ಕಲಬುರಗಿ: ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿನ ಭಾರಿ ಮಳೆ ಮತ್ತು ಭೀಮಾ ಪ್ರವಾಹದಿಂದ ಜಿಲ್ಲೆಯಾದ್ಯಂತ ಸಾಕಷ್ಟು ಮೂಲಸೌಕರ್ಯ ಹಾನಿಯಾಗಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿರುವುದರಿಂದ ಇಲಾಖಾವಾರು ಕೂಡಲೆ ಜಿಲ್ಲಾಡಳಿತಕ್ಕೆ ಸಮಗ್ರ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚನೆ ನೀಡಿದರು.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲೆಯಲ್ಲಿ ಭೀಮಾ ಪ್ರವಾಹದಿಂದ ಹಾಗೂ ಭಾರಿ ಮಳೆಯಿಂದ ಹಾನಿಯಾದ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಶಾಲೆ-ಅಂಗನವಾಡಿ, ಮನೆ, ಬೆಳೆ ಹಾನಿ ಇತ್ಯಾದಿ ಕುರಿತು ಜಂಟಿ ಸಮೀಕ್ಷೆ ವರದಿಗಳ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬುಧವಾರವೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ಹಾನಿ ಕುರಿತು ಜಂಟಿ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಬೇಕು. ಮನೆ ಹಾನಿಯಾಗಿರುವ ಕುರಿತು ರಾಜೀವಗಾಂಧಿ ತಂತ್ರಾಂಶದಲ್ಲಿ ದಾಖಲಿಸಬೇಕು. ರಸ್ತೆ, ಸೇತುವೆ, ಕೆರೆ, ವಿದ್ಯುತ್ ಪರಿವರ್ತಕಗಳು, ಕಂಬಗಳು, ಪೈಪ್ ಲೈನ್ ಹಾನಿ ಕುರಿತು ಆಯಾ ಇಲಾಖೆಯ ಅಧಿಕಾರಿಗಳು ಜಿಯೋ ಟ್ಯಾಗ್ ನೊಂದಿಗಿನ ಭಾವಚಿತ್ರದೊಂದಿಗೆ ವರದಿ ಸಲ್ಲಿಸಬೇಕು ಎಂದರು.
ಇದೀಗ ಪ್ರವಾಹ ಇಲಿಮುಖವಾಗಿದ್ದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಆರೋಗ್ಯ ಇಲಾಖೆಯಿಂದ ಗ್ರಾಮಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಬೇಕು. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕಲುಷಿತನೀರು ಪೂರೈಕೆಯಾಗದಂತೆ ಎಚ್ಚರ ವಹಿಸಿ ಶುದ್ದ ಕುಡಿಯುವ ನೀರು ಪೂರೈಸಬೇಕು. ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಶಿಥಿಲಾವಸ್ಥೆಯಲ್ಲಿದಲ್ಲಿ ಕೂಡಲೆ ಬದಲಾಯಿಸಬೇಕು. ಮಳೆಯಿಂದ ಸೋರಿಕೆಯಾಗುವ ಶಾಲಾ, ಅಂಗನವಾಡಿ ಕಟ್ಟಡ ಗುರುತಿಸಿ ದುರಸ್ತಿ ಕೈಗೊಳ್ಳಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ, ಲೋಕೋಪಯೋಗಿ ಇಲಾಖೆಯ ಇ.ಇ. ಸುಭಾಷ ಬಿರಾದಾರ, ಡಿ.ಎಚ್.ಓ ಡಾ.ಶರಬಸಪ್ಪ ಕ್ಯಾತನಾಳ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.


