ಕಲಬುರಗಿ| ವಿಪತ್ತು ತರುವ ಆಪತ್ತಿನ ಸಂದರ್ಭದಲ್ಲಿ ಸಮಯ ಪ್ರಜ್ಞೆ, ಜಾಗೃತಿ ಮುಖ್ಯ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

Date:

Share post:

ಕಲಬುರಗಿ: ದುರ್ಘಟನೆಗಳು ಸಂಭವಿಸಿದಾಗ ವಿಪತ್ತು ನಿರ್ವಹಣಾ ತಂಡದ ಮೊದಲ ಜವಬ್ದಾರಿ ಅಲ್ಲಿ ಸಿಲುಕಿರುವ ಜನರ ಜೀವ ಉಳಿಸುವುದು ಹಾಗೂ ದುರ್ಘಟನೆ ವಿಸ್ತರಿಸದಂತೆ ಕ್ರಮವಹಿಸುವುದು ಆಧ್ಯತೆಯಾಗಿರುತ್ತದೆ, ವಿಪತ್ತು ತರುವ ಆಪತ್ತಿನ ಸಂದರ್ಭದಲ್ಲಿ ಸಮಯ ಪ್ರಜ್ಞೆ ಹಾಗೂ ಜಾಗೃತಿ ಮುಖ್ಯ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಹೇಳಿದರು.

ನಗರದ ನಂದೂರ ಕೈಗಾರಿಕೆ ಪ್ರದೇಶದಲ್ಲಿರುವ ಬಿಪಿಸಿಎಲ್ ಡಿಪೋದಲ್ಲಿ ಜಿಲ್ಲಾಡಳಿತ, ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಲಬುರಗಿವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಸಾಯನಿಕ ವಿಪತ್ತು ನಿರ್ವಹಣೆ ಕುರಿತು ಆಫ್ ಸೈಟ್ ಅಣುಕು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಇದೊಂದು ಉತ್ತಮ ಪ್ರಾಕ್ಟೀಸ್ ಆಗಿದ್ದು, ಇಂತಹ ಅಣುಕು ಪ್ರದರ್ಶನಗಳನ್ನು ಕಾಲ-ಕಾಲಕ್ಕೆ ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಹಾಗೂ ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

 

ಅವಘಡ ಸಂಭವಿಸಿದ ಸಮಯದಲ್ಲಿ ಎನ್ಡಿಆರ್ ಎಫ್, ಎಸ್ ಡಿ ಆರ್ ಎಫ್, ಕಂದಾಯ, ಆರೋಗ್ಯ, ವಿದ್ಯುತ್ ಇಲಾಖೆಗಳು ಸೇರಿದಂತೆ ಇತರೆ ಸಂಬಂಧಿತ ಇಲಾಖೆಗಳು ಯಾವ ರೀತಿ ಹೋರಾಡುತ್ತವೆ ಹಾಗೂ ಯಾವ ಕ್ರಮಗಳನ್ನು ಹಂತ-ಹಂತವಾಗಿ ಕೈಗೊಳ್ಳಲಾಗುತ್ತದೆ ಎಂಬುದರ ಕುರಿತು ಇಲಾಖೆಗಳ ನಡುವೆ ಸಮನ್ವಯ ಹಾಗೂ ಸಾರ್ವಜನಿಕರು ಅನುಸರಿಸಬೇಕಾದ ಅಂಶಗಳನ್ನು ಈ ಅಣುಕು ಪ್ರದರ್ಶನ ಮೂಲಕ ಪ್ರಾಕ್ಟಿಕಲ್ ಆಗಿ ತೋರಿಸಲಾಗುತ್ತದೆ.

 

ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಪಾತ್ರ ಪ್ರಮುಖವಾಗಿರುತ್ತದೆ, ಆರೋಗ್ಯ ಇಲಾಖೆ ತಕ್ಷಣದಲ್ಲಿ ಕೈಗೊಳ್ಳುವ ಉತ್ತಮ ಕ್ರಮಗಳಿಂದ ಜೀವಹಾನಿಯನ್ನು ಕಡಿಮೆ ಮಾಡಬಹುದಾಗಿದೆ.

