ಕಲಬುರಗಿ: ರಾಜ್ಯ ಶಿಕ್ಷಣ ನೀತಿಯನ್ವಯ ಐಚ್ಛಿಕ ಕನ್ನಡ ಪಠ್ಯಬೋಧನೆಯ ಕಾರ್ಯಭಾರದ ಅವಧಿಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘ ದಿಂದ ಗುಲ್ಬರ್ಗಾ ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ಶೈಕ್ಷಣಿಕ ವರ್ಷ 2024-25ನೇ ಸಾಲಿನಿಂದ ರಾಜ್ಯ ಶಿಕ್ಷಣ ನೀತಿಯನ್ವಯ ಐಚ್ಛಿಕ ಕನ್ನಡ ಪಠ್ಯಬೋಧನೆಯ ಕಾರ್ಯಭಾರವನ್ನು ವಾರಕ್ಕೆ ಐದು ಅವಧಿಯನ್ನು ನಿಗದಿಪಡಿಸಲಾಗಿದೆ. ಆದರೆ ಇದೇ ಶೈಕ್ಷಣಿಕ ವರ್ಷದಲ್ಲಿ ಬೇರೆ ವಿಶ್ವವಿದ್ಯಾಲಯದವರು (ಬೆಂಗಳೂರು, ಮಂಗಳೂರು, ಮೈಸೂರ, ಧಾರವಾಡ, ತುಮಕುರ, ದಾವಣಗೆರೆ) ವಾರಕ್ಕೆ ಆರು ಗಂಟೆಗಳ ಬೋಧನಾ ಅವಧಿಯನ್ನು ನಿಗದಿಪಡಿಸಿದ್ದಾರೆ. ಆದರೆ ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಒಂದು ಗಂಟೆಯ ಬೋಧನಾ ಅವಧಿ ಕಡಿತಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಚರಿತ್ರೆಯನ್ನು ಮೂರು ವರ್ಷದ ಸ್ನಾತಕ ಪದವಿ ಅವಧಿಯಲ್ಲಿ ಕಲಿಸಲು ಬೋಧನಾ ಅವಧಿಯು ಸಾಕಾಗುವುದಿಲ್ಲ. ಆದ ಕಾರಣ ಐಚ್ಚಿಕ ಕನ್ನಡದ ಕಾರ್ಯಭಾರವನ್ನು ವಾರಕ್ಕೆ ಐದು ಗಂಟೆಯ ಬದಲಾಗಿ ಆರು ಗಂಟೆಗೆ ಹೆಚ್ಚಿಸಿ ವಿದ್ಯಾರ್ಥಿಗಳ ಕಲಿಕೆಗೆ ಮತ್ತು ಅಧ್ಯಾಪಕರ ಬೋಧನೆಗೆ ಅನುಕೂಲ ಮಾಡಿಕೊಡಬೇಕೆಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ.ಖಾಜಾವಲಿ ಈಚನಾಳ, ಡಾ.ಪಂಡಿತ್ ಬಿಕೆ, ಬಸಣ್ಣ ಕಾಗೆ, ಡಾ.ನಾನಗೌಡ ಪಾಟೀಲ್, ಸಿದ್ಧಲಿಂಗ ದಬ್ಬಾ, ಡಾ.ಶರಣಪ್ಪ ಚಕ್ರವರ್ತಿ, ಡಾ.ಎಂ. ಬಿ ಹೂಗಾರ್, ಸುನೀಲ್ ಕುಮಾರ್, ಎಂ.ಎಂ. ಮೇತ್ರಿ ಸೇರಿದಂತೆ ಮತ್ತಿತರರು ಇದ್ದರು.