ಕಲಬುರಗಿ: ಬಸವ ಅನುಯಾಯಿಗಳನ್ನು ಅವಮಾನಿಸಿರುವುದಲ್ಲದೆ ಗಲಭೆಗೆ ಪ್ರಚೋದನೆ ನೀಡಿರುವ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿ ಮಠದ ಅದೃಷ್ಟ ಕಾಡಸಿದ್ದೇಶ್ವರ ಸ್ವಾಮಿ ಅವರನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಲಿಂಗಾಯತ ಮಠಾಧಿಪತಿಗಳ ಪ್ರತಿನಿಧಿಗಳಾದ ಧುತ್ತರಗಾoವ್ ದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಸವ ಸಂಸ್ಕೃತಿ ಅಭಿಯಾನ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯೋಜಿಸಿ, ಬೆಂಗಳೂರಿನಲ್ಲಿ ಸಮಾರೋಪ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ್ದು, ಈ ಕಾರ್ಯಕ್ರಮದ ಯಶಸ್ಸನ್ನು ಸಹಿಸದ ಸ್ವಾಮೀಜಿಯೊಬ್ಬ ಲಿಂಗಾಯತ ಸ್ವಾಮೀಜಿಗಳನ್ನು ಹಾಗೂ ಬಸವಪರ ಅನುಯಾಯಿಗಳನ್ನು ಕೀಳುಮಟ್ಟದಲ್ಲಿ ನಿಂದಿಸಿರುವುದು ಖಂಡನಾರ್ಹ. ಕೂಡಲೇ ಕನ್ಹೇರಿ ಸ್ವಾಮೀಜಿ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.
ವಿರಕ್ತ ಮಠದಲ್ಲೇ ಮಾತನಾಡುವಾಗ ಲಿಂಗಾಯತ ಸ್ವಾಮೀಜಿಗಳನ್ನು ಮುಖ್ಯಮಂತ್ರಿಗಳ ಕೃಪಾಪೋಷಿತ ಸ್ವಾಮಿಗಳು, ನಾಟಕ ಕಂಪನಿ ಮತ್ತಿತ್ತರ ಹೇಳಿಕೆಗಳನ್ನು ನೀಡುವುದಲ್ಲದೆ ಬಸವನುಯಾಯಿಗಳು ಮದ್ಯಪಾನ, ಮಾಂಸಾಹಾರಕ್ಕೆ ಪ್ರೇರಣೆ ನೀಡುತ್ತಾರೆ ಎಂದು ಸುಳ್ಳು ಆಪಾದನೆಗಳನ್ನು ಮಾಡಿದ್ದಾರೆ. ಇಂತಹ ಕಪಟ ಸ್ವಾಮಿಗಳನ್ನು ಕರ್ನಾಟಕದ ಗಡಿಯನ್ನು ಪ್ರವೇಶಿಸದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸ್ವಾಮೀಜಿ, ಈ ಹಿಂದೆ ಲಿಂಗಾಯತ ಸ್ವಾಮಿಗಳನ್ನು ತಾಲಿಬಾನಿಗಳು ಎಂದು ಕರೆದಿದ್ದರು. ಇದೀಗ ಬಸವ ಸಂಸ್ಕೃತಿ ಅಭಿಯಾನ ಸಹಿಸದೇ ಮತ್ತೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇವರ ವಿರುದ್ಧ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇವೆ ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಆರ್.ಜಿ ಶೆಟಕರ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಅಪಮಾನಿಸಿರುವ ಆರೋಪಿಗಳನ್ನು ಇವರೆಗೆ ಬಂಧಿಸದಿರುವುದು ಖಂಡನೀಯ. ಕೂಡಲೇ ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ವಡ್ಡನಕೇರಿ, ರವೀಂದ್ರ ಶಾಬಾದಿ, ರಮೇಶ್ ಲೋಹಾರ್, ರಾಜಶೇಖರ್ ಯಂಕಂಚಿ, ಶಾಂತಪ್ಪ ಪಾಟೀಲ್, ಬಸವರಾಜ, ಅಯ್ಯಣ್ಣ ನಂದಿ ಸೇರಿದಂತೆ ಮತ್ತಿತರರು ಇದ್ದರು.