 

ಕಂದಾಯ ಇಲಾಖೆ ಘಟನೆಯಿಂದ ಹಾನಿಗೊಳಗಾದವರಿಗೆ ಪರಿಹಾರದಂತಹ ಯೋಜನೆಗಳನ್ನು ಜಾರಿಗೊಳಿಸುವ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು, ಪೊಲೀಸ್ ಇಲಾಖೆ ಪ್ರಮುಖವಾಗಿ ಘಟನೆ ಸಂಭವಿಸಲು ಕಾರಣ ಹಾಗೂ ಆ ಸಂದರ್ಭದಲ್ಲಿ ಸಾರ್ವಜನಿಕರ ಜೀವ ಉಳಿಸಲು ಹಾಗೂ ಕಾನೂನು ಪಾಲಿಸಲು ಬೆಂಬಲವಾಗಿ ನಿಲ್ಲುತ್ತವೆ.

 

ಯಾವುದೇ ತರಹದ ಅಪಘಾತಗಳದಾಗ ವಿದ್ಯುತ್ ಇಲಾಖೆ ಅತ್ಯಂತ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಮುಂಜಾಗೃತವಾಗಿ ಜವಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಅವಘಡ ಗಳನ್ನು ತಪ್ಪಿಸಬಹುದು ಎಂದರು.

 

ಅಣುಕು ಪ್ರದರ್ಶನ ಆರಂಭಕ್ಕೆ ಮುಂಚಿತವಾಗಿ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅವಘಡಗಳ ಸಮಯದಲ್ಲಿ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಯಾ ಇಲಾಖೆಗಳ ಜವಬ್ದಾರಿ ಕುರಿತು ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

 

ಕಾರ್ಯಾಚರಣೆಯ ಮುಖ್ಯಾಂಶಗಳು:

 

ಬಿಪಿಸಿಎಲ್ ಕಾನ್ಫರೆನ್ಸ್ ರೂಂನಲ್ಲಿ ನಡೆದ ಬ್ರೀಫಿಂಗ್ನೊಂದಿಗೆ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತದ ವಿವಿಧ 18ಕ್ಕೂ ಹೆಚ್ಚು ಇಲಾಖೆಗಳು ಸಕ್ರಿಯವಾಗಿ ಪಾಲ್ಗೊಂಡಿದ್ದವು. ರಾಸಾಯನಿಕ ಸೋರಿಕೆ ಅಥವಾ ಬೆಂಕಿ ಅವಘಡದಂತಹ ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತವು ಎಷ್ಟು ಕ್ಷಿಪ್ರವಾಗಿ ಸ್ಪಂದಿಸುತ್ತದೆ ಎಂಬುದನ್ನು ಪರೀಕ್ಷಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿತ್ತು.

ಘಟನಾ ಹಂತಗಳು:

ಬಿಪಿಸಿಎಲ್ ಘಟಕದಲ್ಲಿಯ ಒಂದು ಟ್ಯಾಂಕ್ಗೆ ಬೆಂಕಿ ಹೊತ್ತಿಕೊಂಡಿದೆ. ಅದು ಘಟಕದ ತುಂಬಾ ವ್ಯಾಪಿಸಿದೆ ಎಂದು ಕಲ್ಪಿಸಿಕೊಂಡು, ಕೂಡಲೇ ಸೈಟ್ ಇನ್ಸಿಡೆಂಟ್ ಕಮಾಂಡರ್ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದರು. ಕೇವಲ 15 ನಿಮಿಷಗಳಲ್ಲಿ ಅಗ್ನಿಶಾಮಕ ದಳ, ಅಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದವು.

 

ಸ್ಥಳದಲ್ಲಿದ್ದ NDRF ಮತ್ತು SDRF ತಂಡಗಳು ಅಲ್ಲಿಯ ಪಂಪ್ ಹೌಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಟ್ಯಾಂಕ್ಗೆ ರಾಸಾಯನಿಕ ನೀರು ಸಿಂಪಡಿಸಿದರು. ಕಾರ್ಮಿಕರು ಮೈ, ಮುಖಕ್ಕೆ ಮಸಿ ಹಾಗೂ ರಕ್ತ ಹೋಲುವ ಬಣ್ಣ ಬಳಿದುಕೊಂಡಿದ್ದರು. ಅವರನ್ನು ಬ್ಯಾಟರಿ ಚಾಲಿತ ಬಗ್ಗಿ ವಾಹನ ಹಾಗೂ ಸ್ಟ್ರೆಚರ್ ಮೇಲೆ ತೆಗೆದುಕೊಂಡು ಹೋಗಿ ರಕ್ಷಿಸುವಂತೆ ತೋರಿಸಲಾಯಿತು. ಬಳಿಕ ಆಂಬುಲೆನ್ಸ್ನಲ್ಲಿ ಹತ್ತಿಸಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸಾ ವಿಧಾನಗಳನ್ನು ತೋರಿಸಿಕೊಟ್ಟರು.

