ಕಲಬುರಗಿ: ಜಿಲ್ಲೆಯ ಚಿಂಚೋಳಿ ಸಿದ್ದಸಿರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ 2026-27ನೇ ಸಾಲಿಗೆ ಕಾರ್ಯನಿರ್ವಹಿಸುತ್ತಿಲ್ಲವಾದರಿಂದ ಸದರಿ ಕಾರ್ಖಾನೆಯ ಮೀಸಲು ಪ್ರದೇಶದಲ್ಲಿ ಕಬ್ಬು ಬೆಳೆಯುವ ರೈತರ ಹಿತದೃಷ್ಟಿಯಿಂದ ಆ ಪ್ರದೇಶದಲ್ಲಿ ಬೆಳೆಯುವ ಕಬ್ಬನ್ನು ಬೇರೆ ಕಾರ್ಖಾನೆಗೆ ಸಾಗಿಸಿ ನುರಿಸಲು ಪರ್ಯಾಯ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಆದೇಶಿಸಿದ್ದಾರೆ.
ಸಿದ್ದಸಿರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಗೆ ಬರುವ ಚಿಂಚೋಳಿ ತಾಲೂಕಿನ ಗ್ರಾಮಗಳನ್ನು ಆಳಂದ ತಾಲೂಕಿನ ಭೂಸನೂರ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಗೆ, ಕಾಳಗಿ ತಾಲೂಕಿನ ಗ್ರಾಮಗಳನ್ನು ಅಫಜಲಪೂರಿನ ರೇಣುಕಾ ಸಕ್ಕರೆ ಕಾರ್ಖಾನೆಗೆ, ಚಿತ್ತಾಪುರ ಮತ್ತು ಸೇಡಂ ತಾಲೂಕಿನ ಗ್ರಾಮಗಳನ್ನು ಅಫಜಲಪೂರ ತಾಲೂಕಿನ ಚಿಣಮಗೇರಾದ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ ಹಂಚಿಕೆ ಮಾಡಿ ಆದೇಶಿಸಲಾಗಿದೆ.
ಆಯಾ ಸಕ್ಕರೆ ಕಾರ್ಖಾನೆಗೆ ಹಂಚಿಕೆ ಮಾಡಿದ ಗ್ರಾಮಗಳಲ್ಲಿ ರೈತರು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಯವರು ಸಕಾಲಿಕವಾಗಿ ಕಟಾವು ಮಾಡಿಕೊಂಡು ಹೋಗಲು ಮತ್ತು ನಿಗದಿಪಡಿಸಿದ ದರದಂತೆ ಕಾಲಮಿತಿಯಲ್ಲಿ ರೈತರಿಗೆ ಹಣ ಪಾವತಿಸುವಂತೆ ಡಿ.ಸಿ. ಆದೇಶ ಮಾಡಿದ್ದಾರೆ.
ಭಯ ಪಡಬೇಡಿ,ಸಕಾಲದಲ್ಲಿ ಕಬ್ಬು ಕಟಾವು:
ಚಿಂಚೋಳಿ, ಕಾಳಗಿ, ಸೇಡಂ ಹಾಗೂ ಚಿತ್ತಾಪುರ ತಾಲೂಕಿನ ರೈತರು ಕಬ್ಬನ್ನು ನುರಿಸುವ ಕುರಿತು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ. ಚಿಂಚೋಳಿ ಭಾಗದ ಕಬ್ಬನ್ನು ನುರಿಸಲು ಆದೇಶಿಸಲಾದ ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ನುರಿಸಲು ಟೋಲಿಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಈ ಸಕ್ಕರೆ ಕಾರ್ಖಾನೆಗಳು ಡಿಸೆಂಬರ್ ಮೊದಲ ವಾರದಲ್ಲಿ ಚಿಂಚೋಳಿ ಮತ್ತು ಕಾಳಗಿ ಭಾಗದ ರೈತರ ಕಬ್ಬನ್ನು ನುರಿಸಲು ಟೋಲಿಗಳನ್ನು ವ್ಯವಸ್ಥೆ ಮಾಡಿ ಕಬ್ಬನ್ನು ಕಟಾವು ಮಾಡಲಿದ್ದಾರೆ. ರೈತರು ಯಾವುದೇ ಅತಂಕಕ್ಕೊಳಗಾಗದೆ ಹಂಚಿಕೆ ಮಾಡಿದ ಕಾರ್ಖಾನೆಯವರಿಗೆ ಕಬ್ಬು ಕಟಾವು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಡಿ.ಸಿ ಇಕ್ರಮ್ ಶರೀಫ್ ರೈತರಲ್ಲಿ ಮನವಿ ಮಾಡಿದ್ದಾರೆ.


