ಕಲಬುರಗಿ: ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಹಾಗೂ ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ನೇಮಕ ಸಭೆ ನಡೆಯಿತು.
ನಗರದ ಜಗತ್ ವೃತ್ತದ ಬಳಿ ಇರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಅದೇ ಆವರಣದಲ್ಲಿ ದಲಿತ ಸೇನೆಯ ಕಾಳಗಿ ತಾಲೂಕಿನ ಅಧ್ಯಕ್ಷರಾಗಿ ಕತ್ತಲಪ್ಪ ಅಂಕ್ಕನ, ದಲಿತ ಸೇನೆಯ ಕಾರ್ಯಾಧ್ಯಕ್ಷರಾಗಿ ಮಾರುತಿ ತೇಗಲತ್ತಿಪ್ಪಿ, ಹಾಗೂ ಕಾಳಗಿ ತಾಲೂಕಿನ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಆಕಾಶ್ ಹೆಬ್ಬಾಳ ಅವರನ್ನು ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ದಲಿತ ಸೇನೆಯ ವತಿಯಿಂದ ಸನ್ಮಾನಿಸಿ ಸಂಘಟನೆಗೆ ಬರಮಾಡಿಕೊಂಡರು.
ನೇಮಕಗೊoಡ ನೂತನ ಪದಾಧಿಕಾರಿಗಳಿಗೆ ದಲಿತ ಸೇನೆಯ ಸಿದ್ದಾಂತಕ್ಕೆ ತಕ್ಕಂತೆ ಜನರ ನೋವಿಗೆ ಶೋಷಣೆಗೆ ಸ್ಪಂದಿಸುವ ಕೆಲಸ ಮಾಡುವಂತೆ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಸಲಹೆ ನೀಡಿದ್ದಾರೆ.
ಬಳಿಕ ಮಾತನಾಡಿದ ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ದಲಿತ ಸೇನೆಯ ಕಾರ್ಯಕರ್ತರು ಯಾವಾಗಲೂ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಸಂತೋಷ ಪಾಳಾ, ಅಶ್ಫಾಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


