ಕಲಬುರಗಿ: ಕಲಬುರಗಿ ನಗರವನ್ನು ಕೇವಲ ಪ್ರಾದೇಶಿಕ ಕೇಂದ್ರವಾಗಿ ನೋಡದೆ, ಈ ಭಾಗದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಕಲಬುರಗಿ ನಗರವನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸೇಡಂ ಸಂಶೋಧನಾ ಸಾಹಿತಿ ಮುಡುಬಿ ಗುಂಡೇರಾವ ಒತ್ತಾಯಿಸಿದರು.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಿ. ಸಾರೋಟು ಮತ್ತು ವಿವಿಧ ಜಾನಪದ ಕಲೆಗಳೊಂದಿಗೆ ಮೆರವಣಿಗೆಯು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮಾರ್ಗವಾಗಿ ಸಾಗಿ ಕನ್ನಡ ಭವನ ತಲುಪಿ. ಬಾಪೂಗೌಡ ದರ್ಶನಾಪುರ ರಂಗಮಂದಿರ, ಕನ್ನಡ ಭವನ ಆವರಣದಲ್ಲಿ 22ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು
ಹಂಪಿ ಉತ್ಸವದ ಮಾದರಿಯಲ್ಲಿಯೇ ಈ ಭಾಗದ ಐತಿಹಾಸಿಕ ತಾಣಗಳಾದ ರಾಷ್ಟ್ರಕೂಟ ಉತ್ಸವ, ನಾಗಾವಿ ಉತ್ಸವ ಮತ್ತು ಸನ್ನತಿ ಉತ್ಸವಗಳನ್ನು ಸರ್ಕಾರವೇ ಪ್ರತಿವರ್ಷ ಅಧಿಕೃತವಾಗಿ ಆಚರಿಸಬೇಕು. ಕಾಳಗಿ, ಬೇಲೂರು ಮತ್ತು ಹಳೆಬೀಡಿಗಿಂತಲೂ ಕಲಾತ್ಮಕವಾಗಿ ಮಿಗಿಲಾದ ಸೂರ್ಯನಾರಾಯಣ ದೇವಾಲಯದಂತಹ ಸ್ಮಾರಕಗಳು ಇಂದು ಸರಿಯಾದ ನಿರ್ವಹಣೆಯಿಲ್ಲದೆ ಕುರಿ-ದನಗಳ ಕೊಟ್ಟಿಗೆಯಾಗುತ್ತಿವೆ ಎಂದು ಅವರು ತೀವ್ರ ವಿಷಾದ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳ ಅವ್ಯವಸ್ಥೆಯ ಬಗ್ಗೆ ಆಕ್ರೋಶ ಹೊರಹಾಕಿದ ಅವರು, ಕೋಟಿಗಟ್ಟಲೆ ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ಮಿಸಿದರೂ ಅಲ್ಲಿ ಸ್ವಚ್ಛತೆ ಮಾಡಲು ಸಿಬ್ಬಂದಿಗಳಿಲ್ಲ. ಸ್ವತಃ ಶಿಕ್ಷಕರೇ ಕಸ ಹೊಡೆಯುವ ಪರಿಸ್ಥಿತಿ ಇದೆ. ಇದನ್ನು ಪ್ರಶ್ನಿಸಿದರೆ ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸುವ ಬೆದರಿಕೆ ಹಾಕಲಾಗುತ್ತಿದೆ. ಪ್ರತಿವರ್ಷ ಕನಿಷ್ಠ 10 ರಿಂದ 20 ಸಾವಿರ ಶಿಕ್ಷಕರ ನೇಮಕಾತಿಯಾಗದಿದ್ದರೆ ಕನ್ನಡ ಶಾಲೆಗಳನ್ನು ಉಳಿಸುವುದು ಕಷ್ಟ ಎಂದು ಹೇಳಿದರು.
ಇಂದಿನ ಯುವಕರು ಓದಿನ ಕಡೆ ಆಸಕ್ತಿ ಕಳೆದುಕೊಳ್ಳುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅಧ್ಯಕ್ಷರು ಕೇವಲ ಕವಿಗೋಷ್ಠಿಗಳಿಗಾಗಿ ಕವನ ಬರೆಯುವುದಲ್ಲ, ಪಂಪ, ರನ್ನ, ಪೊನ್ನರಂತಹ ಮಹಾನ್ ಕವಿಗಳ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಪ್ರಮುಖ ಬೇಡಿಕೆಗಳು:
1. ಸಾಹಿತ್ಯ ಅಕಾಡೆಮಿ ಮತ್ತು ಪುಸ್ತಕ ಪ್ರಾಧಿಕಾರದ ಕೇಂದ್ರ ಕಚೇರಿಗಳು ಬೆಂಗಳೂರಿನಲ್ಲಿದ್ದು, ಇಲ್ಲಿನವರಿಗೆ 600 ಕಿ.ಮೀ ಪ್ರಯಾಣ ಕಷ್ಟಕರವಾಗಿದೆ. ಆದ್ದರಿಂದ ಕಲಬುರಗಿಯಲ್ಲೇ ಇವುಗಳ ಕೇಂದ್ರ ಅಥವಾ ಕಚೇರಿಗಳನ್ನು ಸ್ಥಾಪಿಸಬೇಕು.
