ಕಲಬುರಗಿ: ನಗರದ ಹೊರವಲಯದಲ್ಲಿರುವ ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ತಾಡತೆಗನೂರ ಗ್ರಾಮದಲ್ಲಿ 2 ಲಕ್ಷ ರೂಪಾಯಿ ಮೌಲ್ಯದ 200 ಮಹಾಗನಿ ಗಿಡಗಳನ್ನು ಕಡಿದು ನಾಶ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಡತೆಗನೂರ ಗ್ರಾಮದ ನಿವಾಸಿಗಳಾದ ಶರಣಪ್ಪ ಧರ್ಮಣ್ಣ ಪೂಜಾರಿ ಹಾಗೂ ಹಣಮಂತ ಲಾಲಪ್ಪ ಹರಳಯ್ಯ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಡತೆಗನೂರ ಗ್ರಾಮದ ಸರ್ವೆ ನಂ. 32/1 ನೇದ್ದರಲ್ಲಿ 3 ಎಕರೆ, 23 ಗುಂಟೆ ಜಮೀನಿನಲ್ಲಿ ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಅತಿಕ್ರಮ ಪ್ರವೇಶ ಮಾಡಿ 250 ಮಹಾಗನಿ ಗಿಡಗಳ ಪೈಕಿ 200 ಗಿಡಗಳನ್ನು ಕಡಿದು ಹೊಲದಲ್ಲಿಯೇ ಬಿಸಾಕಿ ಹೋಗಿದ್ದಾರೆ ಎಂದು ಅನ್ನಪೂರ್ಣ ಶಶಿಕಾಂತ ಹಿರೇಮಠ ಎಂಬಾತರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಮೆರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅದೇ ಗ್ರಾಮದ ಇಬ್ಬರು ಆರೋಪಿಗಳನ್ನು ಬಂಧಿಸಿ, ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ 2 ಕೊಡಲಿಗಳನ್ನು ಜಪ್ತಿಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ.