ಕಲಬುರಗಿ: ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷಾ ಮತ್ತು ವಿಚಾರಣಾ ಬಂದಿಗಳಿಗಾಗಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಅವರು ಶುಕ್ರವಾರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿದ ಅವರು, ಕಾನೂನು ಸೇವಾ ಪ್ರಾಧಿಕಾರವು 1987ರಲ್ಲಿ ಪ್ರಾರಂಭವಾಗಿದ್ದು, ಅಂದಿನಿಂದ ಜಿಲ್ಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಪ್ರಾರಂಭಿಸಲಾಯಿತು. ಪ್ರತಿಯೊಬ್ಬರಿಗೂ ನ್ಯಾಯವನ್ನು ಒದಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಮೂಲ ಉದ್ದೇಶವಾಗಿದೆ. ಇದಲ್ಲದೇ ಪ್ರಾಧಿಕಾರವು ಅರ್ಥಿಕವಾಗಿ ದುರ್ಬಲ ಹೊಂದಿದ ಬಂದಿಗಳಿಗೆ ಉಚಿತವಾಗಿ ವಕೀಲರನ್ನು ನೇಮಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ನಿಯಮಿತವಾಗಿ ಶ್ರಮಿಸುತ್ತಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಸಂಸ್ಥೆಯ ಮುಖ್ಯ ಅಧೀಕ್ಷಕರಾದ ಡಾ|| ಅನಿತಾ ಆರ್. ಅವರು ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಕಾರಾಗೃಹ ಇಲಾಖೆಗೆ ಸಕರಾತ್ಮಕ ಸ್ಪಂದನೆ ಮತ್ತು ಸಲಹೆ ಸೂಚನೆಗಳನ್ನು ನಿಯಮಿತವಾಗಿ ನೀಡುತ್ತಿರುವುದರಿಂದ ಬಂದಿಗಳಿಗೆ ನ್ಯಾಯವನ್ನು ಒದಗಿಸಲು ಸಾಧ್ಯವಾಗಿದೆ. ಕಲಬುರಗಿ ಕೇಂದ್ರ ಕಾರಾಗೃಹದ ಬಂದಿಗಳು ಇದರ ಲಾಭವನ್ನು ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕ ಚನ್ನಪ್ಪ, ಜೈಲರ್‍ಗಳಾದ ಸುನಂದಾ ವಿ.ಆರ್, ಪುಂಡಲಿಕ ಟಿ.ಕೆ, ಶಾಮ ಬಿದರಿ ಹಾಗೂ ಕಾರಾಗೃಹ ಸಿಬ್ಬಂದಿಗಳು ಹಾಗೂ ಬಂದಿಗಳು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿಗಳಾದ ಭೀಮಾಶಂಕರ್ ಡಾಂಗೆ ಸ್ವಾಗತಿಸಿದರು. ಸಂಸ್ಥೆಯ ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸಹಾಯಕ ಅಧೀಕ್ಷಕರಾದ ಬಿ.ಸುರೇಶ ವಂದಿಸಿದರು. ಶಿಕ್ಷಾ ಬಂದಿಯಾದ ರಾಮಣ್ಣ ತಂದೆ ನರಸಪ್ಪ ಪ್ರಾರ್ಥನಾ ಗೀತೆ ಹಾಡಿದರು.


