ಕಲಬುರಗಿ: ಜಿಲ್ಲೆಯ ಕಾಳಗಿ ಹಾಗೂ ಚಿಂಚೋಳಿ ತಾಲ್ಲೂಕು ವ್ಯಾಪ್ತಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಬೆಳೆ ಹಾನಿ ಕುರಿತಂತೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರುನ್ನಮ್ ಅವರು ಮಂಗಳವಾರ ಪರಿವೀಕ್ಷಣೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಸಹ ಪರಿಶೀಲಿಸಿ ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು. ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ಕರೆದು ವಿಪತ್ತು ನಿರ್ವಹಣಾ ಕೆಲಸಗಳನ್ನು ಪ್ರಥಮಾದ್ಯತೆ ಮೇಲೆ ಮಾಡುವಂತೆ ಸೂಚಿಸಿದರು.
ಕಾಳಗಿಯಲ್ಲಿ ನಿರ್ಮಿಸಲಾಗಿರುವ ಚುನಾವಣಾ ಸ್ಟ್ರಾಂಗ್ ರೂಮ್ ವೀಕ್ಷಿಸಿದ ಜಿಲ್ಲಾಧಿಕಾರಿಗಳು ನಂತರ ಲೋಕೋಪಯೋಗಿ ಇಲಾಖೆಯಿಂದ ಕೊಡ್ಲಿ ಕ್ರಾಸ್ ನಲ್ಲಿನ ವಿವಿಧ ಕಾಮಗಾರಿಗಳು ಮತ್ತು ಕೋರವಾರದಿಂದ ವಚ್ಚಾದವರೆಗೆ ನಿರ್ಮಿಸಲಾಗುತ್ತಿರುವ ಬ್ರಿಡ್ಜ್ ಕಾಮಗಾರಿ ಪರಿವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಹಾಯಕ ಆಯುಕ್ತರಾದ ಸಾಹಿತ್ಯ, ಪ್ರಭುರೆಡ್ಡಿ, ತಹಶೀಲ್ದಾರರಾದ ಸುಬ್ಬಣ್ಣ ಜಮಖಂಡಿ, ಪೃಥ್ವಿರಾಜ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಸುಭಾಷ ಬಿರಾದಾರ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.