ಕಲಬುರಗಿ: ನಗರದ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಅಸ್ಲಂ ಪಟೇಲ್ ಅಲಿಯಾಸ್ ಬಾಂಬೆ ಅಸ್ಲಂ (32) ಎಂಬಾತನನ್ನು ಗುಂಡಾ ಕಾಯ್ದೆಯಡಿ ಬಂಧಿಸಿ, ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲು ಆದೇಶಿಸಲಾಗಿದೆ.
ಆರೋಪಿತನ ವಿರುದ್ಧ 2012ರಿಂದ 2026ರವರೆಗೆ ಕಲಬುರಗಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ, ಜೀವ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಒಟ್ಟು 20 ಪ್ರಕರಣಗಳು ದಾಖಲಾಗಿವೆ. ಈತನನ್ನು ‘ಎ’ ರೌಡಿ ಎಂದು ಗುರುತಿಸಲಾಗಿದ್ದು, ರೌಡಿಶೀಟ್ ಚಾಲ್ತಿಯಲ್ಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಆರೋಪಿತನ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಘವೇಂದ್ರ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವಾಜೀದ್ ಪಟೇಲ್ ಸಲ್ಲಿಸಿದ ವರದಿಯ ಆಧಾರದ ಮೇಲೆ, ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರ ಪರಿಶೀಲನೆಯ ನಂತರ ಗುಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


