾಕ್ಟರ್ ಟ್ರೈಲಿಗಳನ್ನು ನಿಲ್ಲಿಸುವುದರ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ ಎಂದು ವಿವರಿಸಿದರು.
ಕಲಬುರಗಿ ಬಂದ್‌ಗೆ ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ಅಡತ್ ಬಜಾರ್, ಲಾರಿ ಮಾಲಕರ ಸಂಘ, ದಾಲ್‌ಮಿಲ್ ಸಂಘ, ಆಟೋ ಚಾಲಕರ ಸಂಘ, ಪೆಟ್ರೋಲ್ ಬಂಕ್ ಮಾಲೀಕರ ಸಂಘಗಳು ಬೆಂಬಲಿಸಲಿವೆ ಎಂದು ರೈತ ಮುಖಂಡರಾದ ಭೀಮಾಶಂಕರ ಮಾಡ್ಯಾಳ ಹಾಗೂ ಎ.ಬಿ. ಹೊಸಮನಿ ತಿಳಿಸಿದರು.
ಇದೇ ವೇಳೆಯಲ್ಲಿ ಮಾತನಾಡಿದ ಮುಖಂಡ ಶರಣಬಸಪ್ಪ ಮಮಶೆಟ್ಟಿ, ಜಿಲ್ಲೆಯನ್ನು ಹಸಿರು ಬರಗಾಲ ಪ್ರದೇಶವೆಂದು ಘೋಸಿಸಬೇಕು, ಸರಕಾರ ಶೀಘ್ರವೇ ಎಕರೆಗೆ 25 ಸಾವಿರ ಪರಿಹಾರ ಮತ್ತು ಹಿಂಗಾರು ಬೆಳೆ ಬಿತ್ತನೆಗೆ ಬೀಜ, ರಸಗೊಬ್ಬರ ಸಾಲ ಮನ್ನಾ, ಹಿಂಗಾರು ಬಿತ್ತನೆಯ ಉಚಿತ ಬೀಜ, ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದ ಮುಳುಗಡೆಯಾದ ಪ್ರದೇಶಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ಜಿಲ್ಲೆಯಲ್ಲಿ 11 ಮಂದಿ ರೈತರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅವರ ಪರ ಸರ್ಕಾರ ನಿಲ್ಲಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಉಮಾಪತಿ ಪಾಟೀಲ್, ಅರ್ಜುನ್ ಗೊಬ್ಬೂರು, ಜಗದೇವಿ ಹೆಗಡೆ, ರವಿ ದೇಗಾoವ್, ಮಂಜುಳಾ ಭಜಂತ್ರಿ, ಮೊಬಿನ್ ಅಹ್ಮದ್, ನಾಗೇಂದ್ರಪ್ಪ ಥoಬೆ, ಮಹೇಶ್ ಕಡೆಚೂರು, ಕರೆಪ್ಪಾ ಕರಗೊಂಡ, ಮಹಾಂತಗೌಡ, ಮಲ್ಲನಗೌಡ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.


