ಕಲಬುರಗಿ: ಮುಖ್ಯಮಂತ್ರಿ ಘೋಷಿಸಿದ್ದ ಗೌರವಧನ ಹಾಗೂ ಕೇಂದ್ರದ ಪ್ರೋತ್ಸಾಹಧನ ಸೇರಿಸಿ ಮಾಸಿಕ 10,000 ಗೌರವಧನ ನೀಡುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ನಗರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಆಶಾ ಕಾರ್ಯಕರ್ತೆಯ ರಾಜ್ಯವ್ಯಾಪಿ ನಡೆಯುತ್ತಿರುವ ಮೂರು ದಿನಗಳ ಕಾಲದ ಅಹೋರಾತ್ರಿ ಧರಣಿ ಸತ್ಯಾಗ್ರಹದ ಮೊದಲ ದಿನದಂದು ಆಶಾ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಂಘಟನೆಯ ಗೌರವಾಧ್ಯಕ್ಷ ವಿ.ಜಿ ದೇಸಾಯಿ, ಕಳೆದ ಜನವರಿ ತಿಂಗಳಲ್ಲಿ ಆಶಾ ಕಾರ್ಯಕರ್ತೆಯರ ಕನಿಷ್ಠ ಗೌರವಧನವನ್ನು 10 ಸಾವಿರಕ್ಕೆ ಹೆಚ್ಚಿಸುವುದಾಗಿ ಹೇಳಿದ್ದರು. ಹಾಗಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಹೋರಾಟವನ್ನು ಕೈಬಿಟ್ಟು ವಿಜಯೋತ್ಸವ ಆಚರಿಸಿದೆವು. ಆದರೆ ಈಗ 7 ತಿಂಗಳು ಕಳೆದರೂ ಕೊಟ್ಟ ಮಾತಿನಂತೆ ಸರಕಾರ ನಡೆದುಕೊಂಡಿಲ್ಲ. ಈಗಲಾದರೂ ಕೂಡಲೇ ಕ್ರಮ ಕೈಗೊಂಡು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗೀತಾ ಬಡಿಗೇರ್ ಮಾತನಾಡಿ, ಶಿಕ್ಷಣದ ಆಧಾರದ ಮೇಲೆ ಆಶಾ ಕಾರ್ಯಕರ್ತೆಯರನ್ನು ಕೈಬಿಡುವುದಾಗಿ ಹೇಳುತ್ತಿದ್ದಾರೆ, ಮೊದಲು ತೆಗೆದುಕೊಳ್ಳುವಾಗ ಶಿಕ್ಷಣ ಬೇಕಾಗಿರಲಿಲ್ಲ, ಈಗ್ಯಾಕೆ ಶಿಕ್ಷಣ ಬೇಕು ಅಂತಿದ್ದಾರೆ? ಎಂದು ಪ್ರಶ್ನಿಸಿದ ಅವರು, ಆಶಾ ಕಾರ್ಯಕರ್ತೆಯರ ಕಷ್ಟಗಳು ತುಂಬಾ ಇವೆ, ಅದನ್ನ ಸಿಎಂ ಅವರು ಗಮನ ಹರಿಸಬೇಕು, ಇಲ್ಲದಿದ್ದರೆ ನಾವು ಅಹೋರಾತ್ರಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.



ಸಿಎಂ ಘೋಷಿಸಿದಂತೆ ಮಾಸಿಕ ಕನಿಷ್ಠ ಗೌರವಧನ 10 ಸಾವಿರಕ್ಕೆ ಹೆಚ್ಚಿಸುವುದು, 2025ರ ಬಜೆಟ್ ನಲ್ಲಿ ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ 1 ಸಾವಿರ ರೂಪಾಯಿ ಪ್ರೋತ್ಸಾಹಧನ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೂ ನೀಡಿ, ಜನಸಂಖ್ಯೆ ಆಧಾರದಲ್ಲಿ ಆಶಾ ಕಾರ್ಯಕರ್ತೆಯರನ್ನು ತೆಗೆಯುವುದನ್ನು ಕೈಬಿಡಬೇಕು, ವಾರದ ರಜೆ ಘೋಷಣೆ, ಪಶ್ಚಿಮ ಬಂಗಾಳ ಮಾದರಿಯಲ್ಲಿ ಕಾರ್ಯಕರ್ತೆಯರಿಗೆ ಇಡುಗಂಟು ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ಶಿವಲಿಂಗಮ್ಮ ನಂದೂರ್, ಜಿಲ್ಲಾ ಕಾರ್ಯದರ್ಶಿ ಗೀತಾ ಬಡಿಗೇರ್, ಜಯಶ್ರೀ ದಂಡೋತಿ, ವಿಜಯಲಕ್ಷ್ಮಿ ಕಮಲಾಪುರ್, ಲಕ್ಷ್ಮಿ ತಳವಾರ್ ಚಿಂಚೋಳಿ, ನಾಗವೇಣಿ, ಸುನಂದಾ, ಕವಿತಾ ಅಫಜಲಪೂರ್, ಮಲ್ಲಮ್ಮ ಹಿರೋಳಿ, ಮಂಜುಳಾ ಯಳಸಂಗಿ, ಶರಣಮ್ಮ, ಸಂಘಟಕರಾದ ಮಹೇಶ್, ಜಗನ್ನಾಥ್ ಸೇರಿದಂತೆ ಹಲವು ಆಶಾ ಕಾರ್ಯಕರ್ತೆಯರು ಇದ್ದರು.