ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (R-WBCIS) ಅನುಷ್ಠಾನಗೊಳಿಸಲು ಮಂಜೂರಾತಿ ನೀಡಿದ್ದು, ಈ ಯೋಜನೆಯಡಿ ರೈತರು ಹತ್ತಿರದ ಬ್ಯಾಂಕ್, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೊಂದಾಯಿಸಿಕೊಳ್ಳಲು 2025ರ ಆಗಸ್ಟ್ 11 ರಂದು ಕೊನೆಯ ದಿನವಾಗಿದೆ ಎಂದು ಕಲಬುರಗಿ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯ ಅಧ್ಯಕ್ಷರು ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಅಗ್ರಿಕಲ್ಚರಲ್ ಇನ್ಸುರೆನ್ಸ್ ಕಂಪನಿ (Agricultural Insurance Company(AIC) ವಿಮಾ ಕಂಪನಿಯು ಆಯ್ಕೆಯಾಗಿರುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಪಪ್ಪಾಯ ಮತ್ತು ಹಸಿರು ಮೆಣಸಿನಕಾಯಿ ಬೆಳೆಗಳನ್ನು ಎಲ್ಲಾ ಗ್ರಾಮ ಪಂಚಾಯಿತಿ/ನಗರ ಮತ್ತು ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಹಾಗೂ ದ್ರಾಕ್ಷಿ ಬೆಳೆಯನ್ನು ಅಫಜಲಪೂರ-17, ಆಳಂದ-15, ಚಿಂಚೋಳಿ-1, ಚಿತ್ತಾಪೂರ-1, ಕಲಬುರಗಿ-2, ಜೇವರ್ಗಿ-3 ಹಾಗೂ ಯಡ್ರಾಮಿ ತಾಲ್ಲೂಕಿನ-9 ಗ್ರಾಮ ಪಂಚಾಯಿತಿ/ನಗರ ಮತ್ತು ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ತಾಕುಗಳು ಬೆಳೆ ವಿಮೆ ಯೋಜನೆಗೆ ಒಳಪಡಿಸಲಾಗಿರುತ್ತದೆ. ಹಸಿರು ಮೆಣಸಿನಕಾಯಿ, ಪಪ್ಪಾಯ ಮತ್ತು ದ್ರಾಕ್ಷಿ ಬೆಳೆಗಳಿಗೆ ಪ್ರತಿ ಹೆಕ್ಟರ್‍ಗೆ ಕ್ರಮವಾಗಿ 3,550 ರೂ., 6,700 ರೂ. ಮತ್ತು 14,000 ರೂ. ವಿಮಾ ಕಂತಿನ ಮೊತ್ತ ನಿಗದಿಯಾಗಿದ್ದು, ವಿಮಾ ಮೊತ್ತ ಪ್ರತಿ ಹೆಕ್ಟರ್‍ಗೆ 71,000 ರೂ., 1,34,000 ರೂ. ಮತ್ತು 2,80,000 ರೂ. ಗಳನ್ನು ನಿಗದಿಪಡಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ತಮ್ಮ ಸಂಬಂಧಪಟ್ಟ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು/ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು/ ಹತ್ತಿರದ ಬ್ಯಾಂಕುಗಳ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.