ಕಲಬುರಗಿ: ಭಾರತ-ಪಾಕಿಸ್ತಾನ ಮಧ್ಯೆ ನಡೆದ ಅಘೋಷಿತ ಯುದ್ಧ ನಿಲ್ಲಿಸುವಂತೆ ಕದನ ವಿರಾಮ ಮಾಡಿಸಿದ್ದು ತಾವೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇಪದೆ ಹೇಳುತ್ತಿರುವುದನ್ನು ನೋಡಿದರೆ ಪ್ರಧಾನಿ ಮೋದಿ ಭಾರತದ ವಿದೇಶಾಂಗ ನೀತಿಯನ್ನು ಟ್ರಂಪ್ ಬಳಿ ಅಡವಿಟ್ಟಂತೆ ಕಾಣುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಆಪ್ತ ಮಿತ್ರ ಟ್ರಂಪ್ ಈವರೆಗೆ ನಾಲ್ಕು ಬಾರಿ ಭಾರತ ಮತ್ತು ಪಾಕ್ ಮಧ್ಯೆ ಯುದ್ಧ ನಿಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ. ಮಂಗಳವಾರ ಸೌದಿ ಅರೇಬಿಯಾದಲ್ಲಿಯೂ ಟ್ರಂಪ್ ಅದನ್ನೇ ಹೇಳಿದ್ದಾರೆ. ಇಷ್ಟು ಸಾಲದು ಎಂಬಂತೆ ನಮ್ಮನ್ನು ಉಗ್ರ ರಾಷ್ಟ್ರಕ್ಕೆ ಟ್ರಂಪ್ ಹೋಲಿಕೆ ಮಾಡುತ್ತಿದ್ದಾರೆ. ಇಷ್ಟಾದರೂ, ಮೋದಿ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರತಿ ಬಾರಿಯೂ ತಮ್ಮಿಂದಲೇ ಕದನ ವಿರಾಮ ಸಾದ್ಯವಾಗಿದೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ಹಾಗಾದರೆ, ನಮ್ಮ ವಿದೇಶಾಂಗ ನೀತಿ ಟ್ರಂಪ್ ಅವರಿಗೆ ಅಡವಿಡಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಒಂದು ಕಡೆ ಟ್ರಂಪ್ ನಿಮ್ಮ ಎರಡು ದೇಶಗಳು ನನ್ನಿಂದಲೇ ನಡೆಯುತ್ತಿವೆ ಎಂಬರ್ಥದಲ್ಲಿ ಮಾತನಾಡುತ್ತಿದ್ದಾರೆ. ಆದರೂ ಮೋದಿ ಮೌನವಾಗಿದ್ದಾರೆ. ನಮ್ಮ ರಾಷ್ಟ್ರದ ಘನತೆ-ಗೌರವ ಬೇರೆ ರಾಷ್ಟ್ರದ ಬಳಿ ಇಡಬೇಡಿ. ಅವರು (ಟ್ರಂಪ್) ನಿಮಗೆ ಸ್ನೇಹಿತರೇ ಆಗಿದ್ದರೂ ಸರಿ; ನಮ್ಮನ್ನು ಅವರ ಬಳಿ ಅಡವಿಡಬೇಡಿ ಎಂದರು.
ಪ್ರಧಾನಿ ಮೋದಿ ಇನ್ನಾದರೂ ಬಹಿರಂಗವಾಗಿ ಸುದ್ದಿಗೋಷ್ಠಿ ಮಾಡುವ ಧೈರ್ಯ ಪ್ರದರ್ಶಿಸಲಿ ಎಂದು ಸವಾಲು ಹಾಕಿದ ಪ್ರಿಯಾಂಕ್; ಮೋದಿಯವರ ಮನ್ ಕೀ ಬಾತ್ ಕೇಳಿ ಕೇಳಿ ಜನರ ಕಿವಿ ಕಿತ್ತು ಹೋಗಿದೆ. ಹಾಗಾಗಿ, ಕನಿಷ್ಠ ನಿಮ್ಮದೇ ಮೀಡಿಯಾ ಸ್ನೇಹಿತರು ಹಾಗೂ ಇತರ ಮಾಧ್ಯಮದವರ ಜೊತೆ ಸುದ್ದಿಗೋಷ್ಠಿ ಮಾಡಿದರೆ ನಮ್ಮ ಪ್ರಧಾನಿಗೆ 56 ಇಂಚಿನೆದೆ ಇದೆ ಎಂದು ನಾವೆಲ್ಲರೂ ಒಪ್ಪುತ್ತೇವೆ ಎಂದು ಲೇವಡಿ ಮಾಡಿದರು.
ಯುದ್ಧ ವಿರಾಮ ಘೋಷಣೆ ಬಳಿಕ ಅದಂಪುರ ಸೇನಾ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ನಮ್ಮ ಸೈನಿಕರಿಗೆ ನೈತಿಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆದರೆ ಮೋದಿ ಹಲವು ಪ್ರಶ್ನೆಗಳಿಗೆ ಇಲ್ಲಿಯವರೆಗೂ ಉತ್ತರಿಸಿಲ್ಲ ಎಂದರು.
ಏ.22ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿ ಹೋಗಿದ್ರು?:
ಏ.22ರಂದು ಪಹಲ್ಗಾಂ ಘಟನೆ ನಡೆದಾಗ್ಯೂ ಪ್ರಧಾನಿ ಮೋದಿ ಬಿಹಾರ ಚುನಾವಣೆಯಲ್ಲಿ ಕಂಡಿದ್ದಾರೆ. ಇದಾದ ಬಳಿಕ ಅವರು ಎಲ್ಲಿಯೂ ಕಂಡುಬಂದಿಲ್ಲ. ಮಾಕ್ ಡ್ರಿಲ್ ನಡೆದ ಭಾರತದ ಗಡಿ ಭಾಗದಲ್ಲೂ ಮೋದಿ ಕಂಡು ಬರಲಿಲ್ಲ. ಟ್ರಂಪ್ ಯುದ್ಧ ವಿರಾಮ ಘೋಷಣೆ ಮಾಡಿದ ಬಳಿಕ ಮೇ 12ರಂದು ಪ್ರಧಾನಿ ಮೋದಿ ಮನ್ ಕೀ ಬಾತ್ ಆಡಿದರು. ಹಾಗಾದರೆ, ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಮೋದಿ ಎಲ್ಲಿಗೆ ಹೋಗಿದ್ದರು ಎಂಬುದನ್ನು ಬಹಿರಂಗಪಡಿಸಲಿ ಎಂದು ಸಚಿವ ಪ್ರಿಯಾಂಕ್ ಮತ್ತೊಮ್ಮೆ ಸವಾಲೆಸೆದರು.