 

ಪಶುಸಂಗೋಪನಾ ಇಲಾಖೆಯು ಕೈಗಾರಿಕಾ ಪ್ರದೇಶದಲ್ಲಿದ್ದ ಪ್ರಾಣಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಅವುಗಳ ಆರೋಗ್ಯ ತಪಾಸಣೆ ನಡೆಸಿತು. ಪ್ರಾಣಿ ಸಂರಕ್ಷಣೆಗೆ ಆದ್ಯತೆ ನೀಡಿದ್ದು ವಿಶೇಷವಾಗಿತ್ತು.

 

ಇಲಾಖೆಗಳ ಪಾತ್ರ:

ಕಂದಾಯ ಇಲಾಖೆಯು ನಿಯಂತ್ರಣ ಕೊಠಡಿ ಮತ್ತು ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿತ್ತು. ಪೊಲೀಸ್ ಇಲಾಖೆಯು ಎನ್.ಎಚ್-150 ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ರಕ್ಷಣಾ ಕಾರ್ಯಕ್ಕೆ ಸಹಕರಿಸಿತು. ಜೆಸ್ಕಾಂ ವತಿಯಿಂದ ಕೈಗಾರಿಕಾ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನಿಲ ಸೋರಿಕೆಯ ಮಟ್ಟವನ್ನು ತಪಾಸಣೆ ನಡೆಸಿತು.

 

ರಾಜ್ಯ ವಿಪತ್ತು ನಿರ್ವಹಣಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ನಂದೂರ ಬಳಿಯ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಬೀಡುಬಿಟ್ಟಿದ್ದರು. ಘಟಕದಲ್ಲಿ ಎಚ್ಚರಿಕೆ ಘಂಟೆ ಮೊಳಗಿದ ತಕ್ಷಣ ಅವರಿಗೆ ಕರೆ ಮಾಡಿ ತಿಳಿಸಲಾಯಿತು. ಬಳಿಕ ವಾಹನಗಳ ಸಹಿತ ಅವರು ಘಟಕದೆಡೆಗೆ ಬಂದರು.

 

ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ವಿಧಾನಗಳನ್ನು ತೋರಿಸಿಕೊಟ್ಟರು.ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯವರು ಅವಘಡದಲ್ಲಿ ಸಿಲುಕಿದ ಕಾರ್ಮಿಕರು ಹಾಗೂ ಜನರನ್ನು ರಕ್ಷಿಸುವ ವಿಧಾನಗಳನ್ನು ಪ್ರದರ್ಶಿಸಿದರು.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಈ ಸಂಪೂರ್ಣ ಕಾರ್ಯಕ್ರಮವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಯಶಸ್ವಿಯಾಗಿ ನಡೆಯಿತು.

Share post:

spot_imgspot_img

Popular

More like this
Related

ಕಲಬುರಗಿ| ಕಲಾ ವಿಭಾಗದಲ್ಲಿ ಸೃಷ್ಟಿ ಮಲ್ಲಿನಾಥ ರಾಜ್ಯಕ್ಕೆ ಪ್ರಥಮ

ಕಲಬುರಗಿ: ಪ್ರಸಕ್ತ ದ್ವಿತೀಯ ಪಿ.ಯು.ಸಿ-1 ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಕಲಬುರಗಿಯ...

ಕಲಬುರಗಿ| ವಿಕಲಚೇತನ ಫಲಾನುಭವಿಗಳಿಗೆ ವಿವಿಧ ಬಗೆಯ ಸುಮಾರು 62 ಲಕ್ಷ ರೂ. ಮೊತ್ತದ ಸಾಧನ ಸಲಕರಣೆಗಳ ವಿತರಣೆ

ಕಲಬುರಗಿ: ಹೌಸಿಂಗ್ ಆಂಡ್ ಅರ್ಬನ್ ಡೆವಲಪ್‍ಮೆಂಟ್ ಕಾರ್ಪೋರೇಶನ್ ಲಿಮಿಟೆಡ್ (HUDCO) ಸಂಸ್ಥೆಯ...

ಕಲಬುರಗಿ| ಲಾರಿ – ಬೈಕ್ ಢಿಕ್ಕಿ; ಬೈಕ್ ಸವಾರ ಮೃತ್ಯು; ಇನ್ನೋರ್ವ ಗಂಭೀರ ಗಾಯ

ಕಲಬುರಗಿ: ಲಾರಿ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್...

ಕಲಬುರಗಿ| ರಾಮನವಮಿ ಆಚರಣೆ; ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಆದೇಶ

ಕಲಬುರಗಿ: ರಾಮ ನವಮಿ ಆಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಗಳಾದ...