ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಅಡಿಯಲ್ಲಿ ಕಳೆದ 2024ರ ಡಿಸೆಂಬರ್‌ನಲ್ಲಿ ಬಿ.ಇಡಿ ಕೋರ್ಸಿನ 4ನೇ ಸೆಮಿಸ್ಟರ್ ಪರೀಕ್ಷೆಗಳು ನಡೆದಿದ್ದವು. ಆದರೆ ವಿವಿ ಈವರೆಗೂ ಫಲಿತಾಂಶ ಪ್ರಕಟಿಸಿಲ್ಲ. ಒಂದು ವೇಳೆ ಶೀಘ್ರದಲ್ಲಿ ಫಲಿತಾಂಶ ಬಿಡುಗಡೆ ಮಾಡದಿದ್ದರೆ ವಿವಿ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಗುಲ್ಬರ್ಗ ವಿವಿ ಆವರಣದಲ್ಲಿರುವ ಪರೀಕ್ಷಾ ಭವನದ ಎದುರು ಪ್ರತಿಭಟಿಸಿದ ವಿದ್ಯಾರ್ಥಿಗಳು, ಬಳಿಕ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಜಿ.ಕಣ್ಣೂರ ಅವರಿಗೆ ಸಲ್ಲಿಸಿದರು.
ಪರೀಕ್ಷೆ ಮುಗಿದು ಒಂದು ವರ್ಷ ಕಳೆದುಹೋಗುತ್ತಿದೆ, ಫಲಿತಾಂಶ ಪ್ರಕಟ ಮಾಡದೆ ಇರುವುದರಿಂದ ನಮ್ಮ ಮುಂದಿನ ವಿದ್ಯಾಭ್ಯಾಸ, ಕೆಪಿಎಸ್ಸಿ, ಯುಪಿಎಸ್ಸಿ ಹಾಗೂ ಏಕಲವ್ಯ ಮಾದರಿಯ ವಸತಿ ಶಾಲೆಗಳ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಏಕಲವ್ಯ ಮಾದರಿ ಶಾಲೆಯ ಪರೀಕ್ಷೆಗೆ ಇದೇ ಅಕ್ಟೋಬರ್ 23 ಕೊನೆಯ ದಿನವಾಗಿದೆ. ಅಲ್ಲಿಯ ಒಳಗಡೆ ಫಲಿತಾಂಶ ಕೊಡದಿದ್ದರೆ ವಿವಿಗೆ ಘೇರಾವ್ ಹಾಕುವ ಮೂಲಕ ಕಲಬುರಗಿ ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಂತೋಷ ಕುಮಾರ ಎಸ್. ಪಿ, ಗುಲ್ಬರ್ಗ ವಿ.ವಿಯ ಅಧಿಕಾರಿಗಳ ತಪ್ಪಿನಿಂದ ಬಿ.ಇಡಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಣೆ ವಿಳಂಬವಾಗಿದೆ. ಅಧಿಕಾರಿಗಳ ಭ್ರಷ್ಟಾಚಾರದ ಫಲವನ್ನು ವಿದ್ಯಾರ್ಥಿಗಳು ಅನುಭವಿಸುವಂತಾಗಿದೆ. ಹೈಕೋರ್ಟ್ ಕೂಡ ಎರಡು ವಾರಗಳಲ್ಲಿ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿದೆ. ಆದರೆ ಕೋರ್ಟಿನ ತೀರ್ಪಿಗೂ ಇವರು ತಲೆಕೆಡಿಸಿಕೊಳ್ಳುತ್ತಿಲ್ಲ. ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿದ್ಯಾರ್ಥಿ ಬಾಬುರಾವ್ ಮಾತನಾಡಿ, ಪರೀಕ್ಷೆಯ ಫಲಿತಾಂಶ ಬಿಡುಗಡೆಗೆ ವಿವಿಗೆ ಹಲವು ಬಾರಿ ಭೇಟಿ ಕೊಟ್ಟಿದ್ದೆವು, ಪ್ರತಿಭಟನೆ ಮಾಡಿದ್ದೆವು, ಅಷ್ಟಾದರೂ ವಿದ್ಯಾರ್ಥಿಗಳ ಸಮಸ್ಯೆಗೆ ಯಾರೂ ಕೂಡ ಸ್ಪಂದಿಸುತ್ತಿಲ್ಲ. ನಮ್ಮ ಕಷ್ಟ ಕೇಳುವವರು ಯಾರೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇಲ್ಲಿಯವರೆಗಿನ ಕುಲಪತಿಗಳು ವಿದ್ಯಾರ್ಥಿಗಳ ವಿರುದ್ಧ ಚೆಲ್ಲಾಟವಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಚಯ್ಯ ಸ್ವಾಮಿ, ತೇಜಸ್, ಗಣೇಶ್, ಸಚೀನ್, ಸಿದ್ದು, ಸಿದ್ರಾಮ್, ಗುರುಕೀರಣ್, ಸಂಗಮೇಶ್, ಕರ್ಣ ಯಲಬತ್ತಿ, ಜೀವೇಶ ಗುಂಟಾಪೂರ, ಶಿವಪುತ್ರಪ್ಪ, ಪ್ರಕಾಶ್, ಶಿವಕುಮಾರ್ ಪೂಜಾರಿ, ಬಸವರಾಜ ವಚ್ಚೆ ಸೇರಿದಂತೆ ಮತ್ತಿತರು ಇದ್ದರು.


