ಕಲಬುರಗಿ: ಭಾರತದಲ್ಲಿ ಗ್ರಂಥಾಲಯ ವಿಜ್ಞಾನ ಶಿಕ್ಷಣದ ಸಾಂಸ್ಥಿಕೀಕರಣದಲ್ಲಿ ರಂಗನಾಥನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯ ವಿಜ್ಞಾನ ವಿಭಾಗಗಳನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು ಎಂದು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಯೋಜನಾಧಿಕಾರಿ ಪ್ರೊ. ಚಂದ್ರಕಾಂತ ಯಾತನೂರ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ “ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹ” ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿ ಡಾ. ಎಸ್ ಆರ್ ಅವರ ಜನ್ಮ ದಿನಾಚರಣೆ ದಿನದಂದು, ನಾವು ಅವರ ಪರಂಪರೆಯನ್ನು ಗೌರವಿಸುತ್ತೇವೆ, ಅವರಂತೆ ಪ್ರಾಮಾಣಿಕತೆ, ಸಮರ್ಪಣೆ ಮತ್ತು ಬದ್ಧತೆಯಿಂದ ಕೆಲಸ ಮಾಡಿ ಭಾರತೀಯ ಗ್ರಂಥಾಲಯದಲ್ಲಿ ಅವರ ಹೆಜ್ಜೆ ಗುರುತುಗಳನ್ನು ವಿದ್ಯಾರ್ಥಿಗಳು ಸಮಾಜಕ್ಕೆ ಜ್ಞಾನ ಮತ್ತು ಸಮಗ್ರತೆಯನ್ನು ಕೊಡಬೇಕು ಎಂದರು. ಇಂದು ತಂತ್ರಜ್ಞಾನ ತುಂಬಾ ಮುಂದುವರಿದಿದೆ ಇತ್ತೀಚಿನ ದಿನಗಳಲ್ಲಿ ಎಐ ತುಂಬಾ ಸದ್ದು ಮಾಡುತ್ತಿದೆ. ಡಿಜಿಟಲ್ಕರ್ಣ್ಕ್ಕಿಂತ ಕೈಯಲ್ಲಿ ಹಿಡಿದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಯಾಕೆಂದರೆ ಒಂದು ಪುಸ್ತಕ ನೂರು ಸ್ನೇಹಿತರ ಸಮನಾಗಿ ಸಂತೋಷ ನೀಡುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ, ವಿ. ಟಿ. ಕಾಂಬಳೆ ಮಾತನಾಡಿ ಇಂದು ವಿದ್ಯಾರ್ಥಿಗಳು ಎಸ್ ಆರ್ ರಂಗನಾಥನ್ ಅವರ ಮುಖ್ಯವಾದ ಕೊಡುಗೆಯನ್ನು ಅಭ್ಯಾಸ ಮಾಡಬೇಕು. ಯಾವ ಶೈಕ್ಷಣಿಕ ಸಂಸ್ಥೆಗಳಲ್ಲಿ ಗ್ರಂಥಾಲಯ ಇರುವುದಿಲ್ಲವೋ ಆ ಸಂಸ್ಥೆಯು ಶೈಕ್ಷಣಿಕ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಶಿಕ್ಷಣ ಸಂಸ್ಥೆಗಳಿಗೆ ಗ್ರಂಥಾಲಯ ಹೃದಯ ಭಾಗ ಇದ್ದಂತೆ. ಭಾರತದ ಅತ್ಯಂತ ಹಳೆಯ ನಳಂದ ವಿಶ್ವವಿದ್ಯಾಲಯಕ್ಕೆ ವಿದೇಶಿಯರು ಬರುತ್ತಿದ್ದರು ಸಂಶೋಧನೆ ಮಾಡುವುದಕ್ಕೆ. ಹೀಗಾಗಿ ಗ್ರಂಥಾಲಯ ಸಂಶೋಧಕರಿಗೆ ಜ್ಞಾನದ ಭಂಡಾರವಾಗಿದೆ ಎಂದು ಅವರು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ, ಡಿ. ಬಿ. ಪಾಟೀಲ್, ಡಾ. ರಾಜಕುಮಾರ ದಣ್ಣೂರ ಇದ್ದರು. ವಿದ್ಯಾರ್ಥಿಗಳಾದ ಪ್ರೇಮಾ, ಅರ್ಚನಾ, ಸಾವಿತ್ರಿ, ಉಪಸ್ಥಿತರಿದ್ದರು. ಪ್ರೀತಿ ಸ್ವಾಗತ ಗೀತೆ ಹಾಡಿದರು. ಮುಸ್ತಾಫ್ ನಿರೂಪಿಸಿದರು, ಅಂಬರೀಶ್ ಸ್ವಾಗತಿಸಿದರು, ವಿರೇಶ ವಂದಿಸಿದರು.