ಕಲಬುರಗಿ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಸ್ಲಿಂ ಸಮುದಾಯವನ್ನು ಬೇರು ಸಮೇತ ಕಿತ್ತೊಗೆಯಬೇಕು. 8 ದಿವಸಗಳ ಒಳಗಾಗಿ ʼಲವ್ ಜಿಹಾದ್ʼ ಆರೋಪಿಗಳನ್ನು ಸಾಯಿಸಬೇಕು ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮಾತನಾಡಿರುವ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಎಫ್ಐಆರ್ ದಾಖಲಾಗಿದೆ.
ಮಣಿಕಂಠ ರಾಠೋಡ್ ತನ್ನ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ಕಲಬುರಗಿಯಲ್ಲಿ ಪೊಲೀಸರನ್ನು 15 ನಿಮಿಷಕ್ಕಾಗಿ ತಡೆ ಹಿಡಿಯಲಿ, ಮುಸ್ಲಿಮರನ್ನು ಬೋರಮಾಠಿ ಸಮುದಾಯ ಸಾಮೂಹಿಕವಾಗಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೋಮು ಪ್ರಚೋದನೆ ಹೇಳಿಕೆ ನೀಡಿರುವ ಬೆನ್ನಲ್ಲೇ ಮಣಿಕಂಠ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋಮು ಪ್ರಚೋದನೆ ನೀಡಿರುವ ಹಿನ್ನೆಲೆ ಮುಸ್ಲಿಂ ಮುಖಂಡ ಸಯ್ಯದ್ ಅಲಿಮ್ ಇಲಾಹಿ ಎಂಬಾತರು ದೂರು ನೀಡಿದ ಬಳಿಕ ಈಗ ನಗರದ ಸೆನ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಮುಸ್ಲಿಂ ಸಮುದಾಯವನ್ನು ಬೇರು ಸಮೇತ ಕಿತ್ತು ಹಾಕಬೇಕು, 8 ದಿವಸಗಳಲ್ಲಿ ಜಿಹಾದಿಗಳನ್ನು ಸಾಯಿಸಬೇಕು ಎಂದು ಬೆದರಿಕೆಯೊಡ್ಡಿ ಧರ್ಮ ಧರ್ಮಗಳ ನಡುವೆ ಜಗಳ ಹಚ್ಚುವ ರೀತಿಯಲ್ಲಿ ಲಂಬಾಣಿ ಭಾಷೆಯಲ್ಲಿ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಭಾರೀ ಚರ್ಚೆಗೆ ಹುಟ್ಟು ಹಾಕಿದೆ.
ಮಣಿಕಂಠ ರಾಠೋಡ್, ಕೆಲ ದಿನಗಳ ಹಿಂದಷ್ಟೇ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡಿರುವ ಆರೋಪದ ಮೇರೆಗೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಇದರ ಬೆನ್ನಲ್ಲೇ ವಿಡಿಯೋ ಮಾಡಿ, ಮುಸ್ಲಿಮರ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ತರಹ ಕೋಮು ಪ್ರಚೋದನೆಗೆ ಯತ್ನಿಸಿರುವ ಮಣಿಕಂಠ ರಾಠೋಡ್ ನನ್ನು ಕೂಡಲೇ ಬಂಧಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.