ಕಲಬುರಗಿ: 1995 ರಿಂದ ಪ್ರಾರಂಭವಾದ ಕನ್ನಡ ಮಾಧ್ಯಮದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಬೇಕು ಎಂದು ಗಮನ ಸೆಳೆಯುವ ಸೂಚನೆ ಮಂಡಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಂದ ಅನುದಾನ ನೀಡುವ ಭರವಸೆ ಪಡೆಯುವಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಯಶಸ್ವಿಯಾದರು.
ಮಂಗಳವಾರ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಮೊದಲಿಗೆ ಗಮನ ಸೆಳೆಯುವ ಸೂಚನೆ ಮಂಡಿಸಿದಾಗ ಸರ್ಕಾರ ನೀಡಿದ ಉತ್ತರಕ್ಕೆ ತೃಪ್ತರಾಗಲಿಲ್ಲ, ಆದರೆ ಸಚಿವರಾದ ಮಧು ಬಂಗಾರಪ್ಪ ನವರು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿಯವರಿಗೆ ನಮ್ಮ ರಾಜ್ಯ ಸರ್ಕಾರ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳನ್ನು ಹಿತ ಕಾಪಾಡಲು ಬದ್ಧವಾಗಿದೆ ಎಂದು ತಿಳಿಸಿದರು.
1995 ರಿಂದ 2005 ರ ವರೆಗಿನ ಅಂದರೆ 10 ವರ್ಷಗಳ ವರೆಗಿನ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಲು ಸಿದ್ಧವಿದ್ದು, ಕೂಡಲೇ ನಾನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಹಣಕಾಸು ಇಲಾಖೆ ಅಧಿಕಾರಿಗಳ ಅವರೊಡನೆ ಮಾತನಾಡಿ ಶೀಘ್ರದಲ್ಲೇ ಧನಾತ್ಮಕ ತೀರ್ಮಾನ ತೆಗೆದುಕೊಳ್ಳಲು ಸಿದ್ಧವಿರುವದಾಗಿ ಭರವಸೆ ನೀಡಿದರು.
ಇದಕ್ಕೆ ಒಪ್ಪಿಗೆ ಸೂಚಿಸಿದ ನಮೋಶಿಯವರು ಕೇವಲ ಮೌಖಿಕವಾಗಿ ಭರವಸೆ ನೀಡುವುದಕ್ಕಿಂತ ನಾಳೆಯೇ ಇದಕ್ಕೊಂದು ಲಿಖಿತ ಆದೇಶ ಹೊರಡಿಸಲು ಒತ್ತಾಯಿಸಿದ್ದಾರೆ.