2. ತೊಗರಿ, ಜೋಳ ಬೆಳೆಯುವ ಈ ಭಾಗದ ರೈತರಿಗೆ ಸೂಕ್ತ ಪ್ರೋತ್ಸಾಹ ಮತ್ತು ಬೆಲೆ ಸಿಗಬೇಕು.
3. ರಾಷ್ಟ್ರಕೂಟರ ನಿಗಮ ಅಥವಾ ‘ಕವಿರಾಜಮಾರ್ಗ ಪ್ರತಿಷ್ಠಾನ’ವನ್ನು ಸ್ಥಾಪಿಸುವ ಮೂಲಕ ಇತಿಹಾಸಕ್ಕೆ ಗೌರವ ನೀಡಬೇಕು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ ಸೋಮಶೇಖರ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಟಿಸಿ ಮಾತನಾಡಿದ ಅವರು ಕನ್ನಡಿಗರು ಓದದಿದ್ದರೂ ಕಾವ್ಯ ಪ್ರಯೋಗಡಲ್ಲಿ ಪರಿಣಿತರು ಎಂದು ಕವಿರಾಜಮಾರ್ಗಕಾರ ಅಂದೇ ಸಾರಿದ್ದಾರೆ. ಅಂತಹ ಉನ್ನತ ಪರಂಪರೆಯ ನಾವೆಲ್ಲರೂ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ ಪಂಪರಿಂದ ಪ್ರಾರಂಭವಾದ ಸಾಹಿತ್ಯ ಯಾತ್ರೆ ಇಲ್ಲಿಯವರೇಗೂ ನಡೆದುಕೊಂಡು ಬಂದಿದೆ ಮುಂದೆ ಕನ್ನಡ ಉಳಿಸಿ ಬೆಳಸಿ ಕೊಂಡು ಹೋಗುವುದು ನಮ್ಮ ಜೀವಬ್ದರಿಯಗಿದೆ ಎಂದು ಹೇಳಿದರು.
ಅಧಿಕಾರ ಎಂಬುದು ಕೇವಲ ಆಡಳಿತಕ್ಕಲ್ಲ, ಅದು ಜನರ ಸೇವೆಗೆ ಸಿಕ್ಕ ಅವಕಾಶ. ತನು, ಮನ, ಧನ ಅಹಂಕಾರವಿಲ್ಲದೆ ಜನಸಾಮಾನ್ಯರಂತೆ ಕೆಲಸ ಮಾಡುವವರೇ ನಿಜವಾದ ಶರಣರು ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಮಾತನಾಡಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ನಡುವೆಯೂ ನಮ್ಮ ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಹೇಳಿದರು.
ಕಲಬುರಗಿ ಭಾಗವು ವಚನ ಸಾಹಿತ್ಯ, ದಾಸ ಸಾಹಿತ್ಯ ಮತ್ತು ತತ್ವಪದಕಾರರ ಬೀಡಾಗಿದ್ದು, ಇಲ್ಲಿನ ಸಾಹಿತ್ಯಿಕ ಮೌಲ್ಯಗಳು ನಾಡಿನಾದ್ಯಂತ ಪಸರಿಸಿವೆ.
ಇಂದಿನ ಯುವ ಪೀಳಿಗೆ ಉದ್ಯೋಗದ ಕಾರಣಕ್ಕಾಗಿ ಬೇರೆ ಭಾಷೆಗಳನ್ನು ಕಲಿಯಲಿ, ಆದರೆ ಮಾತೃಭಾಷೆಯನ್ನು ಮರೆಯಬಾರದು. ತಾಯಿ ಮತ್ತು ಮಾತೃಭಾಷೆಗೆ ಜಗತ್ತಿನಲ್ಲಿ ಯಾವುದಕ್ಕೂ ಸಾಟಿಯಿಲ್ಲ ಎಂದು ತಿಳಿಸಿದರು.
ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಪ್ರಕಾಶ್ ತೆಗಳ್ತಿಪ್ಪಿ ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತಿಗಳಿಗೆ ಮಾತ್ರ ಸೀಮಿತವಾಗದೆ ಸಮಾಜದ ಎಲ್ಲಾ ವರ್ಗದ ಜನರನ್ನು ಕಲಾವಿದರನ್ನು ಮತ್ತು ಸಂಸ್ಕೃತಿಯನ್ನು ಒಗ್ಗೂಡಿಸುವ ಶಕ್ತಿಯಾಗಿ ಬೆಳೆದಿದೆ ಎಂದು ಅವರು ಅಭಿಪ್ರಾಯಪಟ್ಟರು.
ತಮ್ಮ ಅವಧಿಯಲ್ಲಿ ಇದು 5ನೇ ಜಿಲ್ಲಾ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು. ಇದು ರಾಜ್ಯದ ಇತಿಹಾಸದಲ್ಲಿಯೇ ಒಂದು ದಾಖಲೆಯಾಗಿದೆ. ಇದರ ಜೊತೆಗೆ 12 ವಿಶೇಷ ಸಮ್ಮೇಳನಗಳನ್ನು ನಡೆಸಿ ಸಾಹಿತ್ಯಿಕ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಜಾತಿ, ಧರ್ಮಗಳ ಜನರನ್ನು ಒಗ್ಗೂಡಿಸುವ ವೇದಿಕೆಯಾಗಿದೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಆಶಯದಂತೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.


