ನವದೆಹಲಿ: ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ‘ಆಪರೇಷನ್ ಸಿಂಧೂರ್’ ಎಂಬ ಹೆಸರಿನ ಕಾರ್ಯಾಚರಣೆ ನಡೆಸಿ, ಬುಧವಾರ ಬೆಳಂಬೆಳಗ್ಗೆ ದಾಳಿ ನಡೆಸಿವೆ ಎಂದು ಭಾರತದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಅಡಿಯಲ್ಲಿ ಭಾರತೀಯ ಸೇನಾ ಕಾರ್ಯಾಚರಣೆಯ ಪರಿಣಾಮವಾಗಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಸ್ಫೋಟಗಳ ವರದಿಗಳು ಬಂದಿವೆ ಎಂದು ರಕ್ಷಣಾ ಸಚಿವಾಲಯ ಖಚಿತಪಡಿಸಿದೆ.
ಇದಾದ ಬಳಿಕ ಭಾರತೀಯ ಸೇನೆಯು ಎಕ್ಸ್ ಪೋಸ್ಟ್‌ನಲ್ಲಿ “ನ್ಯಾಯ ದೊರಕಿತು. ಜೈ ಹಿಂದ್!” ಎಂದು ಬರೆದುಕೊಂಡಿದೆ.
ಅಲ್ಲದೆ, ರಾತ್ರೋ ರಾತ್ರಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಎಕ್ಸ್‌ಖಾತೆಯಲ್ಲಿ ‘ಭಾರತ್ ಮಾತಾ ಕಿ ಜೈ’ ಎಂದು ಬರೆದಿದ್ದಾರೆ.
ಪಾಕಿಸ್ತಾನದಲ್ಲಿ 9 ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಸೇನಾ ದಾಳಿಗಳು ನಡೆದಿದೆ ಎಂದು ಪತ್ರಿಕಾ ಮಾಹಿತಿ ಬ್ಯೂರೋ ತಿಳಿಸಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ‘ಮುರಿಡ್ಕೆ ಮತ್ತು ಬಹಾವಲ್ಪುರದಲ್ಲಿನ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಮತ್ತು ಮುಜಫರಾಬಾದ್‌ನಲ್ಲಿರುವ ನಿಯಂತ್ರಣ ರೇಖೆಯಾದ್ಯಂತದ ಭಾರತೀಯ ಸೇನೆ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ.
PIBಯು ಬುಧವಾರ ಬೆಳಗಿನ ಜಾವ 1:44 ಕ್ಕೆ ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ, ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಹಂಚಿಕೊಂಡಿದೆ.
ಬೆಳಗಿನ ಜಾವ 1:51 ಕ್ಕೆ, ಭಾರತೀಯ ಸೇನೆಯು ಎಕ್ಸ್ ನಲ್ಲಿ, “ನ್ಯಾಯವನ್ನು ಸಲ್ಲಿಸಲಾಗಿದೆ. ಜೈ ಹಿಂದ್!”, ಎಂದು ಪೋಸ್ಟ್ ಮಾಡಿ, ಪ್ರತೀಕಾರ ನೀಡಲಾಗಿದೆ ಎಂದು ಹೇಳಿದೆ.