ಕಲಬುರಗಿ: ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮೌಲ್ಯಾಧಾರಿತ ದಾರ್ಶನಿಕ, ಮಧ್ಯಯುಗದ ಸಾಮಾಜಿಕ ಕ್ರಾಂತಿಯ ಹರಿಕಾರ. ಭಕ್ತಿ ಮತ್ತು ಅರಿವುಗಳನ್ನು ಪ್ರತಿಪಾದಿಸಿ ಜನಸಾಮಾನ್ಯರ ಭಾಷೆಯಲ್ಲೇ ಪ್ರಬಲ ಮತ್ತು ವೈಚಾರಿಕವಾಗಿರುವ ತತ್ವಗಳನ್ನು ಬಿತ್ತಿದ ಮಹಾಪುರುಷ ಎಂದು ಶರಣಬಸವ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ.ಶರಣಬಸಪ್ಪ ಪಾಟೀಲ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶ್ರಾವಣ ಮಾಸದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿಷಯದ ಶೀರ್ಷಿಕೆ ಅಡಿಯಲ್ಲಿ ಬಸವಣ್ಣನವರು ಮತ್ತು ಮಾನವೀಯ ಮೌಲ್ಯಗಳು ಎಂಬ ವಿಷಯ ಕುರಿತು ಮಾತನಾಡಿದರು.
ಬಸವಣ್ಣನವರು ಮಾನವೀಯ ಮೌಲ್ಯಗಳನ್ನು ಬೋಧಿಸಿದ ಮಹಾನ್ ದಾರ್ಶನಿಕರು ಮತ್ತು ಸಮಾಜ ಸುಧಾರಕರು. ಅವರು ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ ನಿಷ್ಠೆ, ಮತ್ತು ದಾಸೋಹದಂತಹ ಮೌಲ್ಯಗಳನ್ನು ಸಾರಿದರು.
ಕಾಯಕ ನಿಷ್ಠೆ, ಮಾನವೀಯತೆಯ ಮೌಲ್ಯಗಳು ಸರ್ವ ಜನಾಂಗದ ಧ್ವನಿಯಾಗಬೇಕೆಂದು ಬಯಸಿದರು. ಅಂತಲೇ ಅವರು ಧಾರ್ಮಿಕ, ಸಾಮಾಜಿಕ ಕಾರ್ಯಗಳ ಸೇವೆಗಳನ್ನು ಅಂದಿನ ಅನುಭವ ಮಂಟಪದ ಮೂಲಕ ಮಾಡಿದರು. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿ ಮಾನವೀಯ ಮೌಲ್ಯಗಳ ಹರಿಕಾರರಾದರು.
ಬಸವಣ್ಣನವರ ಈ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಬೋಧನೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ, ನಾವು ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ಬಸವಣ್ಣನವರು ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಬಸವಣ್ಣನವರ ಶರಣ ಸಂಸ್ಕೃತಿ ವೈಚಾರಿಕ ಕ್ರಾಂತಿಯು ೧೨ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ, ಮಾನವೀಯ ಮೌಲ್ಯಗಳು, ಸೌಹಾರ್ದತೆ, ದಯೇ ಭಕ್ತಿ , ಸಾಹಿತ್ಯ, ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಮಾನತೆ ಸೇರಿದಂತೆ ಹಲವು ಅದ್ಭುತ ಚಿಂತನೆಗೆ ಮುನ್ನುಡಿ ಬರೆದು ಐತಿಹಾಸಿಕ ಮಾಹಾಕ್ರಾಂತಿಗೆ ಸಾಕ್ಷಿಯಾಗಿ ಇತಿಹಾಸದ ಪುಟ ಪುಟಗಳಲ್ಲಿ ಹೊಸ ಇತಿಹಾಸ ಸೃಷ್ಟಿಸಿ ದಾಖಲಾಗಿ, ಅಜರಾಮರವಾಗಿಸಿದ್ದಾರೆ.
ಜನರಲ್ಲಿ ವೈಚಾರಿಕ, ವೈಜ್ಞಾನಿಕ ಮತ್ತು ಮಾನವೀಯ ಮೌಲ್ಯ ಬಿತ್ತಿ ಆದರ್ಶಪ್ರಾಯರಾದರು. ಧನಿಯಿಲ್ಲದವರಿಗೆ ಧನಿಯಾಗಿ ಶಕ್ತಿ ಇಲ್ಲದವರಿಗೆ ಶಕ್ತಿಯಾಗಿ ಆತ್ಮವಿಶ್ವಾಸ ತುಂಬಿದರು. ಬಸವಣ್ಣ ಕೇವಲ ವಚನ ಚಳವಳಿಯ ನೇತಾರರಷ್ಟೇ ಅಲ್ಲ ಮಾನವ ಬದುಕನ್ನು ನಡೆಸಲು ಆದರ್ಶದ ಹಾದಿಯನ್ನು ತೋರಿದ ಮಾರ್ಗದರ್ಶಕರು. ಮೇಲು-ಕೀಳು ಬಡವ-ಬಲ್ಲಿದ ಹೆಣ್ಣು-ಗಂಡು ಅನ್ನುವ ತಾರತಮ್ಯವನ್ನು ಹೋಗಲಾಡಿಸಿ ಸರ್ವಜನಾಂಗದ ಏಳಿಗೆಯನ್ನು ಬಯಸಿ ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಿ ಶ್ರೇಷ್ಠರಾದರು ಎಂದು ಹೇಳಿದರು. ಸಂಚಾಲಕ ಡಾ.ಶಿವರಾಜ ಶಾಸ್ತಿç ಹೇರೂರ್ ಮಾತನಾಡಿದರು.